ದನ ಕಳ್ಳತನ ನಿಲ್ಲಿಸಿ
ಪ್ರತಿನಿತ್ಯ ಗೋವಿನ ಹಾಲು ಹಾಗೂ ಹಾಲುತ್ಪನ್ನಗಳನ್ನು ಉಪಯೋಗಿಸದ ಮಂದಿಯೇ ಇಲ್ಲ. ಆದರೆ ಪ್ರೀತಿಯಿಂದ ಸಾಕಿದ ದನಕರುಗಳನ್ನು ನೇರವಾಗಿ ಹಟ್ಟಿಯಿಂದಲೇ ಕದ್ದು ಹೆಡೆಮುರಿ ಕಟ್ಟಿ ಸಾಗಿಸಿ, ಕತ್ತು ಕೊಯ್ಯುವ ಕಿರಾತಕ್ರಿಯೆಗೆ ನಮ್ಮೀ ಕರಾವಳಿ ಜಿಲ್ಲೆಗಳಲ್ಲಿ ಅಡೆತಡೆಯೇ ಇಲ್ಲ. ಇಂತಹ ನಿರಂತರ ಗೋಕಳ್ಳತನಕ್ಕೆ, ಗೋಹತ್ಯೆಗೆ ಯಾವುದೇ ಶಿಕ್ಷೆಯಿಲ್ಲ! ಬದಲಾಗಿ ಅದನ್ನು ತಡೆದವರೇ ತಪ್ಪಿತಸ್ಥರು ಎನ್ನುವ ಮಟ್ಟಿಗೆ ನಮ್ಮ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಮುಟ್ಟಿದೆ. ಸ್ಥಳೀಯ ಶಾಸಕರ, ಉಸ್ತುವಾರಿ ಸಚಿವರ ಕಣ್ಣೆದುರಲ್ಲೇ ಪಶುಸಂಗೋಪನೆಯೇ ಇನ್ನು ಅಸಾಧ್ಯ ಎನ್ನುವ ದಾರುಣ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾನೂನು ಸುವ್ಯವಸ್ಥೆಯನ್ನೇ ಭಂಜಿಸುವವರ ತುಷ್ಟೀಕರಣ ಧಾರಾಳವಾಗಿ ಸಾಗುತ್ತಿದೆ. ಸಮಗ್ರ ಸಮಾಜವೇ ಈ ಬಗ್ಗೆ ಜಾಗೃತಗೊಳ್ಳುವ ಅನಿವಾರ್ಯ ಒದಗಿದೆ. ಇದರ ಗಂಭೀರತೆಯನ್ನು ಇನ್ನಾದರೂಜನಪ್ರತಿನಿಧಿಗಳೆನಿಸಿದವರು ಅರಿತುಕೊಳ್ಳಲೇಬೇಕು.
ಅನಧಿಕೃತವಾಗಿ ಗೋಸಾಗಣೆ ಮಾಡುವವರಿಂದ, ಕಟುಕರ ಕತ್ತಿಯಿಂದ ರಕ್ಷಿಸಲ್ಪಟ್ಟು ಪೊಲೀಸ್ ಸ್ಟೇಷನ್ಗಳಿಂದ ಸರಬರಾಜುಗೊಂಡ ನೂರಾರು ಹಸು, ಕರುಗಳನ್ನು ರಕ್ಷಿಸುತ್ತಿರುವ ಗೋವನಿತಾಶ್ರಯ ಟ್ರಸ್ಟಿನ ವಿಶಾಲ ಗೋಶಾಲೆಯ ಪದಾಧಿಕಾರಿಯಾಗಿ, ನೈತಿಕ ಜವಾಬ್ದಾರಿಯಿಂದ ಅತ್ಯಂತ ಮನದೊಂದು ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಇಂತಹ ಗೋಶಾಲೆಗಳಿಗೆ ಪುಡಿಚಿಕ್ಕಾಸೂ ನೀಡದ ರಾಜ್ಯ ಸರ್ಕಾರ ಕನಿಷ್ಠ ದನಕರುಗಳನ್ನು ಸಾಕುವ ರೈತರ ಕಾರ್ಯಕ್ಕಾದರೂ ರಕ್ಷಣೆ ನೀಡಬಾರದೇ?
ಜನಪ್ರತಿನಿಧಿಗಳೆನಿಸಿದವರು ಇಂತಹ ದನಕಳ್ಳರನ್ನು ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುವ ಕೆಲಸ ತಕ್ಷಣ ಕೈಗೊಳ್ಳಲು ಯತ್ನಿಸಬಾರದೇ? ಮೂಕ ಪ್ರಾಣಿಗಳ ಮಾತ್ರವಲ್ಲ, ಮೂಕವೇದನೆಯನ್ನೂ ಅನುಭವಿಸುವ ಪಶುಸಂಗೋಪಕರ, ಅಂತೆಯೇ ಲಕ್ಷಾಂತರ ಗೋಪ್ರೇಮಿಗಳ ಮನದ ಅಳಲನ್ನು ಅರ್ಥೈಸಿಕೊಳ್ಳಬೇಕು. ಹದಗೆಟ್ಟಿರುವ ಕಾನೂನು ಪರಿಸ್ಥಿತಿಯನ್ನು ಬಿಗಿಗೊಳಿಸಿ, ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು. ಈ ಕರಾವಳಿ ತೀರದ ಅವ್ಯಾಹತ ಗೋಹತ್ಯೆಗೆ ತಡೆಯೊಡ್ಡುವ ದೃಢತೆಯ ಕಾರ್ಯ ಜನಪ್ರತಿನಿಧಿಗಳಿಂದ ಆಗಲಿ.
-ಡಾ. ಪಿ. ಅನಂತಕೃಷ್ಣ ಭಟ್, ಮಂಗಳೂರು
ಒಬಿಸಿ ಬ್ರಾಹ್ಮಣರು
ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೀಗೆ ಹೇಳಿದ್ದಾರೆ.
"ಬ್ರಾಹ್ಮಣರು ಹಾಗೂ ವೀರಶೈವ ಜಾತಿಗಳಲ್ಲಿನ ಬಡವರಿಗೂ ಮುಂದಿನ ದಿನಗಳಲ್ಲಿ ಸರ್ಕಾರಿ ಸವಲತ್ತು ಒದಗಿಸುವ ಚಿಂತನೆ ಇದೆ. ಎಲ್ಲ ಜಾತಿಯ ಬಡವರಿಗೂ ಸರ್ಕಾರದ ಸವಲತ್ತು ದೊರೆಯಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢ ಸಂಕಲ್ಪ."
ಈ ಚಿಂತನೆಯ ಬಗ್ಗೆ ಮಾನ್ಯ ಸಚಿವರು ಅಧಿಕಾರದ ಪಟ್ಟ ಏರಿದಾಗಿನಿಂದ ಹೇಳುತ್ತಲೇ ಇದ್ದಾರೆ. ಸ್ವಾಮಿ ನಮಗೆ ಚಿಂತನೆ ಬೇಡ. ಅನುಷ್ಠಾನ ಬೇಕು. ಇಂದಿಗೂ ಅಸಂಖ್ಯಾತ ಬ್ರಾಹ್ಮಣ, ವೀರಶೈವ ಬಡವರು, ಮಠಗಳ, ದಾಸೋಹಗಳಿಂದ ಉಸಿರಾಡುತ್ತಿದ್ದಾರೆ. ಮುಂದುವರಿದ ಜಾತಿಯಲ್ಲಿ ಜನಿಸಿದುದಕ್ಕಾಗಿ ನಿಂದಿಸಿಕೊಳ್ಳುತ್ತಿದ್ದಾರೆ!
ಹಾಲಿನ ಸಹಾಯಧನದಲ್ಲಿಯೂ ರಾಜಕೀಯ ಬೆರೆಸಿ ದಲಿತರಿಗೆ ಮಾತ್ರ ರೂ.2 ಹೆಚ್ಚಿನ ಸಹಾಯ ಧನ ಕೊಟ್ಟು ಉಳಿದವರಿಂದ ಅವರನ್ನು ಪ್ರತ್ಯೇಕಿಸುತ್ತಿರುವ ಸರ್ಕಾರದಿಂದ ಎಲ್ಲಾ ಜಾತಿಗಳ ಬಡವರಿಗೂ ಸವಲತ್ತು ದೊರೆಯುವ ಆಶ್ವಾಸನೆ ಖಂಡಿತ ಮರೀಚಿಕೆಯೇ ಸರಿ!
-ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

