ಬೇಂದ್ರೆ ಹೆಸರು ಇವರನ್ನು ಉಳಿಸಿತು
ಬೇಂದ್ರೆಯವರ ನಿಕಟವರ್ತಿಯಾಗಿದ್ದ 'ಜೀವಿ' ಎಂದೇ ಖ್ಯಾತರಾದ ಡಾ.ಜಿ.ವಿ.ಕುಲಕರ್ಣಿಯವರು ತಮ್ಮ 'ನಾಕಂಡ ಬೇಂದ್ರೆ' ಕೃತಿಯಲ್ಲಿ ಒಂದು ಸ್ವಾರಸ್ಯಕರ ಸಂಗತಿಯನ್ನು ವಿವರಿಸಿದ್ದಾರೆ. ಬೇಂದ್ರೆಯವರ 'ನಾಲ್ಕುತಂತಿ'ಯನ್ನು ಹಿಂದಿ ಭಾಷೆಗೆ ಅನುವಾದ ಮಾಡಲು ಉಭಯ ಭಾಷಾ ಪಂಡಿತರಾದ ಡಾ.ವಾಸುಪುತ್ರನ್ ಅವರಿಗೆ ಜ್ಞಾನಪೀಠ ಸಮಿತಿಯಿಂದ ಆದೇಶ ಬಂತು. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರ ಪಡೆಯಲು ಅವರು ಮೊರೆಹೋದದ್ದು ಜೀವಿಯವರನ್ನು. ಸರಿ ಮುಂಬೈಯಿಂದ ಜೀವಿ ಮತ್ತು ವಾಸನ್ ಇಬ್ಬರೂ ಅವರ ಗೆಳೆಯ ವಾಸುದೇವ ಸಿಂದಗಿಯವರಿಂದ ಹೊಚ್ಚಹೊಸ ನ್ಯಾಷನಲ್ ಪೆನೋಸಾನಿಕ್ ಟೇಪ್ ರೆಕಾರ್ಡರನ್ನು ಎರವಲು ಪಡೆದು ಬಸ್ಸಿನಲ್ಲಿ ಹೊರಟರು. ಆಗಿನ ಕಾಲದಲ್ಲಿ ಮುಂಬೈಯಿಂದ ಕಳ್ಳಮಾಲುಗಳನ್ನು ಕರ್ನಾಟಕಕ್ಕೆ ತಂದು ಮಾರುವ ದಂಧೆ ಹೆಚ್ಚಾಗಿತ್ತು. ಆದ್ದರಿಂದ ಬೆಳಗಾವಿಗೆ ಬಸ್ಸು ಬರುತ್ತಿದ್ದಂತೆ ಪೊಲೀಸರು ಬಸ್ ತಡೆದು ಎಲ್ಲರ ಲಗೇಜುಗಳನ್ನೂ ತಪಾಸಣೆ ಮಾಡತೊಡಗಿದರು. ಕೆಲವರು ರಸೀದಿಯಿಲ್ಲದೆ ತಂದ ರೇಡಿಯೋ ಮತ್ತು ಟೇಪ್ ರೆಕಾರ್ಡರುಗಳನ್ನು ಜಫ್ತಿ ಮಾಡಿಕೊಂಡು ಜೀವಿಯವರ ಬಳಿಯೂ ಬಂದರು. ಇವರ ಬಳಿ ಹೊಸ ಟೇಪ್ ರೆಕಾರ್ಡರ್ ಇದ್ದಿತಾದರೂ ಅದಕ್ಕೆ ರಸೀದಿ ಇರಲಿಲ್ಲ. ತಾವು ಎರವಲು ತಂದಿದ್ದ ಆ ವಸ್ತುವನ್ನು ಜಫ್ತು ಮಾಡಿದರೆ ವಾಸುದೇವ ಸಿಂದಗಿಯವರಿಗೆ ಏನು ಉತ್ತರ ಹೇಳಬೇಕೆಂದು ತೋಚದೆ ಪೇಚಾಟಕ್ಕಿಟ್ಟುಕೊಂಡಿತು. ಒಬ್ಬ ತರುಣ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಸಿಬ್ಬಂದಿಗೆ ಯಾವ ಸೂಟ್ ಕೇಸು ತೆಗೆದು ನೋಡಬೇಕು ಎಂದು ಸೂಚನೆ ನೀಡುತ್ತಿದ್ದ. ಆಗ ಜೀವಿಯವರು ಆತನ ಬಳಿ ಹೋಗಿ ತಮ್ಮ ಪರಿಚಯ ಹೇಳಿಕೊಂಡು, ಬ್ರಿಟಿಷ್ ಹೈಕಮಿಷನ್‌ನಲ್ಲಿ ಅಧಿಕಾರಿಯಾಗಿರುವ ಡಾ.ಪುತ್ರನ್ ಅವರ ಪರಿಚಯ ಮಾಡಿಕೊಟ್ಟು, ತಾವು ಧಾರವಾಡಕ್ಕೆ ತೆರಳುತ್ತಿರುವುದಾಗಿಯೂ, ಅಲ್ಲಿ ವರಕವಿ ಬೇಂದ್ರೆಯವರನ್ನು ಸಂದರ್ಶಿಸಲು ಹೊರಟಿರುವುದಾಗಿಯೂ ತಿಳಿಸಿದರು. ಬೇಂದ್ರೆಯವರ ಹೆಸರು ಕಿವಿಗೆ ಬೀಳುತ್ತಲೇ ಆ ಅಧಿಕಾರಿ ಪುಳುಕಿತಗೊಂಡರು. ಅವರೀರ್ವರಿಗೂ ಹಸ್ತಲಾಘವ ನೀಡಿ ತಮ್ಮ ಪರಿಚಯ ಮಾಡಿಕೊಂಡರು. ಅಷ್ಟರಲ್ಲಿ ಪೊಲೀಸರು ಜೀವಿಯವರ ಬಳಿ ಬಂದು ಸೂಟ್ ಕೇಸು ತೆರೆಯಲು ಆದೇಶಿಸಿದರು. ಅದನ್ನು ಗಮನಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಸಿಬ್ಬಂದಿಯನ್ನು ತಡೆದು, ಇವರ ಸೂಟ್ ಕೇಸನ್ನು ನೋಡಬೇಕಿಲ್ಲ. ಅವರು ಮಹಾಕವಿ ಬೇಂದ್ರೆಯವರ ಸಂದರ್ಶನಕ್ಕೆ ಮುಂಬೈಯಿಂದ ಆಗಮಿಸಿದ್ದಾರೆ ಎಂದು ಹೇಳಿದ. ಆಗ ಜೀವಿಯವರಿಗೆ ಹೋದ ಜೀವ ಬಂದಂತಾಯಿತು. ಬೇಂದ್ರೆಯವರ ಹೆಸರಿಗಿರುವ ಮಹತ್ವವನ್ನು ಕಂಡು ಸಂತಸವೂ ಆಯಿತು. ಈ ಪ್ರಸಂಗವನ್ನು ಬೇಂದ್ರೆಯವರ ಬಳಿ ಪ್ರಸ್ತಾಪ ಮಾಡಿದಾಗ, ಅವರು ನಗುತ್ತಾ ಹೇಳಿದರು, "ಪೊಲೀಸರು ನನ್ನ ಹೆಸರು ಕೇಳಿ ನಿಮ್ಮ ಬ್ಯಾಗು ಚೆಕ್ ಮಾಡಲಿಲ್ಲ, ಆದರೆ ನನಗೆ 50 ಸಾವಿರ ಬಹುಮಾನ ಸಿಕ್ಕ ಸುದ್ದಿ ಕೇಳಿ ಕಳ್ಳರು ಅದೇ ರಾತ್ರಿ ನಮ್ಮ ಮನೆಗೆ ಕನ್ನ ಹಾಕಿದರು. ಪಾಪ ಅವರಿಗೆ ಪುಸ್ತಕದ ಹೊರತು ಏನೂ ಕಾಣಿಸಲಿಲ್ಲ" ಎಂದು ಗಟ್ಟಿಯಾಗಿ ನಕ್ಕರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

