ತನ್ನನ್ನು ನಿಂದಿಸಿ ಬರೆದ ಪುಸ್ತಕಕ್ಕೆ ನೆರವು
ಡೆನಿಸ್ ಡಿಡಿರೋ ಹದಿನೇಳನೇ ಶತಮಾನದಲ್ಲಿದ್ದ ಪ್ರಸಿದ್ಧ ಫ್ರೆಂಚ್ ಲೇಖಕ. ರೂಸೋನ ಸಮಕಾಲೀನನಾದ ಈತ ಅನೇಕ ಮೌಲಿಕ ಕೃತಿಗಳನ್ನು ರಚಿಸಿ ಹೆಸರು ಗಳಿಸಿದ್ದಾನೆ. ಪ್ರಸಿದ್ಧ ಎನ್‌ಸೈಕ್ಲೋಪೀಡಿಯಾದ ರಚನೆ ಮಾಡಿದ ತತ್ವಜ್ಞಾನಿ. ಫ್ರೆಂಚ್ ಸಾಹಿತ್ಯಕ್ಕೆ ಮತ್ತು ತತ್ವಜ್ಞಾನಕ್ಕೆ ಡೆನಿಸ್ ಕೊಡುಗೆ ಅಪಾರ. ಅವನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಂತೆ, ಅವನನ್ನು ದ್ವೇಷಿಸುವ ಸಾಹಿತಿಗಳ ದಂಡೂ ಸಾಕಷ್ಟಿತ್ತು. ಒಮ್ಮೆ ಅವನು ತನ್ನ ಕೊಠಡಿಯಲ್ಲಿ ಕುಳಿತು ಅಧ್ಯಯನದಲ್ಲಿ ತೊಡಗಿದ್ದಾಗ ಒಬ್ಬ ಯುವ ಬರಹಗಾರ ತಾನು ಬರೆದ ಒಂದು ಕೃತಿಯ ಹಸ್ತಪ್ರತಿಯನ್ನು ತಂದು ಡಿಡಿರೋನಿಗೆ ನೀಡಿ ಅದನ್ನೋದಿ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡ. ಅದೊಂದು ಕಟುವಾದ ಶಬ್ದದಲ್ಲಿ ಡಿಡಿರೋವನ್ನು ನಿಂದಿಸಿ ಬರೆದ ಕೃತಿಯಾಗಿತ್ತು. ಅದನ್ನೋದಿ ಬೇಸರದಿಂದ "ನಿನ್ನ ಉದ್ದೇಶವಾದರೂ ಏನು?" ಎಂದು ಪ್ರಶ್ನಿಸಿದ. ಅದಕ್ಕೆ ಆ ಬರಹಗಾರ ಹೇಳಿದ, "ತಾವು ಬಹುದೊಡ್ಡ ಲೇಖಕರು. ನಿಮ್ಮನ್ನು ಕಂಡರೆ ಆಗದ ಅನೇಕ ಬರಹಗಾರರು ನಮ್ಮಲ್ಲಿದ್ದಾರೆ. ಅವರಿಗೆ ನಿಮ್ಮನ್ನು ನಿಂದಿಸಿ ಬರೆದರೆ ಸಂತೋಷವಾಗುವುದು. ಇದರಿಂದ ಅವರ ಸ್ನೇಹವೂ ಪ್ರಾಪ್ತವಾಗುವುದರ ಜೊತೆಗೆ ನನ್ನ ಪುಸ್ತಕಕ್ಕೆ ಹೆಚ್ಚಿನ ಪ್ರಚಾರ ದೊರೆಯುತ್ತದೆ."
ಡಿಡಿರೋನಿಗೆ ಅವನ ಪುಸ್ತಕ ಪ್ರಚಾರ ಮಾಡಿಕೊಳ್ಳುವ ತಂತ್ರ ಮೆಚ್ಚುಗೆಯಾಯಿತು. ಅದರ ಪ್ರಕಟಣೆಗೆ ತಾನು ನೆರವಾಗುವುದಾಗಿ ತಿಳಿಸಿದ್ದಲ್ಲದೆ, ತನ್ನ ಕಡು ವಿರೋಧಿಯಾಗಿದ್ದ ಮಹಾಶಯರೊಬ್ಬರಿಗೆ ಈ ಕೃತಿಯನ್ನು ಚೆಂದದ ಮಾತುಗಳಲ್ಲಿ ಅಪರ್‌ಸಿಬಿಡು. ಅವರೇ ನಿನ್ನ ಪುಸ್ತಕ ಪ್ರಕಟಣೆಗೆ ನೆರವಾಗುತ್ತಾರೆ ಎಂಬ ಸಲಹೆಯನ್ನೂ ನೀಡಿದ. ಅದಕ್ಕೆ ಆ ಬರಹಗಾರ ಅವರಿಗೆ ಮೆಚ್ಚುಗೆಯಾಗುವಂತೆ ಸಮರ್ಪಣೆ ಬರೆಯಲು ತನಗೆ ಬರುವುದಿಲ್ಲವೆಂದೂ, ಡಿಡಿರೋರವರೇ ಅದನ್ನು ಬರೆದುಕೊಟ್ಟರೆ ತುಂಬಾ ಉಪಕಾರವಾಗುವುದೆಂದೂ ಮನವಿ ಮಾಡಿಕೊಂಡ. ಆಗ ಡಿಡಿರೋ ನಸುನಗುತ್ತಾ, ತಾವೇ ತಮ್ಮನ್ನು ನಿಂದಿಸಿ ಬರೆದ ಕೃತಿಯ ಅರ್ಪಣೆಯ ಸಾಲುಗಳನ್ನು ಸೊಗಸಾಗಿ, ಆಕರ್ಷಕವಾಗಿ ಬರೆದುಕೊಟ್ಟರು. ಅದನ್ನೋದಿದ ಅವರ ವಿರೋಧಿ ಮಹಾಶಯ, ತುಂಬಾ ಸಂತೋಷಪಟ್ಟು, ಆ ಕೃತಿಯ ಪ್ರಕಟಣೆಗೆ ಎಲ್ಲ ರೀತಿಯ ನೆರವನ್ನೂ ನೀಡಿದ!
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

