ಸಂಪಾದಕೀಯ

ವಿದ್ಯಾರ್ಥಿಯ ಕ್ಷಮೆ ಕೋರಿದ ವೆಂಕಟನಾರಾಯಣಪ್ಪ

Published On :

ಬೆಳ್ಳಾವೆ ವೆಂಕಟನಾರಾಯಣಪ್ಪನವರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿಬೆಳೆಸಿದ ಗಣ್ಯರಲ್ಲಿ ಒಬ್ಬರು. ಬೆಂಗಳೂರಿನ ರಾಮಕೃಷ್ಣ ವಿದ್ಯಾರ್ಥಿನಿಲಯದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಶ್ರೀಯುತರು ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದರು. ಕಂಡ ತಪ್ಪನ್ನು ಕಟುವಾಗಿ ಟೀಕಿಸುತ್ತಿದ್ದ ಅವರ ಹೃದಯ ಕಷ್ಟದಲ್ಲಿರುವವರನ್ನು ಕಂಡಾಗ ಕರಗಿಹೋಗುತ್ತಿತ್ತು. ಕನ್ನಡಕ್ಕೆ ಸದ್ದಿಲ್ಲದೆ ದುಡಿದ, ವಿಜ್ಞಾನ ಸಾಹಿತ್ಯ ಸೃಷ್ಟಿಗೆ ಕನ್ನಡದಲ್ಲಿ ರಾಜಮಾರ್ಗ ನಿರ್ಮಿಸಿದ ಕೀರ್ತಿ ವೆಂಕಟನಾರಾಯಣಪ್ಪನವರಿಗೆ ಸಲ್ಲುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಕನ್ನಡ ನಿಘಂಟನ್ನು ಹೊರತಂದವರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಹಗಲು ರಾತ್ರಿ ಕೆಲಸ ಮಾಡಿ ಎಲ್ಲರ ಆದರಕ್ಕೆ ಪಾತ್ರರಾದವರು.
ಅದನ್ನು ನೋಡಿದವರು ದುಡ್ಡಿಲ್ಲ ಕಾಸಿಲ್ಲ. ಇಷ್ಟು ದುಡಿಯುತ್ತಾರಲ್ಲಾ ಎಂದು ಆಶ್ಚರ್ಯ ಪಡುತ್ತಿದ್ದರು. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ನಡೆದ ಒಂದು ಘಟನೆ ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ವೆಂಕಟನಾರಾಯಣಪ್ಪನವರು ತಲ್ಲೀನತೆಯಿಂದ ಪಾಠ ಮಾಡುತ್ತಿರುವಾಗ ಒಬ್ಬ ವಿದ್ಯಾರ್ಥಿಯ ತಪ್ಪು ಕಂಡು ಅವರಿಗೆ ತುಂಬಾ ಸಿಟ್ಟುಬಂತು. ಕೂಡಲೇ ಬೋರ್ಡ್ ಒರೆಸುವ ಬಟ್ಟೆ ತೆಗೆದು ಆ ವಿದ್ಯಾರ್ಥಿಯ ಮುಖದ ಮೇಲೆಸೆದರು. ಬಟ್ಟೆಯಲ್ಲಿದ್ದ ಸುಣ್ಣದಪುಡಿ ವಿದ್ಯಾರ್ಥಿಯ ಕಣ್ಣಿಗೆ ಬಿದ್ದು ಕಣ್ಣೀರು ಹೊಳೆಯಾಗಿ ಹರಿಯಿತು. ಪ್ರಾಧ್ಯಾಪಕರ ಸಿಟ್ಟು ಆರಿ ಪಾಠ ಮುಂದುವರೆಯಿತು. ಮನೆಗೆ ಹಿಂದಿರುಗಿದ ನಾರಾಯಣಪ್ಪನವರಿಗೆ ತರಗತಿಯಲ್ಲಿ ನಡೆದ ಘಟನೆ ಸ್ಮರಣೆಗೆ ಬಂತು. ತಾವು ಮಾಡಿದ್ದು ತಪ್ಪು ಎಂದು ಅವರಿಗನಿಸಿತು. ತಮ್ಮ ತಪ್ಪಿಗಾಗಿ ಆ ವಿದ್ಯಾರ್ಥಿಯ ಕ್ಷಮಾಪಣೆ ಕೋರಬೇಕೆಂದು ನಿರ್ಧರಿಸಿದರು. ಆಗ ಸರಿರಾತ್ರಿ. ಹಾಗನಿಸಿದ್ದೇ ತಡ, ಹೊತ್ತನ್ನೂ ಲೆಕ್ಕಿಸದೆ ಆ ವಿದ್ಯಾರ್ಥಿಯ ಮನೆಕಡೆ ನಡೆದೇ ಬಿಟ್ಟರು. ಮಧ್ಯರಾತ್ರಿಯಲ್ಲಿ ಬಾಗಿಲು ತಟ್ಟಿದ ಶಬ್ದ ಕೇಳಿ ಮನೆಯವರೆಲ್ಲಾ ಎದ್ದು ಬಂದು ನೋಡುತ್ತಾರೆ, ಬೆಳ್ಳಾವೆ ವೆಂಕಟನಾರಾಯಣಪ್ಪನವರು ನಿಂತಿದ್ದಾರೆ. ವಿದ್ಯಾರ್ಥಿಗೂ ಗಾಬರಿ, ತಮ್ಮ ಪ್ರಾಧ್ಯಾಪಕರು ಈ ಹೊತ್ತಿನಲ್ಲಿ ಏಕೆ ಬಂದರೋ ಎಂದು!
ಅವನ ಕೈಹಿಡಿದು ಮೃದುವಾಗಿ ಒತ್ತಿ ಅಂದು ತರಗತಿಯಲ್ಲಿ ನಡೆದ ಘಟನೆಗೆ ಕ್ಷಮಾಪಣೆ ಕೇಳಿಕೊಂಡರು. ಆ ಹುಡುಗ ತಮ್ಮ ಗುರುಗಳ ಮಾತು ಕೇಳಿ ಕರಗಿ ಹೋದ. ಅವನ ಕಣ್ಣುಗಳಲ್ಲಿ ಮತ್ತೆ ನೀರಾಡಿತು. ಆತ ಆಗಲೂ ಅತ್ತಿದ್ದ, ಆದರೆ ಬೇರೆ ಕಾರಣಕ್ಕಾಗಿ!

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.