ಸಮಾಜಸೇವೆಗೆ ಪ್ರೇರಣೆಯಾದ ಮಹಿಳೆ
ಈ ಘಟನೆ ತುಂಬಾ ವರ್ಷಗಳ ಹಿಂದೆ ಗುಜರಾತಿನ ಆನಂದನಲ್ಲಿ ನಡೆ ಯಿತು. ರೈಲು ನಿಲ್ದಾಣಕ್ಕೆ ಒಬ್ಬ ಮಹಿಳೆ ಭಾರವಾದ ಪೆಟ್ಟಿಗೆ ಹಿಡಿದು ಬರಿಗಾಲಲ್ಲಿ ನಡೆದು ಬರುತ್ತಿದ್ದಳು. ಆದರೆ ಬಿಸಿಲಿನ ಪ್ರಖರತೆ ಮತ್ತು ಕಾದ ನೆಲ ಹಾಗೂ ಪೆಟ್ಟಿಗೆಯ ಭಾರಕ್ಕೆ ಕುಸಿದು ಆಕೆ ಮೂರ್ಛೆ ಹೋದಳು. ಅವಳ ನೆರವಿಗೆ ಯಾರೂ ಬರಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಯುವಕನಿಗೆ ಕರುಳು ಚುರಕ್ಕೆನಿಸಿತು. ತನಗೊಬ್ಬ ಸಹೋದರಿಯಿದ್ದು, ಹೀಗೆ ಮೂರ್ಛೆ ಹೋಗಿದ್ದರೆ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿಕೊಂಡು, ಆ ಮಹಿಳೆಯ ನೆರವಿಗೆ ಧಾವಿಸಿದ. ನೆರಳಿಗೆ ಕರೆದೊಯ್ದು ಉಪಚರಿಸಿದ. ಅವಳ ಪೆಟ್ಟಿಗೆಯನ್ನು ಹೊತ್ತೊಯ್ದು ರೈಲು ಡಬ್ಬಿಯಲ್ಲಿಟ್ಟು ನೆರವಾದ. ಅವನಿಗೆ ಆಗ ಅನ್ನಿಸಿತು-"ಹೀಗೆ ಪಾದರಕ್ಷೆಯಿಲ್ಲದೆ ಅದೆಷ್ಟು ಮಂದಿ ಬಿಸಿಲಿನ ತಾಪಕ್ಕೆ ಗುರಿಯಾಗುತ್ತಾರೋ?" ಎಂದು. ಅಂತಹವರ ಬಗ್ಗೆ ಕನಿಕರ ಮೂಡಿತು. ಮನೆಯಲ್ಲಿದ್ದ ಎಲ್ಲ ಪಾದರಕ್ಷೆಗಳನ್ನು ಒಂದು ಚೀಲಕ್ಕೆ ತುಂಬಿಕೊಂಡ. ತನ್ನ ಗೆಳೆಯರಲ್ಲಿ, ಪರಿಚಿತರಲ್ಲಿ ಬೇಡಿ ಅವರ ಮನೆಯಲ್ಲಿದ್ದ ಉಪಯೋಗಿಸಲು ಸಾಧ್ಯವಿದ್ದ ಪಾದರಕ್ಷೆಗಳನ್ನು ಸಂಗ್ರಹಿಸಿದ. ಅವುಗಳಲ್ಲಿ ಕೆಲವನ್ನು ರಿಪೇರಿ ಮಾಡಿಸಿಕೊಂಡು ರಸ್ತೆಯ ಪಕ್ಕದಲ್ಲಿ ಕುಳಿತ. ಪಾದರಕ್ಷೆಯಿಲ್ಲದೆ ಓಡಾಡುತ್ತಿದ್ದ ವ್ಯಕ್ತಿಗಳನ್ನು ಕರೆದು ಅವರಿಗೆ ಅವನ್ನು ನೀಡುತ್ತಿದ್ದ. ಇವನ ಸೇವಾಕಾರ್ಯವನ್ನು ನೋಡಿ ಅನೇಕರು ಇವನಿಗೆ ಪಾದರಕ್ಷೆಗಳನ್ನು ನೀಡಿ, ಸಹಕರಿಸಿದರು. ಹೀಗೆ ಸಹಸ್ರಾರು ಜನರಿಗೆ ಪಾದರಕ್ಷೆಗಳನ್ನು ನೀಡಿ ನೆರವಾದ. ಆತನೇ ಗುಜರಾತಿನ ಪ್ರಸಿದ್ಧ ಸಮಾಜಸೇವಕ ಮೋತಿಭಾಯಿ ಅಮೀನ್. 1873 ರಿಂದ 1939ರವರೆಗೆ ಜೀವಿಸಿದ್ದ ಅಮೀನ್ ಇಷ್ಟಕ್ಕೇ ತೃಪ್ತನಾಗಲಿಲ್ಲ. ಜನರ ಅಜ್ಞಾನ, ಅಂಧಾನುಕರಣೆ ಮತ್ತು ಮೂಢನಂಬಿಕೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿ ಚಾರೋಟಾರ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ. ಆ ಮೂಲಕ ಜನರನ್ನು ಶಿಕ್ಷಿತರನ್ನಾಗಿ ಮಾಡುವ ಉದ್ದೇಶ ಅವನದು. ಮಹಾತ್ಮ ಗಾಂಧಿಯವರೂ ಸಹ ಅಮೀನ್ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಅಲ್ಲದೆ ಗುಜರಾತಿನ ಆನಂದ್ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಗ್ರಂಥಾಲಯಗಳನ್ನು ತೆರೆದು ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದ್ದು ಸಹ ಇವರ ಅದ್ವಿತೀಯ ಸಾಧನೆಯಾಗಿದೆ. ಇಂದಿಗೂ ಸಹ ಅಮೀನ್ ಸ್ಥಾಪಿಸಿದ ವಿದ್ಯಾಲಯಗಳು ಮತ್ತು ಪುಸ್ತಕ ಭಂಡಾರಗಳು ಜನರ ಸೇವೆಯಲ್ಲಿ ತೊಡಗಿವೆ. ಆತನ ಸೇವೆಯ ದ್ಯೋತಕವಾಗಿ ಇಂದಿಗೂ ಗುಜರಾತ್‌ನಲ್ಲಿ ಗ್ರಂಥಾಲಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹೀಗೆ ಒಬ್ಬ ಮಹಿಳೆ ಒಬ್ಬ ಸಾಧಾರಣ ವ್ಯಕ್ತಿಯನ್ನು ಸಮಾಜಸೇವೆಗೆ ತೊಡಗಲು ಪ್ರೇರೇಪಣೆ ಮಾಡಿದ್ದು ಒಂದು ಅಪರೂಪದ ಸಂಗತಿಯಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

