ಸಂಪಾದಕೀಯ

ಕ್ರಾಂತಿಕಾರಿಗಳ ದಿನ ಆಚರಣೆಗೆ ಬರಲಿ

Published On :

ಚಂದ್ರಶೇಖರ್ ಆಜಾದ್ ಕ್ರಾಂತಿಯ ಹಾದಿ ತುಳಿದು ನಮಗೆ ಸ್ವತಂತ್ರ ಕೊಡಿಸಲು, ಭಾರತಮಾತೆಯ ಋಣ ತೀರಿಸಲು ಹೋರಾಡಿ ಅಮರರಾಗಿದ್ದು, ಯುವಕರಿಗೆ ಸ್ಫೂರ್ತಿ ಸೆಲೆಯಾಗಿ ಕ್ರಾಂತಿಯ ಮನೋಭಾವನೆ ಬೆಳೆಸಿದ ವೀರನ 108ನೇ ಜನ್ಮದಿನಾಚರಣೆ ಮಂಗಳವಾರ ಆಗಿದೆ. ಅಂದೇ ಲೋಕಮಾನ್ಯ ತಿಲಕರ 158ನೇ ಜನ್ಮದಿನಾಚರಣೆಯೂ ಆಯಿತು.
ನಾವ್ಯಾರು ಮತ್ತು ಸರ್ಕಾರ ಆಜಾದ್‌ರ ಜನ್ಮದಿನಾಚರಣೆ ಹಾಗೂ ಅವರು ಶಹೀದರಾದ ದಿನವನ್ನು, ಆಚರಿಸುತ್ತಿಲ್ಲ,. ಕಡೇಪಕ್ಷ ಎರಡರಲ್ಲಿ ಒಂದಾದರೂ ಆಚರಿಸುವ ಸೌಜನ್ಯ ತೋರುತ್ತಿಲ್ಲವೇಕೇ? ಕ್ರಾಂತಿಕಾರಿಗಳ ವಿಷಯದಲ್ಲಿ ಸರ್ಕಾರ ಹೀಗೇಕೆ ನಡೆದುಕೊಳ್ಳುತ್ತಿದೆ? ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡುವ ಸರ್ಕಾರ ಒಬ್ಬ ಕ್ರಾಂತಿಕಾರಿ ಹೆಸರಲ್ಲಾದರೂ ಉಪಯುಕ್ತ ಯೋಜನೆಯ ಯೋಚನೆಯನ್ನಾದರೂ ಮಾಡಲಾಗಿದೆಯೋ? ಅವರ ಬಗ್ಗೆ ಅಸಡ್ಡೆ ಏಕೆ? ಬರೀ ಒಂದು ಕುಟುಂಬಕ್ಕೆ ಸಂಬಂಧಪಟ್ಟವರ ಹೆಸರಲ್ಲಿ ಹತ್ತಾರು ಯೋಜನೆಗಳು! ಇದು ಬೆಕ್ಕು ಬೆಣ್ಣೆ ತೂಗುವ ನ್ಯಾಯವಲ್ಲವೇ? ಭಗತಸಿಂಗ್, ಸುಖದೇವ್, ರಾಜ್‌ಗುರು ಇವರ ಬಲಿದಾನವನ್ನು ಜ್ಞಾಪಿಸಿಕೊಳ್ಳಬೇಡವೇ?
ನಿರ್ಲಕ್ಷ್ಯಕ್ಕೊಳಗಾದ ಹೋರಾಟಗಾರರ ಅಪ್ರತಿಮ ಸಾಧನೆ ಗೌಣವಾಗುವಂತೆ ಮಾಡುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಿವೇಚನೆ ಅಸಹ್ಯ ತರಿಸುವಂತದ್ದು. ಕೆಲವರು ಸಾಧನೆ ಮಾಡಿದರೆಂದು ಅವರು ಜೀವಂತವಿದ್ದಾಗಲೇ ದಂತಕಥೆ ಎಂದು ಹೊಗಳಿ ಅವರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು ಮಾಡುತ್ತಾರೆ. ಈಗ ಎಲ್ಲ ಪಠ್ಯಕ್ರಮ ಬದಲಾಯಿಸುವಾಗ ಈ ಹೆಮ್ಮೆಯ ಪುತ್ರರು ನೆನಪಾಗಲಿಲ್ಲವೇಕೇ? ಈ ಹೇಳಿಕೆಗೆ ಸಂಬಂಧಪಟ್ಟವರಿಗೆ ಜಾಣಕುರುಡುತನ-ಜಾಣ ಕಿವುಡುತನದ ಜೊತೆಗೆ ಅವರ ಬಗ್ಗೆ ಮಾತಾಡಲಾರದಷ್ಟು ಜಾಣ ಮೂಕತನವನ್ನು ತೋರಿಸುತ್ತಾರೆ. ಪ್ರಾಥಮಿಕ ಹಂತದಲ್ಲಿಯೇ ಚರಿತ್ರೆ ಇಲ್ಲದಿದ್ದರೆ ಹೇಗೆ? ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಯುವಕರು ದಾರಿ ತಪ್ಪಿ ನಕ್ಸಲೈಟ್ ಆಗುತ್ತಿರುವುದಕ್ಕೆ ಹೊಣೆ ಯಾರು? ಯುವಶಕ್ತಿ ಉಪಯೋಗಿಸಿಕೊಳ್ಳುವ ಜಾಣಕೆಲಸವಾಗದೇ ನಿರುದ್ಯೋಗಿಗಳನ್ನಾಗಿ ಕೈಕಟ್ಟಿ ಕೂಡ್ರಿಸಲಾಗಿದೆ.
ಮತೀಯ ಬೇಧವಿಲ್ಲದೇ ಯುವಜನತೆಯಲ್ಲಿ ಇಂದಿಗೂ ಅವರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂತಹವರ ಸ್ಮರಣೆಯಿಂದ ರಾಷ್ಟ್ರಪ್ರಜ್ಞೆ ಬಂದು ಯುವಕರಲ್ಲಿ ಕೋಮುಕಲಹ ನಡೆಯದೇ ರಾಷ್ಟ್ರಧರ್ಮದ ಆರಾಧಕರಾಗುತ್ತಾರೆ. ಕ್ರಾಂತಿಕಾರಿಗಳ ತತ್ವವನ್ನು ಹಿಂಸೆಯೆಂದು ನಮ್ಮ ನಾಯಕರು ಒಪ್ಪಿ ಅಘೋಷಿತವಾಗಿ ಕ್ರಾಂತಿಕಾರಿಗಳಿಗೆ ತಕ್ಕ ಗೌರವ ಇನ್ನೂ ದೊರೆಯದೇ ಇರುವುದು ನಾಚಿಕೆಗೇಡು! ಆಚರಣೆಯಿಂದ ಎಷ್ಟೋ ಜನ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ಸಿಡಿದೇಳಲು ಪ್ರೇರಣೆಯಾಗಬಹುದು. ಅವರಲ್ಲಿ ಭಾರತಮಾತೆಯನ್ನು ಸ್ವತಂತ್ರಗೊಳಿಸುವುದಕ್ಕಷ್ಟೇ 'ಮುಯ್ಯಿಗೆ ಮುಯ್ಯಿ' ಮಾರ್ಗ ಅನುಸರಿಸಿದರು. ನೀನು ಯಾರ ಅಭಿಮಾನಿ ಎಂದು ಕೇಳಿದರೆ ರೀಲ್‌ಲೈಫ್‌ನ ಚಿತ್ರನಟ-ನಟಿಯರ ಹೆಸರು ಹೇಳುವ ಇಂದಿನ ಪೀಳಿಗೆಗೆ ರಿಯಲ್ ಲೈಫ್‌ನ ಹೀರೋಗಳ ಪರಿಚಯ ಮಾಡಿಕೊಡದೇ ಇರುವುದು ಭಾರತ ಸ್ವತಂತ್ರ ಹೋರಾಟದ ಇತಿಹಾಸ ಮರೆಮಾಚುವ ಪ್ರಯತ್ನ. ಒಂದು ರೀತಿ 'ಐತಿಹಾಸಿಕ ಕಗ್ಗೊಲೆ' ಎನ್ನಬಹುದು.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. 'ಕ್ರಾಂತಿಕಾರಿಗಳ ದಿನ'ವೆಂದು ಆಚರಿಸಿ ಎಲ್ಲ ಕ್ರಾಂತಿಕಾರಿಗಳನ್ನು ಸ್ಮರಿಸುವಂತೆ ಶಾಲಾ,-ಕಾಲೇಜುಗಳಿಗೆ ನಿರ್ದೇಶನ ನೀಡಬೇಕು. ಇದಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಆಸ್ಥೆ ವಹಿಸಬೇಕು. ಮೊನ್ನೆ ಸಾವರ್ಕರ್ ಅವರನ್ನು ನೆನೆಯುವ ಮೂಲಕ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರರಾದರು. ಹೊಸಗಾಳಿ ಬೀಸಿದೆ.. ಮನ್ನಣೆ ಸಿಗುವ ಭರವಸೆ ಇದೆ ಎನಿಸಿದೆ.
- ಹನುಮಂತ .ಮ. ದೇಶಕುಲಕರ್ಣಿ

ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.