ಸಂಪಾದಕೀಯ

ದಾರಿ ತೋರಿದ ತೋಳ

Published On :

ಒಮ್ಮೊಮ್ಮೆ ಕಷ್ಟದ ಸಮಯದಲ್ಲಿ ಕೇವಲ ಮಾನವರಿಂದ ಮಾತ್ರ ಸಹಾಯ ದೊರೆಯುತ್ತದೆಂದು ಭಾವಿಸಬೇಕಿಲ್ಲ. ಕೆಲಬಾರಿ ಪ್ರಾಣಿಗಳೂ ಸಹ ನಮಗೆ ನೆರವಾಗುವುದುಂಟು. ಅಂತಹ ಒಂದು ನೈಜ ಪ್ರಸಂಗ ಇಲ್ಲಿದೆ. ಕ್ರಿ.ಪೂ. 631ರಲ್ಲಿ ಜೀವಿಸಿದ್ದ ಅರಿಸ್ಟೋಮೆನಸ್ ಒಬ್ಬ ಗ್ರೀಕ್ ಸೈನ್ಯಾಧಿಕಾರಿ. ಅವನು ತುಂಬಾ ಶೂರ ಮತ್ತು ಬುದ್ಧಿವಂತನಾಗಿದ್ದುದರಿಂದ ಅವನ ದೇಶದ ಜನ ಅವನನ್ನು ತುಂಬಾ ಪ್ರೀತಿಸುತ್ತಿದ್ದರು. ಆಗ ಗ್ರೀಕರಿಗೆ ಎದುರಾಳಿಯಾಗಿದ್ದ ಇನ್ನೊಂದು ದೇಶವೆಂದರೆ ಸ್ಪಾರ್ಟಾ. ಸದಾ ಗ್ರೀಸ್ ಮತ್ತು ಸ್ಪಾರ್ಟಾದ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಕ್ರಿ.ಪೂ. 642ರಲ್ಲಿ ನಡೆಯಲಾದ ಎರಡನೇ ಮೆಸೆನಿಯನ್ ಮಹಾಯುದ್ಧದಲ್ಲಿ ಅರಿಸ್ಟ್ರೋಮೆನಸ್‌ನ ಸೈನ್ಯ ಪೂರ್ತಿ ಸೋತುಹೋಗಿ ಅವನು ಸ್ಪಾರ್ಟನ್ನರ ಸೆರೆಯಾಳಾದ. ಸ್ಪಾರ್ಟನ್ನರಿಗೆ ಅರಿಸ್ಟೋಮೆನಸ್ ಕಂಡರೆ ತುಂಬಾ ಸಿಟ್ಟಿತ್ತು. ಅದಕ್ಕಾಗಿ ಸೆರೆ ಸಿಕ್ಕ ಅವನನ್ನು ಕೊಲ್ಲಲು ನಿರ್ಧರಿಸಿ, ಸಮೀಪದಲ್ಲಿದ್ದ ಪರ್ವತದ ತುದಿಗೆ ಕರೆದೊಯ್ದು ಅಲ್ಲಿದ್ದ ಒಂದು ಕಂದಕದಲ್ಲಿ ತಳ್ಳಿದರು. ಅದೊಂದು ಕಲ್ಲು ಮುಳ್ಳುಗಳಿಂದ ಕೂಡಿದ ಕಂದಕವಾಗಿದ್ದು ತುಂಬಾ ಆಳವಾಗಿತ್ತು. ಅಲ್ಲಿ ಬಿದ್ದವರು ಆಹಾರ ನೀರಿಲ್ಲದೆ ಸಾಯಬೇಕಿತ್ತು. ಇಂತಹ ಶಿಕ್ಷೆ ವಿಧಿಸಿದ ಮೇಲೆ ಸ್ಪಾರ್ಟನ್ ಸೈನಿಕರು ತಮ್ಮ ದೇಶಕ್ಕೆ ಮರಳಿದರು. ಅಲ್ಲಿ ಕತ್ತಲೆಯ ಕೂಪದಲ್ಲಿ ಮೂರು ದಿನಗಳ ಕಾಲ ಆಹಾರ ಮತ್ತು ನೀರಡಿಕೆಯಿಂದ ನರಳಿದ ಅರಿಸ್ಟೋಮೆನಸ್ ದೇಹಕ್ಕಾದ ನೋವಿನಿಂದ ನರಳಿದ. ಇನ್ನೇನು ತನ್ನ ಜೀವ ಹೋಗಲಿದೆಯೆಂದು ಭಾವಿಸಿ ಕುಳಿತಿದ್ದಾಗ ಒಂದು ಪ್ರಾಣಿಯ ಅಸ್ಪಷ್ಟ ಆಕೃತಿ ಅಲ್ಲಿಗೆ ಬಂದುದನ್ನು ಎವೆಯಿಕ್ಕದೆ ನೋಡಿದ. ಅದೊಂದು ಬಲಿಷ್ಠ ತೋಳವಾಗಿತ್ತು. ಅರಿಸ್ಟೋಮೆನಸ್ ಒಂದು ಕ್ಷಣ ಯೋಚಿಸಿ ನಿಧಾನವಾಗಿ ತೆವಳುತ್ತಾ ಹೋಗಿ ಆ ತೋಳದ ಬಾಲವನ್ನು ಬಿಗಿಯಾಗಿ ಹಿಡಿದು ಬಿಟ್ಟ. ಬೆದರಿದ ತೋಳ ಓಡತೊಡಗಿತು. ತೋಳ ಓಡಿ, ಓಡಿ, ಒಂದು ಕಿಂಡಿಯ ಬಳಿಗೆ ಬಂದಾಗ ಅಲ್ಲಿ ಸೂರ್ಯನ ಬೆಳಕು ಕಂಡು ಅರಿಸ್ಟೋಮೆನಸ್ ಸಂತಸಗೊಂಡ. ತನಗೆ ಸಹಾಯ ಮಾಡಿದ ತೋಳಕ್ಕೆ ಮನಸ್ಸಿನಲ್ಲಿಯೇ ವಂದಿಸಿದ ಆ ಸೈನ್ಯಾಧಿಕಾರಿ, ಪುನಃ ಜನರನ್ನು ಒಗ್ಗೂಡಿಸಿ, ಮೊದಲಿನದಕ್ಕಿಂತ ದೊಡ್ಡ ಸೈನ್ಯವನ್ನು ಕಟ್ಟಿ ಸ್ಪಾರ್ಟನ್ನರ ವಿರುದ್ಧ ಹೋರಾಡಿದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.