ಸಂಪಾದಕೀಯ

ಭಾರತವನ್ನು ಪ್ರೀತಿಸಿದ ರಿಚರ್ಡ್ ಕೈಥಾನ್

Published On :

ರೆವರೆಂಡ್ ರಾಲ್ಫ್ ರಿಚರ್ಡ್ ಕೈಥಾನ್ ದೂರದ ಅಮೆರಿಕದಿಂದ ಕ್ರೈಸ್ತ ಪಾದ್ರಿಯಗಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೆ ಬಂದಾಗ ಅವರಿಗೆ ಕೇವಲ ಹದಿನಾಲ್ಕು ವರ್ಷ. ಭಾರತದ ಜನತೆಗೆ ಬೇಕಾಗಿರುವುದು ಕೇವಲ ಒಣ ಬೋಧೆಯಲ್ಲ, ಬದಲಾಗಿ ಸ್ವಾತಂತ್ರ್ಯ, ಆಹಾರ ಮತ್ತು ಅಜ್ಞಾನದಿಂದ ಮೋಕ್ಷ ಎಂಬುದನ್ನರಿತರು. ಮಾನವತೆಯೆಲ್ಲ ಒಂದೇ, ಇದನ್ನರಿತು ದುಡಿಯಬೇಕು ಎಂಬ ಕವಿ ರವೀಂದ್ರರ ವಾಣಿ ಅವರಿಗೆ ದಾರಿದೀಪವಾಯಿತು. ಗಾಂಧೀಜಿಯವರ ಕಟ್ಟಾ ಅಭಿಮಾನಿಯಾಗಿ, ಸದಾ ಬಿಳಿ ಜುಬ್ಬಾ ಪೈಜಾಮ ಧರಿಸಿ ಜನಸೇವೆಗಿಳಿದರು. ಸೈಕಲ್ ಮೇಲೆ ಕುಳಿತು ಬೆಂಗಳೂರಿನಲ್ಲಿ ಸಂಚರಿಸಿ ತಮ್ಮ ಸರಳ ನಡತೆ, ವಿನಯ ಮತ್ತು ನಮ್ರತೆಯಿಂದ ಎಲ್ಲರ ಹೃದಯಕ್ಕೆ ಹತ್ತಿರವಾಗಿದ್ದರು. ಬೆಂಗಳೂರಿನಲ್ಲಿ ಆನಂದಾಶ್ರಮವನ್ನು ಸ್ಥಾಪಿಸಿ ತುಂಬಾ ಸರಳ ಜೀವನ ನಡೆಸುತ್ತಿದ್ದರು. ಅವರ ಊಟ ಕೇವಲ ಕಾಯಿಪಲ್ಲೆಗಳನ್ನು ಹೊಂದಿತ್ತು. ಅವರು ಶುದ್ಧ ಸಸ್ಯಾಹಾರಿಗಳಾಗಿದ್ದರು. ಶಾಲೆ, ಆಸ್ಪತ್ರೆಗಳನ್ನು ಸ್ಥಾಪಿಸಿ ಬಡವರಿಗೆ ನೆರವಾಗಿದ್ದರು. ಅವರ ಇಬ್ಬರು ಮಕ್ಕಳಿಗೆ ಕಮಲಾ ಮತ್ತು ಕರಮ್‌ಚಂದ್ ಎಂದೇ ಹೆಸರಿಟ್ಟಿದ್ದರು. ಮನೆಯಲ್ಲಿ ಬಿಡುವಿದ್ದಾಗ ತಕಲಿಯಿಂದ ನೂಲುವುದು ಅವರ ಕೈಂಕರ್ಯಗಳಲ್ಲಿ ಒಂದಾಗಿತ್ತು. ಅವರು ಮಲಬಾರಿನಲ್ಲಿ ಮತ್ತು ಮೈಸೂರಿನಲ್ಲಿ ಮಾಡಿದ ಮೂಕ ಸೇವಾಕಾರ್ಯ ಯಾವೊಂದು ಪತ್ರಿಕೆಯವರ ಗಮನ ಸೆಳೆಯಲಿಲ್ಲ. ಅದು ಅವರಿಗೆ ಬೇಕೂ ಇರಲಿಲ್ಲ. ಆದರೆ ಹರಿಜನ ಪತ್ರಿಕೆ ಮಾತ್ರ ಅವರ ಭಾರತೀಯತೆಯನ್ನು ಮೆಚ್ಚಿ ಲೇಖನವೊಂದನ್ನು ಪ್ರಕಟಿಸಿತ್ತು.
ಅವರ ಪತ್ನಿ ಡಾ.ಮಿಲ್‌ಡ್ರೆಡ್ ಕೈಥಾನ್ ಸಹ ಸೇವಾದೀಕ್ಷೆ ಪಡೆದು ಜನಸಾಮಾನ್ಯರ ಸೇವೆಯಲ್ಲಿ ನಿರತರಾದರು. ಈ ದಂಪತಿ ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಉತ್ತೇಜನ ನೀಡುತ್ತಿರುವುದನ್ನು ಗಮನಿಸಿ ಅವರು ಮಲಬಾರು, ಮೈಸೂರು, ಮದ್ರಾಸು ಎಲ್ಲಿಗೇ ಹೋದರೂ ಅವರನ್ನು ಬ್ರಿಟಿಷ್ ಸರ್ಕಾರ ಇರಗೊಡಲಿಲ್ಲ. ಅಲ್ಲದೆ ಸ್ವದೇಶಿ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿ 1944ರಲ್ಲಿ ದೇಶಬಿಟ್ಟು ತೆರಳುವಂತೆ ಆಜ್ಞೆ ಮಾಡಿತು. ಆಜ್ಞೆಯನ್ನು ಪರಿಪಾಲಿಸದೆ ಇದ್ದಾಗ ಕೈಥಾನ್ ಕುಟುಂಬವನ್ನು ಬಲವಂತವಾಗಿ ಅಮೆರಿಕಕ್ಕೆ ಗಡೀಪಾರು ಮಾಡಿತು. ಹೋಗುವ ಮುನ್ನ ಕಣ್ದುಂಬಿಕೊಂಡ ಅವರು "ನನ್ನ ಹುಟ್ಟುನಾಡು ಅಮೆರಿಕ. ಒಲಿದ ನಾಡು ಭಾರತ. ಅಮೆರಿಕದಲ್ಲಿದ್ದರೂ ನನ್ನ ಮನಸ್ಸು ಇಲ್ಲೇ ಇರುತ್ತದೆ. ಬಹುಬೇಗ ಸ್ವತಂತ್ರ ಭಾರತಕ್ಕೆ ಮರಳುತ್ತೇನೆ" ವಿದಾಯದ ನುಡಿಗಳನ್ನಾಡಿದಾಗ ಅಲ್ಲಿದ್ದ ಎಲ್ಲರ ಕಣ್ಣಂಚಿನಲ್ಲಿ ನೀರಾಡಿತು. ಅವರು ಮಾತುಕೊಟ್ಟಂತೆ ದೇಶ ಸ್ವತಂತ್ರವಾದಾಗ ಭಾರತಕ್ಕೆ ಮತ್ತೆ ಮರಳಿಬಂದರು. ಆದರೆ ಅವರ ಕನಸಿನ ಭಾರತ ಮಾತ್ರ ಇನ್ನೂ ನಿರ್ಮಾಣವಾಗಿರಲಿಲ್ಲ.


-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.