ನಾಶವಾದ ಗ್ರಂಥಗಳು ಮರು ಹುಟ್ಟು ಪಡೆದವು
ಇತಿಹಾಸವನ್ನೋದಿದ ನಮಗೆಲ್ಲ ನಳಂದ ವಿಶ್ವವಿದ್ಯಾನಿಲಯದ ಹಿರಿಮೆ ಗರಿಮೆಗಳು ತಿಳಿದಿವೆ. ಕ್ರಿ.ಶ.ಆರನೆಯ ಶತಮಾನದಲ್ಲಿ ಉತ್ತುಂಗದಲ್ಲಿದ್ದ ನಳಂದ ವಿಶ್ವವಿದ್ಯಾಲಯ ಜಾಗತಿಕ ಶೈಕ್ಷಣಿಕ ಕೇಂದ್ರವಾಗಿತ್ತು. ಚೀನೀ ವಿದ್ವಾಂಸ ಹ್ಯುಯೆನ್ ತ್ಸಾಂಗ್ ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರು ಅಲ್ಲಿಗೆ ಬಂದು ಹಲವಾರು ವರ್ಷಗಳ ಕಾಲ ಅಧ್ಯಯನ ನಡೆಸಿದ್ದರು. ಅಲ್ಲಿದ್ದ ಬೃಹತ್ ಗ್ರಂಥಾಲಯದಲ್ಲಿ ಬಲು ಅಪರೂಪದ ಗ್ರಂಥಗಳಿದ್ದವು. ಆದರೆ ಶತ್ರುಗಳ ಆಕ್ರಮಣಕ್ಕೆ ತುತ್ತಾಗಿ ಅಲ್ಲಿನ ಪುಸ್ತಕ ಬಂಢಾರ ಸುಟ್ಟು ಬೂದಿಯಾಯಿತು. ಇದೇ ರೀತಿಯ ಒಂದು ಘಟನೆ ಚೀನಾದಲ್ಲಿಯೂ ನಡೆಯಿತು. ವಿಶೇಷವೆಂದರೆ ಅದು ವಿದೇಶೀಯರ ದಾಳಿಯಾಗಿರಲಿಲ್ಲ. ಸ್ವತಃ ಚೀನೀಯರೇ ಮಾಡಿದ್ದರು. ಚೀನಾದಲ್ಲಿ ಹಿಂದೆ ಸೀ ಹ್ಯಾಂಗ್ ತೀ ಎಂಬ ಚಕ್ರವರ್ತಿ ಆಳುತ್ತಿದ್ದ. ಅವನೊಬ್ಬ ಪುಸ್ತಕ ದ್ವೇಷಿಯಾಗಿದ್ದ. ಪುಸ್ತಕಗಳನ್ನು ಏಕೆ ಓದಬೇಕು? ಸಾಹಿತ್ಯದ ಅಧ್ಯಯನದಿಂದ ಏನು ಪ್ರಯೋಜನ? ಎಂಬ ಯೋಚನೆ ಅವನದಾಗಿತ್ತು. ಪ್ರಜೆಯಾಗಿರುವವನು ಕೇವಲ ತೆರಿಗೆ ಕಟ್ಟಿ, ಸಂತೃಪ್ತ ಜೀವನ ಮಾಡಬೇಕೇ ಹೊರತು, ಪುಸ್ತಕಗಳನ್ನೋದುತ್ತಾ ಸಮಯ ಹಾಳುಮಾಡಬಾರದೆಂದು ಭಾವಿಸುತ್ತಿದ್ದ. ಆಗಿನ ಕಾಲದಲ್ಲಿ ಇನ್ನೂ ಕಾಗದದ ಉಪಯೋಗ ಬಂದಿರಲಿಲ್ಲವಾದ್ದರಿಂದ ತೆಳು ಹಲಗೆಯ ಮೇಲೆ ಅಕ್ಷರಗಳನ್ನು ಕೊರೆದು ಗ್ರಂಥರಚನೆ ಮಾಡುತ್ತಿದ್ದರು. ಸೀ ಹ್ಯಾಂಗ್ ಒಮ್ಮೆ, ರಾಜಭಟರು ದೇಶದ ಮೂಲೆಮೂಲೆಗೂ ತೆರಳಿ ಸಿಕ್ಕ ಎಲ್ಲ ಪುಸ್ತಕಗಳನ್ನು ನಾಶಮಾಡಬೇಕೆಂದು ಆಜ್ಞೆ ಮಾಡಿದ. ಅದರಂತೆ ದೇಶದ ಎಲ್ಲ ಕಡೆ ಸೈನಿಕರು ದಾಳಿ ಮಾಡಿ ಬೃಹತ್ ಗ್ರಂಥಗಳನ್ನು ಚೀನಾ ಮಹಾಗೋಡೆ ಬಳಸಿ, ಕೆಲವಕ್ಕೆ ಬೆಂಕಿ ಇಕ್ಕಿ ನಾಶಮಾಡಿದರು. ಇದರಿಂದ ಚೀನಾ ದೇಶದ ಬಹುತೇಕ ಉತ್ತಮ ಗ್ರಂಥಗಳು ನಾಶವಾದವು. ಕೆಲವು ವರ್ಷಗಳ ನಂತರ ಪುಸ್ತಕ ದ್ವೇಷಿ ಚಕ್ರವರ್ತಿ ಮರಣಿಸಿದ. ಬುದ್ಧಿಜೀವಿಗಳು, ವಿದ್ವಾಂಸರು ಸೇರಿ ತಾವು ರಚಿಸಿದ್ದ ಅಥವಾ ತಾವು ಅಧ್ಯಯನ ಮಾಡಿದ್ದ ಗ್ರಂಥಗಳನ್ನು ನೆನಪಿಗೆ ಬಂದಷ್ಟು ಪುನಃ ಬರೆದಿಡಲು ಪ್ರಾರಂಭಿಸಿದರು. ಅವರ ಅವಿರತ ಪ್ರಯತ್ನದಿಂದಾಗಿ ಮತ್ತು ಆಸಕ್ತಿಯಿಂದಾಗಿ ನಾಶವಾದ ಗ್ರಂಥಗಳು ಜೀವ ತಳೆಯಲಾರಂಭಿಸಿದವು. ಹೀಗೆಯೇ ಕನ್ಫ್ಯೂಷಿಯಸ್‌ನ ರಚನೆಗಳೂ ಸಹ ಪುನರಚಿತವಾಗಿ ಲೋಕಮಾನ್ಯವಾದವು. ಹೀಗೆ ಒಂದು ದೇಶದ ಸಂಸ್ಕೃತಿಯನ್ನು ಉಳಿಸಿದ ಕೀರ್ತಿಗೆ ಚೀನೀ ಬುದ್ಧಿಜೀವಿಗಳು ಕಾರಣರಾದದ್ದು ಇತಿಹಾಸದಲ್ಲಿ ಅಪರೂಪದ ಘಟನೆಯಾಗಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

