ಸಗಾಯಂ ಎಂಬ ನಿಷ್ಠಾವಂತ ಅಧಿಕಾರಿ
ಉಬಗರಂ ಪಿಳ್ಳೈ ಸಗಾಯಂ ಎಂದರೆ ತಮಿಳುನಾಡಿನ ಎಲ್ಲರಿಗೂ ಚಿರ ಪರಿಚಿತರು. ಹಾಗಂತ ಅವರು ರಾಜಕಾರಣಿಯೇನೂ ಅಲ್ಲ. ಅವರೊಬ್ಬ ಜನಪ್ರಿಯ ಸರ್ಕಾರಿ ಅಧಿಕಾರಿ. ಜಿಲ್ಲಾಧಿಕಾರಿಯಾಗಿರುವ ಸಗಾಯಂ ಪ್ರಾಮಾಣಿಕ ಸೇವೆಗೆ ಹೆಸರಾದವರು. ಎಂದಿಗೂ ಎಂಜಲು ಕಾಸಿಗಾಗಿ ಕೈಯೊಡ್ಡದೆ, ನಿಷ್ಠೆಯಿಂದ ಕೆಲಸ ಮಾಡುವ ಇವರು ಯಾವುದೇ ಜವಾಬ್ದಾರಿ ವಹಿಸಿದರೂ ಸಹ ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುತ್ತಾರೆ. ಹೀಗಾಗಿ ತಮ್ಮ ಇಪ್ಪತ್ತು ವರ್ಷಗಳ ಸೇವೆಯಲ್ಲಿ ಹದಿನೆಂಟು ಬಾರಿ ವರ್ಗಾವಣೆಗೆ ಗುರಿಯಾಗಿದ್ದಾರೆ! ಮಧುರೈನ ಜಿಲ್ಲಾಧಿಕಾರಿಯಾಗಿದ್ದಾಗ ಸ್ಥಳೀಯ ರಾಜಕಾರಣಿಗಳು ಮತ್ತು ಪೋಲೀಸರಿಗೆ ಕಾಲಕಾಲಕ್ಕೆ ಸಲ್ಲಿಕೆಯಾಗುತ್ತಿದ್ದ ಹಫ್ತಾವನ್ನು ನಿಲ್ಲಿಸಿದರು. ಕಾಂಚೀಪುರಂನಲ್ಲಿ ರೆವಿನೂ ಅಧಿಕಾರಿಯಾಗಿದ್ದಾಗ ಮರಳು ಮಾಫಿಯಾವನ್ನು ನಿರ್ಮೂಲನೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದರು. ಚೆನ್ನೈನಲ್ಲಿ 200 ಕೋಟಿ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಪ್ರಭಾವಿಗಳಿಂದ ವಶಪಡಿಸಿಕೊಂಡು ಸರ್ಕಾರಕ್ಕೆ ಮರಳಿಸಿದ ಧೀಮಂತ ಅಧಿಕಾರಿ. ಇವರಿಗೆ ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ಆದರ್ಶ. ಒಬ್ಬ ಬಡ ರೈತನ ಮಗನಾಗಿ ಜನಿಸಿದ ಸಗಾಯಂ ಸರ್ಕಾರಿ ಶಾಲೆಯಲ್ಲಿ ಕಲಿತು, ನಂತರ ಪದವೀಧರನಾಗಿ, ಕಾನೂನು ಪದವಿಯನ್ನೂ ಪಡೆದು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಜನಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕೆಂಬ ನಿರ್ಧಾರ ಮಾಡಿದರು. ಲಂಚ ತಿರಸ್ಕರಿಸಿ, ತಲೆಯೆತ್ತಿ ನಡೆಯಿರಿ ಎಂಬುದು ಅವರ ಜೀವನ ಮಂತ್ರವಾಗಿದೆ. ಎಷ್ಟೇ ಒತ್ತಡ ಮತ್ತು ಬೆದರಿಕೆಯ ಕರೆ ಬಂದರೂ ಧೃತಿಗೆಡದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಸಗಾಯಂ ಕೆಲಸಕ್ಕೆ ಸೇರಿದ ದಿನ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಅವರ ನಿಷ್ಠೆ ಮತ್ತು ಬದ್ಧತೆ ಮಾತ್ರ ಬದಲಾಗಿಲ್ಲ. ಹೀಗಾಗಿ ಅವರನ್ನು ಸಾಮಾನ್ಯ ಜನರಂತೂ ತುಂಬ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಭ್ರಷ್ಟ ರಾಜಕಾರಣಿಗಳಿಗೆ ಮಣಿಯದ, ಲಂಚಕೋರರಿಗೆ ಸಿಂಹಸ್ವಪ್ನವಾಗಿರುವ ಸಗಾಯಂ ಕರ್ತವ್ಯ ನಿಷ್ಠೆಯಲ್ಲಿ ಎಲ್ಲರಿಗಿಂತ ಮುಂದೆ. ಅವರು ಒಮ್ಮೆ ಕಾರಿನಲ್ಲಿ ಕಚೇರಿಗೆ ಹೋಗುತ್ತಿರುವಾಗ ಯುವಕನೊಬ್ಬ ಬೈಕ್ ಸವಾರಿ ಮಾಡುತ್ತಾ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿದರು. ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ, ಆ ಹುಡುಕನನ್ನು ಹಿಡಿದು '24 ಗಂಟೆಯಲ್ಲಿ 10 ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕೆಂಬ' ಶಿಕ್ಷೆಯನ್ನು ನೀಡಿದರು! ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಂತೂ ಸ್ವತಃ ಕರುಣಾನಿಧಿ ಮಗ ಅಳಗಿರಿಯವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಾಗ ಅವರ ಮೇಲೆ ಉಗ್ರ ಕ್ರಮ ಕೈಗೊಂಡರು. ಇಡೀ ಚುನಾವಣೆ ಭ್ರಷ್ಟಾಚಾರ ರಹಿತವಾಗಿರುವಂತೆ ನೋಡಿಕೊಂಡು ಚುನಾವಣಾ ಆಯೋಗದ ಶ್ಲಾಘನೆಗೆ ಗುರಿಯಾದರು. ಒಮ್ಮೆ ಕೊಯಮತ್ತೂರಿನಲ್ಲಿ ಅಬಕಾರಿ ಜಿಲ್ಲಾಧಿಕಾರಿಯಾಗಿದ್ದಾಗ ಕಾನೂನು ಪ್ರಕಾರವೇ ಆರುನೂರಕ್ಕೂ ಹೆಚ್ಚು ಮದ್ಯದಂಗಡಿ ತೆರೆಯಲು ಅವಕಾಶವಿತ್ತು. ಪ್ರತಿ ಲೈಸೆನ್ಸಿಗೆ ಹತ್ತು ಸಾವಿರ ಲಂಚ ನೀಡಲು ಬಂದ ಬಾರ್ ಮಾಲೀಕರ ಸಂಘದ ಅಧ್ಯಕ್ಷನನ್ನು ಲಂಚ ನಿರೋಧ ಕಾಯ್ದೆಯ ಅಡಿಯಲ್ಲಿ ಬಂಧಿಸಲು ಆದೇಶಿಸಿದರು. ಇಂದಿಗೂ ಅವರ ಉಳಿತಾಯ ಖಾತೆಯಲ್ಲಿನ ಹಣ ಏಳುಸಾವಿರದ ಆಸುಪಾಸಿನಲ್ಲಿಯೇ ಇದೆ! ಅವರಿಗಿರುವ ಏಕೈಕ ಆಸ್ತಿಯೆಂದರೆ ಮಧುರೈನಲ್ಲಿ ಒಂಭತ್ತು ಲಕ್ಷ ರೂಪಾಯಿ ಮೌಲ್ಯದ ಒಂದು ಮನೆ ಮಾತ್ರ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

