ಜೀವನಕ್ಕೆ ಸ್ಫೂರ್ತಿಯಾದ ಜೇನು
ಮೋಚಾಹ ಬಿಹಾರ ರಾಜ್ಯದ ಮುಜಾಫರ್ ಜಿಲ್ಲೆಯ ಒಂದು ಅತ್ಯಂತ ಹಿಂದುಳಿದ ಕುಗ್ರಾಮ. ಅಲ್ಲಿಯ ದಲಿತ ಕುಟುಂಬಕ್ಕೆ ಸೇರಿದ ಬಾಲಕಿ ಅನಿತಾ ಖುಶ್ವಾಹ. ಕಿತ್ತುತಿನ್ನುವ ಬಡತನದಿಂದಾಗಿ ನಿರಕ್ಷರ ಕುಕ್ಷಿಗಳಾದ ತಂದೆ ತಾಯಿಗೆ ಮಗಳು ಶಾಲೆಗೆ ಹೋಗುವುದು ಇಷ್ಟವಿರಲಿಲ್ಲ. ಮಗಳನ್ನು ಕುರಿಕಾಯಲು ಕಳುಹಿಸುವ ಇರಾದೆ ಅವಳಪ್ಪನದು. ಬಾಲಕಿ ಅನಿತಾ ಶಾಲೆಗೆ ಹೋಗುವ ಮಕ್ಕಳನ್ನು ಆಸೆಯ ಕಂಗಳಿಂದ ನೋಡುತ್ತಾ ತನಗೆ ಆ ಭಾಗ್ಯವಿಲ್ಲವಲ್ಲಾ ಎಂದು ಕೊರಗುವುದೇ ಆಯಿತು. ಅಂತೂ ಆಕೆಯ ಹತ್ತನೇ ವಯಸ್ಸಿಗೆ ಅವಳ ತಂದೆ ಶಾಲೆಗೆ ಸೇರಿಸಿದ. ಹೇಗಾದರೂ ಮಾಡಿ ತಾನು ಹಣ ಸಂಪಾದಿಸಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ನಿರ್ಧರಿಸಿದಳು. ಅದಕ್ಕಾಗಿ ಅವಳು ಆರಿಸಿಕೊಂಡ ಉದ್ಯೋಗ ಜೇನು ಸಾಕಣೆ. ಜೇನು ಪೆಟ್ಟಿಗೆ ಮತ್ತು ರಾಣಿ ಜೇನು ಪಡೆಯಲು ಅವಳ ತಾಯಿ ಮೂರು ಸಾವಿರ ರು.ಸಾಲ ತಂದುಕೊಟ್ಟಳು. ಅನಿತಾ ಕೂಡ ಬಿಡುವಿನ ವೇಳೆಯಲ್ಲಿ ಪುಟ್ಟ ಮಕ್ಕಳಿಗೆ ಮನೆ ಪಾಠ ಹೇಳಿ ಪುಡಿಗಾಸು ಸಂಪಾದಿಸಿದಳು. ಅದರಲ್ಲಿ ಜೇನು ಸಾಕಣೆ ಪ್ರಾರಂಭಿಸಿ ಮೊದಲ ವರ್ಷವೇ ಐದು ಸಾವಿರ ರುಪಾಯಿ ಲಾಭ ಗಳಿಸಿದಾಗ ಆ ಬಾಲಕಿಗಾದ ಸಂತೋಷ ಅಷ್ಟಿಷ್ಟಲ್ಲ. ಹಂತಹಂತವಾಗಿ ನೂರು ಜೇನುಪೆಟ್ಟಿಗೆಗಳಲ್ಲಿ ಜೇನು ಸಂಗ್ರಹಿಸಿ, ಅದರಿಂದ ಬಂದ ಆದಾಯದಿಂದ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದಳು. ಇದೀಗ ಇಂಗ್ಲಿಷ್‌ನಲ್ಲಿ ಪದವಿಯನ್ನೂ ಪಡೆದಿದ್ದಾಳೆ. ತನ್ನ ಸಾಧನೆಗೆ ಜೇನ್ನೊಣಗಳೇ ಸ್ಫೂರ್ತಿ ಎಂದು ಹೇಳುವ ಅನಿತಾ, ಈ ಪುಟ್ಟ ಪುಟ್ಟ ಹುಳುಗಳೇ ಅವಿರತ ಶ್ರಮದಿಂದ ಜೇನು ಸಂಗ್ರಹಿಸುವ ಕಲೆಯನ್ನು ಬೆಳೆಸಿಕೊಂಡು ಸ್ವಾವಲಂಬಿಯಾಗಿರುವಾಗ ಮಾನವರಾದ ನಮ್ಮಿಂದ ಏಕೆ ಸಾಧ್ಯವಾಗದು ಎಂಬ ಪ್ರಶ್ನೆ ಅವಳದು. ರಾಜೇಂದ್ರ ಕೃಷಿ ವಿದ್ಯಾಲಯದಿಂದ ಕಳೆದ ಎರಡು ವರ್ಷಗಳಿಂದ ಅತ್ಯುತ್ತಮ ಜೇನು ಸಾಕಣೆಗಾಗಿ ಪ್ರಶಸ್ತಿ ಪಡೆದಿದ್ದಾಳೆ. ಅವಳ ಸಾಧನೆಯನ್ನು ಮೆಚ್ಚಿದ ಯೂನಿಸೆಫ್ ಇತ್ತೀಚೆಗೆ ಸ್ತ್ರೀ ಜಾಗೃತಿಗಾಗಿ ನೀಡಲಾಗುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬಡತನದ ವಿರುದ್ಧ ಸಮರ ಸಾರಲು ಶಿಕ್ಷಣವೊಂದೇ ಪ್ರಮುಖ ಅಸ್ತ್ರ ಎಂಬುದನ್ನು ತನ್ನ ಸ್ವಂತ ಅನುಭವದಿಂದ ಶೃತಪಡಿಸಿರುವ ಅನಿತಾ ಚಿಕ್ಕವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆ ಮಾಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾಳೆ. ಈಕೆಯ ಸಾಧನೆ ಇತರರಿಗೂ ಸ್ಫೂರ್ತಿಯಾಗಲೆಂದು ಆಕೆಯ ಯಶಸ್ಸಿನ ಕಥೆಯನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ತನ್ನ ಐದನೇ ತರಗತಿಯ ಪಠ್ಯಪುಸ್ತಕದಲ್ಲಿ ಪ್ರಕಟಿಸಿ ಗೌರವಿಸಿದೆ. ತನ್ನ ಇಡೀ ಜೀವನವನ್ನು ಸಮಾಜ ಸೇವೆ ಮತ್ತು ಶಿಕ್ಷಣ ಪ್ರಸಾರಕ್ಕೆ ಮೀಸಲಿಡಲು ಅನಿತಾ ನಿರ್ಧರಿಸಿದ್ದಾಳೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

