ತಳಪಾಯದ ಕಲ್ಲೇ ಶ್ರೇಷ್ಠ!
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಎಂದು ಹೇಳುತ್ತಾ ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ಎಂದು ಡಿವಿಜಿಯವರು "ಹೇಗೆ ಹೆಸರು ಮಾಡಬೇಕೆಂಬ ಉತ್ಕಟ ಇಚ್ಛೆ ಎಲ್ಲರಲ್ಲಿ ಮನೆಮಾಡಿದೆ" ಎಂದು ವಿವರಿಸಿದ್ದಾರೆ. ಪ್ರತಿದಿನ ತಮ್ಮ ಹೆಸರು ಪತ್ರಿಕೆಯಲ್ಲಿ ಬರಬೇಕೆಂದು ಬಯಸುವ ಪ್ರಚಾರಪ್ರಿಯರೂ ಇದ್ದಾರೆ. ಆದರೆ ಇಂತಹ ಪ್ರವೃತ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕೆಲವೇ ಕೆಲವು ಅಪರೂಪದ ಜನಪ್ರಿಯ ವ್ಯಕ್ತಿಗಳಲ್ಲಿ ದಿ.ಲಾಲ್ ಬಹಾದ್ದೂರ್ ಶಾಸ್ತ್ರಿಯವರೂ ಒಬ್ಬರು. ಸರಳತೆ, ದಕ್ಷತೆ, ಬದ್ಧತೆ ಮತ್ತು ವಿನಯಕ್ಕೆ ಇನ್ನೊಂದು ಹೆಸರೇ ಶಾಸ್ತ್ರಿಯವರಾಗಿದ್ದರು. 1921 ರಲ್ಲಿ ಲಾಲಾ ಲಜಪತರಾಯ್ ಅವರು ಸ್ಥಾಪಿಸಿದ ಲೋಕ ಸೇವಕ ಮಂಡಳವನ್ನು ಮಹಾತ್ಮ ಗಾಂಧಿಯವರೇ ಉದ್ಘಾಟಿಸಿದ್ದರು. ಅದರ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದವರು ಶಾಸ್ತ್ರಿಯವರು. ಮಂಡಳದ ಮುಖ್ಯ ಉದ್ದೇಶವೆಂದರೆ ಯಾವ ಆಕಾಂಕ್ಷೆಯೂ ಇಲ್ಲದೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು. ಲೋಕಸೇವಾ ಮಂಡಳಿಯ ಮೂಲಕ ಸೇವಾಕಾರ್ಯದ ಜೊತೆ ಸ್ವಾತಂತ್ರ್ಯ ಚಳವಳಿಗೆ ಬೆಂಬಲಿಸುತ್ತಾ ಉತ್ತಮ ಕಾರ್ಯ ಮಾಡುತ್ತಿದ್ದ ಶಾಸ್ತ್ರೀಜಿ ಮುಂದೆ ಅದರ ಅಧ್ಯಕ್ಷರೂ ಆದರು. ಮಂಡಲದ ಕಾರ್ಯಚಟುವಟಿಕೆಯನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದರೂ ಸಹ ಅವರು ಯಾವ ಪ್ರಚಾರವನ್ನೂ ಪಡೆಯುತ್ತಿರಲಿಲ್ಲ. ಕೊನೆಪಕ್ಷ ತಮ್ಮ ಹೆಸರು ಮತ್ತು ಭಾವಚಿತ್ರ ಸಹ ಪತ್ರಿಕೆಗಳಲ್ಲಿ ಬರದಂತೆ ಎಚ್ಚರಿಕೆ ವಹಿಸುತ್ತಿದ್ದರು. ಪ್ರಚಾರದ ಬಗ್ಗೆ ಅವರ ನಿರಾಸಕ್ತಿಯನ್ನು ಗಮನಿಸಿದ ಅವರ ಮಿತ್ರರೊಬ್ಬರು ವರ್ತಮಾನ ಪತ್ರಿಕೆಗಳಲ್ಲಿ ತಮ್ಮ ಹೆಸರು ಮತ್ತು ಭಾವಚಿತ್ರ ಬರಬೇಕೆಂದು ಹಂಬಲಿಸುಸುತ್ತಿರುವ ಜನರೇ ಹೆಚ್ಚಿರುವಾಗ ಶಾಸ್ತ್ರಿಯವರೇಕೆ ನಿರಾಸಕ್ತಿ ತೋರುತ್ತಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಶಾಸ್ತ್ರಿಯವರು ಲಾಲಾಲಜಪತ ರಾಯ್ ಅವರು ಹೇಳಿದ ಒಂದು ದೃಷ್ಟಾಂತವನ್ನು ಹೇಳಿದರು. ಅದೆಂದರೆ, ತಾಜಮಹಲ್ ಕಟ್ಟಲು ಎರಡು ಬಗೆಯ ಕಲ್ಲುಗಳನ್ನು ಉಪಯೋಗಿಸಿದ್ದಾರೆ. ಒಂದು ಎಲ್ಲರೂ ನೋಡಿ ಆನಂದಿಸುವ ಅತಿ ಸುಂದರವಾದ ಸಂಗಮರಮರಿ ಕಲ್ಲು. ಅದು ಹೊರಪ್ರಕಾರದ ಕಲ್ಲಾಗಿ, ಉಪಯೋಗಿಸಲ್ಪಡುತ್ತದೆ. ಇನ್ನೊಂದು ಪ್ರಕಾರದ ಕಲ್ಲು ಜನರ ಕಣ್ಣಿಗೆ ಕಾಣಿಸದ, ತಳಪಾಯದ ಕಲ್ಲು. ಆದರೆ ತಾಜಮಹಲಿನ ವೈಭವ, ಭವ್ಯತೆ ಮತ್ತು ಸೌಂದರ್ಯ ನಿಂತಿರುವುದೇ ಅಗೋಚರವಾದ ತಳಪಾಯದ ಕಲ್ಲಿನ ಮೇಲೆ. ಆದ್ದರಿಂದ ತಾವು ಯಾವಾಗಲೂ ತಳಪಾಯದ ಕಲ್ಲಾಗಿ ಇರಬಯಸುತ್ತೇನೆ ಎಂದರು. ಅವರ ಮಾತನ್ನು ಕೇಳಿದ ಗೆಳೆಯನಿಗೆ ಶಾಸ್ತ್ರಿಯವರ ಬಗ್ಗೆ ಇದ್ದ ಗೌರವ ನೂರ್ಮಡಿಯಾಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

