ತಪ್ಪಾಯ್ತು ತಿದ್ಕೋತೀವಿ
ಶಿಕಾರಿಪುರದಿಂದ ಪರಶುರಾಮ್ ಅವರು ಬರೆಯುತ್ತಾರೆ- 'ಜೂ.23ರ ಕ.ಪ್ರ. ಪುಟ 5 ರಲ್ಲಿ 'ಕೇಶವಿನ್ಯಾಸಕಾರರಾದ ದಲಿತರು' ಎಂಬ ಸುದ್ದಿಯಲ್ಲಿನ ಮೊದಲನೇ ಪ್ಯಾರಾದಲ್ಲಿ 'ಬಳ್ಳಾರಿಯ ಸಿರಗುಪ್ಪ ತಾಲೂಕಿನ ತಾಳೂರಿನಲ್ಲಿ ಇತ್ತೀಚೆಗೆ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದು ಗೊತ್ತೋ ಇದೆ' ಎಂದಿದೆ. ಮೊದಲನೆಯದಾಗಿ ಇದರಲ್ಲಿ 'ಗೊತ್ತೋ ಇದೆ' ಎಂಬುದು 'ಗೊತ್ತೇ ಇದೆ' ಎಂದಾಗಬೇಕಿತ್ತು.'
'ಇಲ್ಲಿ ತಿಳಿಸಿರುವ ವಿಷಯದ ಬಗ್ಗೆ ಹೇಳುವುದಾದರೆ ಕ.ಪ್ರ.ದಲ್ಲಿ ಜೂ.20ರಂದು ಪ್ರಕಟವಾದ ಸುದ್ದಿಯ ಪ್ರಕಾರ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ತಾಳೂರಿನಲ್ಲಿ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿರಲಿಲ್ಲ. ದಲಿತರಿಗೆ ಕ್ಷೌರ ಮಾಡಿದರು ಎಂಬ ಕಾರಣಕ್ಕಾಗಿ ಮೇಲ್ವರ್ಗದವರು ಕ್ಷೌರಿಕರ ಅಂಗಡಿಗಳಿಗೆ ಬರುತ್ತಿರಲಿಲ್ಲ. ಹೀಗಾಗಿ ಜೂ.23ರ 'ಕೇಶವಿನ್ಯಾಸಕಾರರಾದ ದಲಿತರು' ಎಂಬ ಸುದ್ದಿಯ ವಿವರಣೆ ನೀಡುವಾಗ ಲೇಖಕರು ತಾಳೂರಿನಲ್ಲಿ ನಡೆದ ಘಟನೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ' ಎಂದಿದ್ದಾರೆ.
ಲೇಖಕರು ಘಟನೆಯನ್ನು ತಪ್ಪಾಗಿ ಅರ್ಥೈಸಿಲ್ಲ. ತಾಳೂರಿನಲ್ಲಿ ಮೇಲ್ವರ್ಗದವರು ದಲಿತರಿಗೆ ಕ್ಷೌರ ಮಾಡಿದರೆ ತಾವು ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ದಲಿತರಿಗೆ ಕ್ಷೌರ ಮಾಡುವವರು ಸಿಗುತ್ತಿರಲಿಲ್ಲ. ಇದರಿಂದ ದಲಿತರು ತಾವೇ ಕ್ಷೌರ ಮಾಡಿಕೊಳ್ಳಲು ಆರಂಭಿಸಿದ್ದರಿಂದ ಅವರೇ ಕೇಶವಿನ್ಯಾಸಕಾರರಾದರು ಎಂಬುದು ಲೇಖನದ ಸಾರಾಂಶ. ಅದು ಸರಿಯಾಗಿಯೇ ಇದೆ.
ಬಾಗಲಕೋಟೆ ಜಿಲ್ಲೆ ಹುನುಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಜೂ.19ರಂದು ಪುಟ 7 ರಲ್ಲಿಯ ಲೇಖನ 'ತನಿಖೆ ಮುಗಿದಿದ್ದರೂ ಈ 35 ಮಂದಿಗೇಕೆ ಜಾಮೀನು ಸಿಗುತ್ತಿಲ್ಲ?' ಎಂಬಲ್ಲಿ ಜಾಮೀನು ಕೊಡದಿರುವುದನ್ನು ಬೆಳಕಿಗೆ ತಂದು ತಮ್ಮ ಸಿಬಿಐ ಎಂಬ ತನಿಖಾ ಸಂಸ್ಥೆಯ ಇ್ಝಛಡಜಜ ವಿಚಾರಣೆಯ ಅನಾಹುತವನ್ನು ತೆರೆದಿಟ್ಟಿದ್ದಾರೆ. ಅತೀ ದಕ್ಷವೆಂದು ಹೇಳಿಕೊಳ್ಳುತ್ತಿರುವ ಸಿಬಿಐ ನಿಷ್ಪಕ್ಷಪಾತ ವಾಗಿ ಇರಬೇಕು. ಅಶಕ್ತರ ದುರಪಯೋಗ ಮಾಡಬಾರದು. ಇನ್ನು ಶ್ರೀಲಂಕಾ ಖೈದಿಗಳ ಬಗ್ಗೆ 'ನಮಗೆ ಕನಿಕರದೆ' ಅಂತಾ ಬರೆದಿದ್ದು 'ಕನಿಕರವಿದೆ' ಅಂತಾಗಬೇಕಿತ್ತು. ಅದರಂತೆ 'ಪೂರ್ವಗ್ರಹದಿಂದಲೇ' ಎನ್ನುವುದು 'ಪೂರ್ವಾಗ್ರಹ' ಅಂತಾಗಬೇಕಿತ್ತಲ್ಲವೇ?' ಎಂದಿದ್ದಾರೆ.
'ಪೂರ್ವಗ್ರಹ'ದ ಬಗ್ಗೆ ಸಂಗಪ್ಪ ಗಾಣಿಗೇರ ಅವರು ಈಗಾಗಲೇ ಈ ಅಂಕಣದಲ್ಲಿ ಪ್ರಕಟವಾದ ಚರ್ಚೆಯನ್ನು ಗಮನಿಸಿರಬಹುದಾದ್ದರಿಂದ ಇದಕ್ಕೆ ಮತ್ತೆ ವಿವರಣೆ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ.
ಶಿವಮೊಗ್ಗದಿಂದ ಬಿ.ಎಸ್. ಸರೋಜಾ ಭುಜಂಗಪ್ಪ ಅವರು ಬರೆಯುತ್ತಾರೆ- 'ಜು.1ರ 'ಬೈಟು ಕಾಫಿ' ಪುರವಣಿಯ ಪುಟ 2, 'ಕಿಚನ್ ಕಾರ್ನರ್' ಅಂಕಣದಲ್ಲಿ ಕೊಬ್ಬರಿ ಮಿಠಾಯಿ (ಬರ್ಫಿ) ತಯಾರಿಸುವ ಬಗ್ಗೆ ಮಾಹಿತಿ ನೀಡಿ ಸಪ್ಪೆಯಾಗಿ ತಿನಿಸಿದ್ದೀರಿ. ಇದಕ್ಕೆ ಸಕ್ಕರೆ/ಬೆಲ್ಲವನ್ನು ಎಷ್ಟು ಪ್ರಮಾಣದಲ್ಲಿ, ಯಾವಾಗ ಹಾಕಬೇಕೆಂಬ ಮಾಹಿತಿ ಇಲ್ಲ. ಅಥವಾ ಇದು ಕೇವಲ ಮದುಮೇಹಿಗಳಿಗಾ? ದಯ ಮಾಡಿ ತಿಳಿಸಿ' ಎಂದಿದ್ದಾರೆ.
'ಮಿಠಾಯಿ'ಯಲ್ಲಿ 'ಮೀಠಾ'ವೇ (ಸಿಹಿಯೇ) ಇಲ್ಲದಿದ್ದರೆ ಅದು 'ಮಿಠಾಯಿ' ಹೇಗಾದೀತು? ಸಿಹಿಯ ಪ್ರಮಾಣ ಬಿಟ್ಟುಹೋಗಿದೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

