ಸಂಪಾದಕೀಯ

ಬೀದಿನಾಯಿಗಳು ಬದುಕಿಸುವ ಎಲೀನಾ

Published On :

ನಮ್ಮಲ್ಲಿ ಬೀದಿ ನಾಯಿಗಳದ್ದೇ ಒಂದು ಸಮಸ್ಯೆ. ಎಲ್ಲೆಂದರಲ್ಲಿ ತಿರುಗುವ ಈ ನಾಯಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ, ಎಲ್ಲರಿಂದ ಹಚಾ ಹಚಾ ಅನ್ನಿಸಿಕೊಂಡು ಜೀವಿಸುವುದನ್ನು ನೋಡಿದರೆ ಕರುಳು ಮಿಡಿಯುತ್ತದೆ. ಇಂತಹ ನಾಯಿಗಳ ಶುಶ್ರೂಷೆ ಮಾಡುವ ಒಬ್ಬ ಅಪರೂಪದ ವ್ಯಕ್ತಿ ನಮ್ಮ ದಕ್ಷಿಣ ಭಾರತದಲ್ಲಿಯೇ ಇದ್ದಾರೆ. ದೂರದ ಇಂಗ್ಲೆಂಡಿನಿಂದ 30 ವರ್ಷಗಳ ಹಿಂದೆ ಭಾರತಕ್ಕೆ ಬಂದ ಎಲೀನಾ ಎಂಬ ಪಶುವೈದ್ಯೆ  ದಾದಿಯೊಬ್ಬಳು ಅನಿಮಲ್ ಎಯ್ಡ್ ಸಂಸ್ಥೆಯ ಸ್ವಯಂಸೇವಕಿಯಾಗಿ ಉದಯಪುರಕ್ಕೆ ಬಂದು ನೆಲೆಸಿದಳು. ಅಲ್ಲಿ ಒಂದೂವರೆ ವರ್ಷ ಸೇವೆ ಸಲ್ಲಿಸಿ, ಇತಿಹಾಸ ಪ್ರಸಿದ್ಧ ಮಾಮಲ್ಲಪುರಂಗೆ ಬಂದಳು. ಅಲ್ಲಿ ಬೀದಿನಾಯಿಗಳ ರಕ್ಷಣೆಗಾಗಿ ಕೆಲಸ ಮಾಡುವ ಕೇರ್ ಸಂಸ್ಥೆಯನ್ನು 2006ರಲ್ಲಿ ಸ್ಥಾಪಿಸಿ ಅದರ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಸಾಮಾನ್ಯವಾಗಿ ಬೀದಿನಾಯಿಗಳಿಗೆ ರಕ್ಷಣೆ ಇರುವುದಿಲ್ಲ. ಎಲ್ಲೋ ಆಹಾರವನ್ನು ಸೇವಿಸುತ್ತವೆ. ಯಾರ ಮನೆಬಾಗಿಲಿಗಾದರೂ ಹೋದರೆ ಅವುಗಳನ್ನು ಓಡಿಸುವವರೇ ಹೆಚ್ಚು. ಕೆಲವರಂತೂ ಕಲ್ಲು ಹೊಡೆದು ಗಾಯಗೊಳಿಸುವುದೂ ಉಂಟು. ಇದರ ಜೊತೆಗೆ ಅವುಗಳು ಅನಾರೊಗ್ಯದಿಂದ, ವಾಹನಕ್ಕೆ ಸಿಕ್ಕು ಕಾಲು ಕಳೆದುಕೊಂಡಾಗ, ವಯಸ್ಸಾದಾಗ, ಮೈಯೆಲ್ಲ ವ್ರಣಮಾಡಿಕೊಂಡಾಗ ಯಾರೂ ಅದನ್ನು ಹತ್ತಿರ ಸೇರಿಸುವುದಿಲ್ಲ. ಇಂತಹ ನಾಯಿಗಳನ್ನು ಆರೈಕೆ ಮಾಡಿ, ಆಹಾರ ನೀಡಿ, ರೋಗನಿರೋಧಕ ಚುಚ್ಚುಮದ್ದನ್ನು ನೀಡಿ, ಅವಶ್ಯಕತೆ ಬಿದ್ದರೆ ಚಿಕಿತ್ಸೆ ನೀಡಿ ಕಾಪಾಡುವ ಎಲೀನಾ ತನ್ನ ಜೀವನವನ್ನೇ ಬೀದಿನಾಯಿ ಗಳಿಗಾಗಿ ಮುಡುಪಾಗಿಟ್ಟಿರುವುದು ಗಮನಾರ್ಹ. ಅವಳು ಬೀದಿಗೆ ಬಂದಳೆಂದರೆ ಬೀದಿ ನಾಯಿಗಳು ಕಿನ್ನರ ಜೋಗಿಯ ಹಿಂದೆ ಹೋಗುವ ಇಲಿಗಳ ಹಾಗೆ ಬಾಲ ಅಲ್ಲಾಡಿಸುತ್ತಾ ಬರುತ್ತವೆ. ಪ್ರತಿ ನಾಯಿಯನ್ನೂ ಬಲ್ಲ ಎಲೀನಾಳನ್ನು ಕಂಡರೆ ಅವುಗಳಿಗೆಲ್ಲಾ ಅಕ್ಕರೆ. ಗಾಯಗೊಂಡ, ಕಜ್ಜಿ ಹತ್ತಿದ, ಅನಾರೋಗ್ಯದ ನಾಯಿಗಳಿಗೋಸ್ಕರವೇ ಒಂದು ಪುಟ್ಟ ಕ್ಲಿನಿಕ್ ಪ್ರಾರಂಭಿಸಿದ್ದಾಳೆ. ಅದರಲ್ಲಿ ಗ್ರಾಮದ ಸಾಕುಪ್ರಾಣಿಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಬೀದಿನಾಯಿಗಳಿಗೆ ಯಾವುದೋ ಕಸದ ತೊಟ್ಟಿಯೋ, ಚರಂಡಿಯೋ ಆಹಾರ ನೀಡುವ ತಾಣವಾಗಿರುತ್ತದೆ. ಆದರೆ ಎಲೀನಾ ಅವುಗಳೊಡನೆ ಪ್ರೀತಿಯ ಒಡನಾಟ ಇಟ್ಟುಕೊಂಡು ಅವುಗಳಿಗೆ ಕ್ಲುಪ್ತ ಸಮಯದಲ್ಲಿ ಆಹಾರ ನೀಡಿ, ಪ್ರತಿವರ್ಷ ನೂರಾರು ನಾಯಿಗಳನ್ನು ರಕ್ಷಿಸುತ್ತಾಳೆ. ಬ್ಲೂ ಕ್ರಾಸ್ ಆಫ್ ಇಂಡಿಯಾ ಸಂಸ್ಥೆಯ ಒಡಗೂಡಿ, 600ಕ್ಕೂ ಹೆಚ್ಚು ಬೀದಿನಾಯಿಗಳಿಗೆ ರೇಬೀಸ್ ಚುಚ್ಚುಮದ್ದನ್ನೂ ನೀಡಿದ್ದಾಳೆ ಮತ್ತು ಗರ್ಭನಿರೋಧಕ ಶಸ್ತ್ರ ಚಿಕತ್ಸೆಯನ್ನೂ ಮಾಡಿಸಿದ್ದಾಳೆ. ಸುತ್ತಮುತ್ತಲ ಹಳ್ಳಿಯವರು ದಿನಕ್ಕೆ ಕನಿಷ್ಠ ಐದು ನಾಯಿಗಳಿಗಾದರೂ ಚಿಕಿತ್ಸೆಯ ಅವಶ್ಯಕತೆಯಿರುವುದನ್ನು ಎಲೀನಾ ಗಮನಕ್ಕೆ ತರುತ್ತಾರೆ. ಆಗೆಲ್ಲ ಎಲೀನಾ ಅಲ್ಲಿಗೇ ಹೋಗಿ ಆ ನಾಯಿಗೆ ಚಿಕಿತ್ಸೆ ಕೊಟ್ಟು ಬರುತ್ತಾಳೆ. ಅವಳ ಸೇವಾಕಾರ್ಯವನ್ನು ನೋಡಿದ ಜನ ಧಾರಾಳವಾಗಿ ದೇಣಿಗೆಯನ್ನು ನೀಡಿ ಆಕೆಗೆ ಪ್ರೋತ್ಸಾಹಿಸುತ್ತಿದ್ದಾರೆ. ತನ್ನ ಕೆಲಸದಲ್ಲಿ ನೆರವಾಗಲು ಆಕೆಗೆ ಯಾವ ಸಿಬ್ಬಂದಿಯೂ ಇಲ್ಲ. ಏಕಾಂಗಿಯಾಗಿ ಈ ಕೆಲಸವನ್ನು ಮಾಡುತ್ತಿರುವ ಎಲೀನಾಗೆ ಇರುವುದಕ್ಕೆ ಒಂದು ಸೂರೂ ಇಲ್ಲ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.