ಕಾರಂತರ ಪ್ರಾಮಾಣಿಕತೆ
ಕಡಲ ತೀರದ ಭಾರ್ಗವರೆಂದೇ ಹೆಸರಾದ ಶಿವರಾಮ ಕಾರಂತರು ಸಾಹಿತ್ಯ ಮತ್ತು ಕಲೆಯಲ್ಲಿ ಅಪಾರ ಆಸಕ್ತಿಯನ್ನಿಟ್ಟುಕೊಂಡಿದ್ದರು. ಪ್ರಖರ ವಾಗ್ಮಿಗಳೂ, ನುಡಿದಂತೆ ನಡೆವ, ನಿಷ್ಠುರ ಸ್ವಭಾವದ ಕಾರಂತರು ನಮ್ಮ ನಾಡಿಗೆ ಜ್ಞಾನಪೀಠ ಪ್ರಶಸ್ತಿತಂದವರಲ್ಲೊಬ್ಬರು. ಅವರ ಪ್ರತಿ ಕೆಲಸದಲ್ಲಿಯೂ ಅಚ್ಚುಕಟ್ಟುತನ, ಪ್ರಾಮಾಣಿಕತೆ ಮತ್ತು ಶಿಸ್ತಿಗೆ ಪ್ರಾಧಾನ್ಯತೆ ಇರುತ್ತಿತ್ತು. ವಿಜ್ಞಾನ, ಇತಿಹಾಸ, ಮಕ್ಕಳ ಸಾಹಿತ್ಯ, ಕಾದಂಬರಿ ಮುಂತಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ತಮಗೆ ಸರಿಯೆನಿಸದೇ ಇರುವುದನ್ನು ಮುಖಮುರಿದಂತೆ ನುಡಿಯುತ್ತಿದ್ದುದರಿಂದ ಅವರೊಡನೆ ವ್ಯವಹರಿಸುವಾಗ ಎಲ್ಲರೂ ತುಂಬ ಎಚ್ಚರಿಕೆ ವಹಿಸುತ್ತಿದ್ದರು.
ಒಮ್ಮೆ ಒಂದು ಶಾಲೆಯ ಸಮಾರಂಭಕ್ಕೆ ಅವರು ಮುಖ್ಯ ಅತಿಥಿ. ಮಕ್ಕಳಿಗೆ ಹಿತವಾಗುವಂತೆ ಮಾತನಾಡಿ, ಪೋಷಕರಿಗೆ ಕೆಲವು ಎಚ್ಚರಿಕೆಯ ಮಾತುಗಳು, ಸಲಹೆಗಳನ್ನು ನೀಡಿ, ವೇದಿಕೆಯಿಂದ ಇಳಿದಾಗ ಆಗಲೇ ರಾತ್ರಿ ಒಂಬತ್ತು ಗಂಟೆ ಮೀರಿತ್ತು. ಆದ್ದರಿಂದ ಯಾವುದೇ ಉಪಚಾರಕ್ಕೂ ಕಾಯದೇ, ಊಟ, ಕಾಫಿ ಮುಂತಾದವುಗಳನ್ನು ಸೀಕರಿಸದೆಯೇ ತಮ್ಮ ಕಾರಿನಲ್ಲಿ ಕುಳಿತು ಹೊರಟೇಬಿಟ್ಟರು. ಆ ಅವಸರದಲ್ಲಿ ಆಯೋಜಕರಿಗೆ ಕಾರಂತರಿಗೆ ಪ್ರಯಾಣದ ಖರ್ಚನ್ನು ನೀಡುವುದು ಸಹ ಮರೆತು ಹೋಯಿತು. ಅದಾಗಿ ಎರಡೇ ದಿನಗಳಲ್ಲಿ ಕಾರಂತರಿಂದ ಮುಖ್ಯ ಶಿಕ್ಷಕರಿಗೆ ಒಂದು ಪತ್ರ ಬಂತು. ಅದರಲ್ಲಿ ತಮ್ಮ ಪ್ರಯಾಣವೆಚ್ಚ ಕೊಡದೇ ಇರುವುದನ್ನು ನೆನಪಿಸಿ, ಅದನ್ನು ತಕ್ಷಣ ಕಳುಹಿಸಲು ತಿಳಿಸಲಾಗಿತ್ತು. ಮರುದಿನ ಮುಖ್ಯ ಶಿಕ್ಷಕರು ಕಾರಂತರ ಮನೆಗೇ ಹೋಗಿ, ಆದ ಪ್ರಮಾದಕ್ಕೆ ಕ್ಷಮೆ ಕೋರಿ, ಹಣವಿದ್ದ ಲಕೋಟೆಯನ್ನು ಅವರ ಮೇಜಿನ ಮೇಲಿಟ್ಟು ಹೊರನಡೆದರು. ಮತ್ತೆ ಎರಡು ದಿನಗಳಲ್ಲಿ ಇನ್ನೊಂದು ಪತ್ರ ಶಾಲೆಯ ಮುಖ್ಯ ಶಿಕ್ಷಕರಿಗೆ ಬಂತು. ಅದರಲ್ಲಿ, ತಮ್ಮ ಪ್ರಯಾಣವೆಚ್ಚ ಕೇವಲ ನಾಲ್ಕುನೂರು ರುಪಾಯಿಗಳು ಮಾತ್ರ. ಹೆಚ್ಚಿಗೆ ನೀಡಿದ ಎರಡುನೂರು ರುಪಾಯಿಗಳನ್ನು ಮನಿಯಾರ್ಡರ್ ಮೂಲಕ ವಾಪಸ್ಸು ಕಳುಹಿಸುತ್ತಿರುವುದಾಗಿ ತಿಳಿಸಲಾಗಿತ್ತು. ಇದು ಕಾರಂತರ ಪ್ರಾಮಾಣಿಕತೆಯನ್ನು ತಿಳಿಸಿಕೊಡುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

