ಅಲ್ಪ ಸಹಾಯಕ್ಕೆ ಲಾಭ
72ವರ್ಷ ರಾಜ್ಯಭಾರ ಮಾಡಿದ ಕೀರ್ತಿಗೆ ಪಾತ್ರನಾದವನು ಫ್ರಾನ್ಸಿನ 14ನೆಯ ಲೂಯಿಸ್. 1643ರಲ್ಲಿ ...
72ವರ್ಷ ರಾಜ್ಯಭಾರ ಮಾಡಿದ ಕೀರ್ತಿಗೆ ಪಾತ್ರನಾದವನು ಫ್ರಾನ್ಸಿನ 14ನೆಯ ಲೂಯಿಸ್. 1643ರಲ್ಲಿ ಸಿಂಹಾಸನವನ್ನೇರಿದಾಗ ಅವನಿಗೆ ಕೇವಲ ಐದು ವರ್ಷಗಳು. ತನ್ನ ಆಳ್ವಿಕೆಯಲ್ಲಿ ಅವನು ಮೂರು ಮಹಾಯುದ್ಧಗಳನ್ನು ಜಯಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನ ಕಾಲದಲ್ಲಿ ಫ್ರಾನ್ಸ್ಯುರೋಪಿನ ಬಲಿಷ್ಟ ರಾಜ್ಯವಾಗಿ ಹೊರಹೊಮ್ಮಿದ್ದೇ ಅಲ್ಲದೆ, ದೇಶದ ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. 1715ರಲ್ಲಿ ಹದಿನಾಲ್ಕನೇ ಲೂಯಿಸ್ ನಿಧನನಾದಾಗ ಅವನ ಮರಿಮಗ ಹದಿನೈದನೇ ಲೂಯಿಸ್ ಸಹ ತನ್ನ ಐದನೇ ವಯಸ್ಸಿಗೇ ಸಿಂಹಾಸನವೇರಿದ್ದು ವಿಶೇಷವಾಗಿತ್ತು. ಒಮ್ಮೆ ಹದಿನಾಲ್ಕನೇ ಲೂಯಿಸ್ ಸಿಂಹಾಸನವನ್ನೇರಿ ಕೆಲವೇ ದಿನಗಳಲ್ಲಿ ಆಡುತ್ತಾ ಆಡುತ್ತಾ ಅರಮನೆಯ ಹೂದೋಟದ ನೀರಿನ ತೊಟ್ಟಿಯಲ್ಲಿ ಬಿದ್ದುಬಿಟ್ಟ. ಮಗು ಬಿದ್ದಾಗ ಸಮೀಪದಲ್ಲಿ ಯಾರೂ ಇರಲಿಲ್ಲ. ಇದ್ದಿಲನ್ನು ಮಾರಿ ಜೀವಿಸುತ್ತಿದ್ದ ಜಾಕೋಟ್ ಎಂಬುವನು ಮಗು ನೀರಿಗೆ ಬಿದ್ದುದನ್ನು ಗಮನಿಸಿ, ಅರೆಪ್ರಜ್ಞಾವಸ್ಥೆಯಲ್ಲಿದ್ದ ಆ ಮಗುವನ್ನು ತನ್ನ ಮನೆಗೆ ಕರೆದೊಯ್ದು ಉಪಚರಿಸಿದ. ತನ್ನ ಮಕ್ಕಳ ಬಟ್ಟೆಯನ್ನು ನೀಡಿ, ಆಹಾರ ನೀಡಿ ಜೋಪಾನವಾಗಿ ನೋಡಿಕೊಂಡ. ಆತನಿಗೆ ಆ ಮಗು ತಮ್ಮ ದೇಶದ ರಾಜನೆಂಬ ಅರಿವಿರಲಿಲ್ಲ. ಆ ಮಗು ಸಹ ತಾನು ದೇಶದ ಪ್ರಭುವೆಂಬುದನ್ನು ಮರೆತು ಜಾಕೋಬನ ಮಕ್ಕಳ ಜೊತೆ ಸಂತೋಷವಾಗಿ ಒಂದೆರಡು ದಿನ ಆಟವಾಡಿಕೊಂಡು ಅವರ ಮನೆಯ ಸಾಮಾನ್ಯ ಆಹಾರವನ್ನೇ ಸೇವಿಸುತ್ತಾ ಸಂತೋಷದಿಂದ ಕಾಲಕಳೆಯಿತು. ಇತ್ತ ಅರಮನೆಯಲ್ಲಿ ರಾಜನ ಕಣ್ಮರೆಯಿಂದ ಕಂಗಾಲಾದ ಅಧಿಕಾರಿಗಳು ಮತ್ತು ಸೈನಿಕರು ಮನೆಮನೆಯಲ್ಲಿ ಶೋಧವನ್ನು ಕೈಗೊಂಡರು. ಕೊನೆಗೆ ಇದ್ದಿಲು ಮಾರುವ ಒಬ್ಬ ಸಾಮಾನ್ಯ ಪ್ರಜೆಯ ಮನೆಯಲ್ಲಿ ತಮ್ಮ ಮಹಾರಾಜ ಇರುವುದನ್ನು ಪತ್ತೆಹಚ್ಚಿ ಅಲ್ಲಿಗೆ ಸಕಲ ಮರ್ಯಾದೆಯೊಡನೆ ಹೋದರು. ರಾಜನನ್ನು ತಮ್ಮ ಮನೆಯಲ್ಲಿ ಬಚ್ಚಿಟ್ಟುಕೊಂಡ ಆರೋಪವನ್ನು ಆ ಬಡ ವ್ಯಕ್ತಿಯ ಮೇಲೆ ಹೊರಿಸಿ ಶಿಕ್ಷಿಸಲು ಮುಂದಾದರು. ಆದರೆ ಹದಿನಾಲ್ಕನೇ ಲೂಯಿಸ್ ತನ್ನನ್ನು ಆಪತ್ತಿನಿಂದ ಜಾಕೋಬನು ಹೇಗೆ ರಕ್ಷಿಸಿದ ಎನ್ನುವುದನ್ನು ತಿಳಿಸಿದ್ದಲ್ಲದೆ, ಅವನ ಮನೆಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಸ್ಮರಿಸಿದ. ಮರುದಿನ ಅರಮನೆಗೆ ಬಂದು ತನ್ನನ್ನು ನೋಡಲು ತಿಳಿಸಿ ತನ್ನ ಪರಿವಾರದವರೊಡನೆ ಜಾಕೋಬನು ನೀಡಿದ ಉಡುಪನ್ನೇ ಧರಿಸಿ ಅರಮನೆಗೆ ಹೋದ. ಮರುದಿನ ಅರಮನೆಗೆ ಬಂದ ಜಾಕೋಬ್ ಮತ್ತವನ ಕುಟುಂಬಕ್ಕೆ ಆತಿಥ್ಯ ನೀಡಿ, ಅವರಿಗೆ ಒಂದು ಸುಂದರ ಮನೆಯನ್ನು ಕಟ್ಟಿಸಿಕೊಟ್ಟಿದ್ದಲ್ಲದೆ, ಅವನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವನ್ನೂ ಮಾಡಿಕೊಟ್ಟ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

