ಸಂಪಾದಕೀಯ

ಮಮತಾಮಯಿ ಜಯಮ್ಮ

Published On :

ಬಿ.ಜಯಮ್ಮನವರು ಗುಬ್ಬಿ ವೀರಣ್ಣನವರ ಅರ್ಧಾಂಗಿಯಷ್ಟೇ ಅಲ್ಲ, ಅಪ್ರತಿಮ ಅಭಿನೇತ್ರಿಯಾಗಿ ಹೆಸರು ಮಾಡಿದ್ದವರು. ಚಲನಚಿತ್ರ ಮತ್ತು ರಂಗಭೂಮಿಯ ಪ್ರಖ್ಯಾತ ನಟಿಯಾಗಿ, ಗಾಯಕಿಯಾಗಿ ಬಹಮುಖ ಪ್ರತಿಭೆಯನ್ನು ಗಳಿಸಿದ್ದವರು. ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಂದರೆ 1931ರಲ್ಲಿ 'ಹಿಸ್ ಲವ್ ಅಫೇರ್ಸ್‌' ಮೂಕಿ ಚಿತ್ರದಲ್ಲಿ ಗುಬ್ಬಿ ವೀರಣ್ಣನವರೊಡನೆ ನಟಿಸಿ ಪ್ರಖ್ಯಾತರಾದರು. ಬ್ರಹ್ಮ ರಥಂ, ಹೇಮರಡ್ಡಿ ಮಲ್ಲಮ್ಮ, ತ್ಯಾಗಯ್ಯ, ಜೀವನ ನಾಟಕ, ಸ್ವರ್ಗ ಸೀಮಾ ಮುಂತಾದ ಚಲನಚಿತ್ರಗಳಲ್ಲಿ ಅವರ ಅಭಿನಯ ಅವಿಸ್ಮರಣೀಯ. ಗುಬ್ಬಿ ಕಂಪನಿಯ ನಾಟಕಗಳಲ್ಲಿ ಸಹ ಪ್ರಮುಖ ನಟಿಯಾಗಿ ಹೆಸರು ಗಳಿಸಿದ್ದರು. ಅವರ ಅಭಿನಯ ಕೇವಲ ಅಭಿನಯವಾಗಿರದೆ, ನೈಜತೆಗೆ ಹೆಚ್ಚು ಹತ್ತಿರವಾಗಿತ್ತು. ಅಭಿನಯದಲ್ಲಿ ಮಂಚೂಣಿಯಲ್ಲಿದ್ದಂತೆ, ಉತ್ತಮ ಗಾಯಕರೂ ಆಗಿದ್ದರು. ಕೆಲವು ಚಿತ್ರಗಳಿಗೆ ಹಾಡಿ ಪ್ರಸಿದ್ಧರಾಗಿದ್ದರು. ಗುಬ್ಬಿ ವೀರಣ್ಣನವರಂತೂ ತಮ್ಮ ಭಾರ್ಯೆ ಜಯಮ್ಮನವರನ್ನು ಧರ್ಮ ದೇವತೆ ಎಂದೇ ತಿಳಿದಿದ್ದರು. ಏಕೆಂದರೆ, ಮನೆಗೆ ಬಂದ ಅತಿಥಿಗಳನ್ನು ಉಪಚರಿಸುವುದರಿಂದ ಹಿಡಿದು, ಕಂಪನಿ ನಟನಟಿಯರನ್ನು ನಡೆಸಿಕೊಳ್ಳುವ ಅವರ ರೀತಿ ಮಾದರಿಯಾಗಿತ್ತು. ಕಷ್ಟದಲ್ಲಿದ್ದವರಿಗೆ ನೆರವು ನೀಡಲು ಸದಾ ಸಿದ್ಧವಿದ್ದ ಜಯಮ್ಮನವರ ಮನೆ ಯಾವಾಗಲೂ ಅಭಿಮಾನಿಗಳಿಂದ ತುಂಬಿರುತ್ತಿತ್ತು. ಹೀಗಾಗಿ ಅವರ ಮನೆ ಒಂದು ಧರ್ಮಶಾಲೆಯಂತೆ ಗೋಚರಿಸುತ್ತಿತ್ತು. ಸರಳ ಸ್ವಭಾವದ ಜಯಮ್ಮನವರು ಸಕಲರೆಡೆಗೂ ಅಂತಃಕರಣ ತೋರುತ್ತಿದ್ದ ಗುಣವಂತೆಯಾಗಿದ್ದರು. ಒಮ್ಮೆ ಅವರು ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು, ಅಷ್ಟರಲ್ಲಿ ಭಿಕ್ಷುಕನೊಬ್ಬ 'ಕವಳಾತಾಯೀ' ಎಂದು ಕೂಗಿದ ಶಬ್ದ ಕಿವಿಗೆ ಬಿತ್ತು. ಕೆಲಸದಾಳನ್ನು ಕರೆದು ಮೊದಲು ಆ ಭಿಕ್ಷುಕನಿಗೊಂದಿಷ್ಟು ಊಟ ಹಾಕು ಎಂದು ಹೇಳಿದರು. ಮನೆಯಾಳು ಒಂದಷ್ಟು ಅನ್ನ-ಸಾರನ್ನು ಎಲೆಯಲ್ಲಿ ಹಾಕಿಕೊಂಡು ಭಿಕ್ಷುಕನಿಗೆ ಹಾಕಲು ಹೊರಟಾಗ ಅವನನ್ನು ತಡೆದು, ಆತನಿಗೆ ಅಷ್ಟು ಆಹಾರ ಸಾಲುವುದಿಲ್ಲ. ಅವನು ಹಸಿದಿರುತ್ತಾನೆ, ಒಳಕರೆದು ಎಲೆಹಾಕಿ ಹೊಟ್ಟೆತುಂಬಾ ಬಡಿಸು ಎಂದರು. ಅವರ ಆದೇಶದಂತೆ ಭಿಕ್ಷುಕನನ್ನು ಒಳಕರೆದು, ಹೊಟ್ಟೆತುಂಬಾ ಊಟ ಹಾಕಿ ಕಳುಹಿಸಿದ ನಂತರವೇ ಜಯಮ್ಮನವರು ಊಟ ಮಾಡಿದ್ದು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.