ನೀವು ನೀಡುವ ಊಟದಲ್ಲಿ ರಕ್ತದ ವಾಸನೆಯಿದೆ
ಸಿಖ್ ಧರ್ಮ ಸ್ಥಾಪಕ ಗುರುನಾನಕರು ನಾಡು ಕಂಡ ಒಬ್ಬ ಅಪ್ರತಿಮ ಮಾನವತಾವಾದಿ. ಅವರು ಸಿಖ್ಖರ ಮೊದಲ ಗುರುವಾಗಿ, ಸಿಖ್ ಧರ್ಮಕ್ಕೆ ಒಂದು ಹೊಸ ಪರಂಪರೆ ಸೃಷ್ಟಿಸಿದವರು. ಸಮಾನತೆ, ಪ್ರೀತಿ ಮತ್ತು ಭಾತೃತ್ವ ಭಾವನೆಯನ್ನು ಎಲ್ಲರಲ್ಲೂ ಬಿತ್ತಿದವರು. ಅವರ ಬೋಧನೆಗಳೆಲ್ಲ ಗ್ರಂಥ ಸಾಹಿಬ್‌ನಲ್ಲಿ ಉಕ್ತವಾಗಿವೆ. ದೇವರು ಹಿಂದೂವಾಗಲೀ, ಮುಸಲ್ಮಾನನಾಗಲೀ ಅಲ್ಲ. ಹೀಗಾಗಿ ತಾನು ದೇವರ ಹಾದಿಯಲ್ಲಿ ನಡೆಯುತ್ತೇನೆಂದು ತಿಳಿಸಿದ ಪವಿತ್ರಾತ್ಮರಾಗಿದ್ದರು. ಒಮ್ಮೆ ಅವರು ತಮ್ಮ ಶಿಷ್ಯರೊಡನೆ, ರಾವಲ್ಪಿಂಡಿ ಪ್ರದೇಶದಲ್ಲಿ ಸಂಚಾರಮಾಡುತ್ತಿದ್ದರು. ಅಲ್ಲಿದ್ದ ಲಾಲೋ ಎಂಬ ದಲಿತ ಬಡಗಿ ನಾನಕರನ್ನು ಕಂಡು ಪುಳಕಿತನಾಗಿ, ತಮ್ಮ ಮನೆಗೆ ಬಂದು ಉಪಹಾರ ಸ್ವೀಕರಿಸಬೇಕೆಂದು ಮನವಿಮಾಡಿಕೊಂಡ. ಅವನ ನಯ-ವಿನಯ, ಭಕ್ತಿ-ಭಾವ ಕಂಡು ನಾನಕರಿಗೆ ಸಂತೋಷವಾಯಿತು. ಬಡಗಿಯ ಮನೆಗೆ ಬಂದು ಉಪಹಾರ ಸ್ವೀಕರಿಸಿದ್ದೂ ಅಲ್ಲದೆ, ಅಲ್ಲಿಯೇ ತಂಗಿದರು ಕೂಡ. ಆ ವಿಚಾರ ಊರಿನ ಮುಖಂಡನಿಗೆ ತಿಳಿಯಿತು. ನಾನಕರಂತಹ ಮಹಾಪುರುಷ ಕೀಳುಜಾತಿಯವನ ಮನೆಯಲ್ಲಿರುವುದು ಅವನಿಗೆ ಸಹಿಸದಾಯಿತು. ಮಾರನೇ ದಿನವಾದರೂ ನಾನಕರನ್ನು ಕರೆದು ಸತ್ಕರಿಸಬೇಕೆಂದು ನಿರ್ಧರಿಸಿ, ವಿವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ, ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ. ಮನೆಗೆ ಬಂದ ನಾನಕರನ್ನು ಅತ್ಯಂತ ವಿಜೃಂಭಣೆಯಿಂದ ಬರಮಾಡಿಕೊಂಡು, ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಿದ. ಇಂತಹ ತೋರಿಕೆಯ ವಿಶ್ವಾಸಕ್ಕೆ ಎಂದಿಗೂ ಮಣೆಹಾಕದ ನಾನಕರು ಕ್ಷಣಕಾಲ ಅಲ್ಲಿ ತಂಗಿದ್ದು ಅಲ್ಲಿಂದ ಹೊರಡಲನುವಾದರು. ಆದರೆ ಶ್ರೀಮಂತ ತಮ್ಮ ಮನೆಯಲ್ಲಿ ಆಹಾರ ಸೇವಿಸಿ ಕೆಲಕಾಲ ತಂಗಬೇಕೆಂದು ಬೇಡಿಕೊಂಡರೂ ಸಹ ಸೊಪ್ಪುಹಾಕದೆ, ತಾವು ಅಲ್ಲಿ ಊಟ ಮಾಡುವುದಿಲ್ಲವೆಂದು ತಿಳಿಸಿದರು. ಇದರಿಂದ ಶ್ರೀಮಂತನಿಗೆ ತುಂಬಾ ಕೋಪಬಂದು, ಕೀಳು ಜಾತಿಯ ಬಡಗಿಯ ಮನೆಯ ಊಟವೇ ಮೃಷ್ಟಾನ್ನ ಭೋಜನವಾಯಿತೆ? ಎಂದು ಅಸಮಾಧಾನದಿಂದ ಕೇಳಿದ. ಶಾಂತಸ್ವರೂಪರಾದ ನಾನಕರು ಅವನ ಮಾತಿಗೆ ಬೇಸರಿಸಲಿಲ್ಲ, ಕೋಪಗೊಳ್ಳಲೂ ಇಲ್ಲ. ಅವರು ತಮ್ಮ ಎಂದಿನ ಮೃದುವಾದ ಮಾತುಗಳಲ್ಲಿ ಹೇಳಿದರು, ನೀವು ನೀಡುತ್ತಿರುವ ಭೋಜನ ಉತ್ಕೃಷ್ಟವಾಗಿರಬಹುದು, ಆದರೆ, ಅದರಲ್ಲಿ ರಕ್ತದ ದುರ್ವಾಸನೆ ಬರುತ್ತಿದೆ, ಏಕೆಂದರೆ ಅದು ಬಡವರನ್ನು ಹೀರಿ ಸಂಪಾದಿಸಿದ್ದು. ಆದರೆ ಲಾಲೋ ಕಷ್ಟಪಟ್ಟು ಸಂಪಾದಿಸಿರುವುದರಿಂದ ಅವನು ನೀಡಿದ ಆಹಾರದಲ್ಲಿ ಮೃಷ್ಟಾನ್ನದ ಸವಿಯಿದೆ ಎಂದು ಹೇಳಿ ಯಾರು ಎಷ್ಟು ಸಂಪಾದನೆ ಮಾಡಿದರು ಎನ್ನುವುದಕ್ಕಿಂತ ಹೇಗೆ ಸಂಪಾದಿಸಿದರು ಎನ್ನುವುದು ಮುಖ್ಯ ವಿಷಯವಾಗಿರುವುದರಿಂದ ತನ್ನ ನಿಲುವು ಸರಿಯಿದೆ ಎಂದು ನಿರ್ದಕ್ಷಿಣ್ಯವಾಗಿ ನುಡಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

