ಎಸ್. ಕರಿಯಪ್ಪನವರ ಶಿಕ್ಷಣ ಕ್ರಾಂತಿ
ಸ್ವಾತಂತ್ರ್ಯ ಪೂರ್ವದ ಕಾನಕಾನಹಳ್ಳಿ ಈಗ ಕನಕಪುರವಾಗಿದೆ. ಇದು ಒಂದು ಕಾಲಕ್ಕೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರದೇಶವಾಗಿತ್ತು. ಶಿಕ್ಷಣವಂತೂ ಕೆಲವೇ ಕೆಲವರ ಸ್ವತ್ತಾಗಿತ್ತು. ಇಂತಹ ಸಮಯದಲ್ಲಿ ಇದೇ ತಾಲೂಕಿನಲ್ಲಿ ಜನಿಸಿದ ಎಸ್.ಕರಿಯಪ್ಪನವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಇಡೀ ತಾಲೂಕಿಗೆ ಬಿ.ಎ. ಪರೀಕ್ಷೆಯಲ್ಲಿ ಪ್ರಥಮರಾಗಿ ತೇರ್ಗಡೆ ಹೊಂದಿದರು. ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ವಾಡಿಯಾ ಇವರ ಮೆಚ್ಚಿನ ಗುರುಗಳಾಗಿದ್ದರು. ಮೈಸೂರಿನಲ್ಲಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಪ್ರಸಿದ್ಧರಾಗಿದ್ದರು. ಅವರು ವಿದ್ಯಾರ್ಥಿನಿಲಯಗಳು, ಶಾಲೆಗಳು, ಕಾಲೇಜು ಮತ್ತು ಗಾಂಧಿ ಫಾರಂ ಸ್ಥಾಪಿಸಿ ಆ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ನೆರವಾದರು. ಎರಡು ವರ್ಷ ಪ್ರಜಾಪ್ರತಿನಿಧಿ ಸಭೆಯ ಪ್ರತಿನಿಧಿಯಾಗಿದ್ದರು.
1934ರಲ್ಲಿ ಗಾಂಧೀಜಿ, ರಾಜಾಜಿ ಮುಂತಾದ ನಾಯಕರು ಕಾನಕಾನಹಳ್ಳಿಗೆ ಭೇಟಿನೀಡಿ ಎಲ್ಲರೂ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದಾಗ ಕರಿಯಪ್ಪನವರ ಮನದಲ್ಲಿ ಮಿಂಚಿನ ಸಂಚಾರವಾಗಿ ಇಡೀ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟರು. ಶಿಕ್ಷಣ ಪ್ರಚಾರವನ್ನು ಪವಿತ್ರ ಕಾರ್ಯವೆಂದು ನಂಬಿದ್ದರು. ಅದಕ್ಕಾಗಿ 1941ರಲ್ಲಿಯೇ ಗ್ರಾಮ ವಿದ್ಯಾ ಪ್ರಚಾರಕ ಸಂಘವನ್ನು ಸ್ಥಾಪಿಸಿ ಪ್ರೌಢಶಾಲೆಯೊಂದನ್ನು ಬಡವಿದ್ಯಾರ್ಥಿಗಳಿಗೆಂದೇ ತೆರೆದರು.
ಅದೀಗ ಹೆಮ್ಮರವಾಗಿ ಬೆಳೆದು ಅನೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾ ಪ್ರಸಾರದಲ್ಲಿ ನಿರತವಾಗಿದೆ. ಕರನಿರಾಕರಣೆ ಚಳವಳಿ, ಭಾರತ ಬಿಟ್ಟು ತೊಲಗಿ ಚಳವಳಿ, ಶಿವಪುರ ಧ್ವಜ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು. ನಂತರ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಭಾಗವಹಿಸಿ ಜೈಲಿಗೆ ಹೋಗಿದ್ದರು. 1937ರಲ್ಲಿ ಇವರನ್ನು ರಾಜದ್ರೋಹ ಅಪಾದನೆಯ ಮೇಲೆ ಬಂಧಿಸಿ ರಾಮನಗರ ಜೈಲಿಗೆ ಕಳುಹಿಸಲಾಯಿತು. ಆಗ ಚಳವಳಿಯಿಂದ ಹಿಂದೆ ಸರಿದು, ಮುಚ್ಚಳಿಕೆ ಬರೆದು ಕೊಟ್ಟರೆ ಕ್ಷಮಿಸುವುದಾಗಿ ತಿಳಿಸಲಾಯಿತು. ಆಗ ಕರಿಯಪ್ಪನವರು ನನಗೆ ಗುಂಡಿಟ್ಟರೂ ಚಳವಳಿಯಿಂದ ಹಿಂದೆ ಸರಿಯಲಾರೆ ಎಂದು ಉತ್ತರಿಸಿದರು. ಸ್ವಾತಂತ್ರ್ಯಾನಂತರ ನಾಲ್ಕುಬಾರಿ ವಿಧಾನಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಕೆ.ಸಿ.ರೆಡ್ಡಿ ಮತ್ತು ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಸಚಿವರಾಗಲು ಕರೆ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿದ ಸರಳಜೀವಿ. ಶ್ರೀರಾಮನವಮಿಯಂದು ಜನಿಸಿ ರಾಮನವಮಿಯಂದೇ ಮರಣಿಸಿದ ಕರಿಯಪ್ಪನವರು ಅಜರಾಮರಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

