ಗಣ್ಯರಿಗೆ ಕಿರುಕುಳ ಬೇಡ
ವಿದೇಶಿ ಹಾಗೂ ಸ್ವದೇಶಿ ಉದ್ಯಮಗಳ ಪ್ರಮುಖರು, ಸಮಾಜದಲ್ಲಿ ಅತಿಗಣ್ಯರ ಸ್ಥಾನ - ಮಾನ ಪಡೆದವರ ವಿರುದ್ಧ ಒಂದು ತರಳೆ ಅಥವಾ ಮೂಗರ್ಜಿ ಸಲ್ಲಿಸಿ, ಅವರನ್ನು ನ್ಯಾಯಾಲಯಗಳಿಗೆ ಅಲೆಯುವಂತೆ ಮಾಡಿ, ಕಿರುಕುಳ ಕೊಡುವುದನ್ನು ತಡೆಗಟ್ಟಲು ಕಾಯಿದೆಯ ಚೌಕಟ್ಟಿನಲ್ಲೇ ಪರಿಹಾರವನ್ನು ಒದಗಿಸುವ ಚಿಂತನೆಯನ್ನು ಈಗ ಕೇಂದ್ರ ಕಾಯಿದೆ ಮಂತ್ರಿ ರವಿಶಂಕರ ಪ್ರಸಾದ್ ಅವರು ನಡೆಸಿದ್ದಾರೆ.
ಇಂತಹ ಕಿರುಕುಳಕ್ಕೆ ಒಳಗಾಗಿ ನರಳಿದವರ ಸಂಖ್ಯೆ ದೊಡ್ಡದು. ಇತ್ತೀಚೆಗೆ ದಕ್ಷಿಣ ಕೊರಿಯಾದ ದೈತ್ಯ ಎಲೆಕ್ಟ್ರಾನಿಕ್ಸ್ ಸಂಸ್ಥೆಯಾದ ಸ್ಯಾಮ್ಸಂಗ್ ಪ್ರಮುಖರನ್ನೇ, ಸುಪ್ರೀಂ ಕೋರ್ಟ್ ಕ್ರಿಮಿನಲ್ ನ್ಯಾಯಾಲಯಕ್ಕೆ ಶರಣಾಗಬೇಕೆಂದು ಆದೇಶ ನೀಡಿದ್ದು ಒಂದು ಗಂಭೀರ ಸ್ವರೂಪವನ್ನೇ ತಳೆದಿದೆ.
ಕ್ರಿಮಿನಲ್ ಆರೋಪಗಳನ್ನು ಯಾರ ಮೇಲೆ ಬೇಕಾದರೂ ಯಾರಾದರೂ ಖಾಸಗಿ ದೂರಿನ ರೂಪದಲ್ಲಿ ಸಲ್ಲಿಸಬಹುದು. ಅದಕ್ಕೆ ಕಾಯಿದೆಯಲ್ಲಿ ಅವಕಾಶವಿದೆ.
ದೂರು ದಾಖಲಾದ ಅನಂತರ ಪೊಲೀಸ್ ವಿಚಾರಣೆ, ನ್ಯಾಯಾಲಯಗಳಲ್ಲಿ ವಾದ-ವಿವಾದಕ್ಕೆ ಸಾಕಷ್ಟು ಸಮಯ ಬೇಕು. ನಿಜ. ದೇಶದ ಕಾಯಿದೆ ಎಲ್ಲರಿಗೂ ಒಂದೇ. ಯಾರೇ ಆಗಿರಲಿ ತಪ್ಪು ಮಾಡಿದ್ದರೆ, ಸೂಕ್ತ ವಿಚಾರಣೆಯ ಅನಂತರ, ಆ ತಪ್ಪು ಋಜುವಾತಾದರೆ, ಅಂತಹವರಿಗೆ ಶಿಕ್ಷೆಯಾಗಲೇ ಬೇಕು. ಇಲ್ಲಿ ವ್ಯಕ್ತಿಯ ಸ್ಥಾನ-ಮಾನ ಲೆಕ್ಕಕ್ಕೇ ಇಲ್ಲ.
ಆದರೆ ಈಗ ಪ್ರಸ್ತಾಪದಲ್ಲಿರುವ ವಿಷಯ ಅಂತಿಮ ತೀರ್ಮಾನಕ್ಕೆ ಸಂಬಂಧಿಸಿದ್ದಲ್ಲ. ವಿಚಾರಣೆಯ ಹಂತದಲ್ಲಿ ಖಾಸಗಿ ದೂರುಗಳ ಮೇಲೆ ಆರೋಪಗಳನ್ನು ಹೊತ್ತವರು ಅನುಭವಿಸಬೇಕಾದ ಕಿರುಕುಳದ ವಿಚಾರವೇ ಚರ್ಚೆಗೆ ತುತ್ತಾಗಿರುವುದು. ನೇರವಾಗಿ ಸರ್ಕಾರವೇ ಅಪರಾಧ ದಂಡ ಸಂಹಿತೆಯ ಮಾರ್ಪಾಟಿಗೆ ಮುಂದಾಗಬಹುದಿತ್ತು. ಹಾಗೇನಾದರೂ ಮಾಡಿದ್ದರೆ, ಅದು ಸರ್ಕಾರಕ್ಕೆ ಬೇಕಾಗಿರುವ ಯಾವುದೋ ವ್ಯಕ್ತಿಯನ್ನು ರಕ್ಷಿಸುವ ಉದ್ದೇಶದಿಂದಲೇ ಕಾಯಿದೆಗೆ ಮಾರ್ಪಾಟು ತರಲಾಗುತ್ತದೆ ಎನ್ನುವ ಆರೋಪವನ್ನು ಎದುರಿಸಬೇಕಾಗಿತ್ತು.
ಅಂತಹ ಹೊಣೆಗಾರಿಕೆಯನ್ನು ಒಲ್ಲದ ರವಿಶಂಕರ ಪ್ರಸಾದ್ ಅವರು ನೇರವಾಗಿ ಒಂದು ಪತ್ರದ ಮೂಲಕ ಕಾಯಿದೆ ಆಯೋಗದ ನೆರವನ್ನು ಕೋರಿದ್ದಾರೆ. ಕಾಯಿದೆ ಆಯೋಗವೇ ಇಂತಹ ಸಂದರ್ಭಗಳಲ್ಲಿ ಗಣ್ಯರು - ಅತಿಗಣ್ಯರಿಗೆ ವಿನಾ ಕಾರಣ ಕಿರುಕುಳವನ್ನು ತಪ್ಪಿಸಲು ಯಾವುದಾದರೊಂದು ಮಾರ್ಗವನ್ನು ಹುಡುಕಬೇಕೆಂದು ಪ್ರಸಾದ್ ಕೇಳಿರುವುದು ಉಚಿತವಾಗಿದೆ. ಕೆಲವು ಪ್ರಕರಣಗಳಲ್ಲಿ ಬೃಹತ್ ಬಂಡವಾಳವನ್ನು ಹೂಡಲು ಸಿದ್ಧವಾಗಿರುವ ಕಂಪೆನಿಗಳು "ಸ್ಯಾಮಸಂಗ್" ಪ್ರಮುಖರ ಪ್ರಕರಣದಿಂದ ಹಿಂತೆಗೆಯುತ್ತಿದ್ದಾರೆನ್ನುವ ಪ್ರಕಟಿತ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಕೈಗೊಂಡಿರುವ ಸುಧಾರಣೆ ಪ್ರಯತ್ನ ಒಳ್ಳೆಯದೇ ಎನ್ನಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

