ಸಂಪಾದಕೀಯ

ಅಗತ್ಯವಾಗಿದ್ದ ಕ್ರಮ

Published On :

ವೈದ್ಯರ ಪ್ರಪಂಚದಲ್ಲಿ ಈಗ ದೊಡ್ಡ ರೀತಿಯಲ್ಲಿ ಚರ್ಚೆಯಾಗುತ್ತಿರುವ ವಿಷಯ ಎಂದರೆ, ಅನಗತ್ಯವಾಗಿ ವೈದ್ಯರು ಅವರ ಬಳಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಬಗೆ ಬಗೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆನ್ನುವ ದೂರನ್ನು ದೆಹಲಿ ಸರ್ಕಾರ (ಕೇಂದ್ರ) ತನಿಖೆಗೆ ಒಪ್ಪಿಸಲು ನಿರ್ಧರಿಸಿರುವುದು.
ವೈದ್ಯರು ಉದ್ದೇಶಪೂರ್ವಕವಾಗಿ ದುಬಾರಿ ಔಷಧಿಗಳನ್ನೇ ಕೊಳ್ಳಲು ಸಲಹೆ ನೀಡುವ ಪರಿಪಾಠ ಹಿಂದಿನಿಂದಲೂ ಇದ್ದಿದ್ದೇ. ಆ ವಿಚಾರದಲ್ಲಿ ಈಗ ಜನ ದೂರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಆದರೆ ಹಲವು ಸಜ್ಜನ ವೈದ್ಯರು ಈ ಪಿಡುಗುಗಳನ್ನು ಕುರಿತು ಆಗಾಗ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಇಂತಹ ಪಿಡುಗುಗಳಿಗೆ ಕಾಯಿದೆಯ ಮೂಲಕ ಪರಿಹಾರ ಹುಡುಕುವುದು ಕಷ್ಟ.
ಆದರೂ ಕೇಂದ್ರ ಸರ್ಕಾರ ಅನಗತ್ಯ ವೈದ್ಯ ಪರೀಕ್ಷೆಗಳ ವಿಚಾರದಲ್ಲಿ (ಅಲ್ಲಿ ವೆಚ್ಚದ ಬಾಬತ್ತು ದುಬಾರಿ) ತನಿಖೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹವೇ. ಈಗಂತೂ ಕ್ಲಿನಿಕಲ್ ಲ್ಯಾಬೊರೇಟರಿಗಳು ಎಲ್ಲ ಕಡೆ ಒಂದು ದೊಡ್ಡ ಉದ್ಯಮದಂತೆ ಬೆಳೆದು ನಿಂತಿರುವ ಸನ್ನಿವೇಶದಲ್ಲಿ ವೈದ್ಯರನ್ನು ಒಲಿಸಿಕೊಳ್ಳುವ ವ್ಯಾಪಾರೀ ಕಮಿಷನ್ ತಂತ್ರಗಾರಿಕೆಯ ಪ್ರಯೋಗ ವಿಪರೀತವಾಗಿರುವಂತಿದೆ. ಈ ವಿಚಾರದಲ್ಲಿ ವೈದ್ಯರ ವೃತ್ತಿ ನಿಷ್ಠ. ಅಧಿಕೃತ ಸಂಸ್ಥೆಗಳು ಆಸಕ್ತಿ ವಹಿಸದೇ ಹೋದರೆ, ಸರ್ಕಾರದ ಕ್ರಮಗಳು (ಒಂದು ವೇಳೆ ಅವು ಜಾರಿಗೆ ಬಂದರೂ) ಯಶಸ್ವಿಯಾಗುವುದು ಕಡು ಕಷ್ಟ. ವೈದ್ಯ ವೃತ್ತಿಯ ನಿಯಂತ್ರಣ ಸಂಸ್ಥೆಗಳಿಗೆ ಹೆಚ್ಚು ಅಧಿಕಾರವನ್ನು ಕೊಡುವ ಯೋಚನೆಯೂ ಸರ್ಕಾರದಲ್ಲಿರುವಂತಿದೆ. ಈಚೆಗೆ ಆ ಸಂಸ್ಥೆಗಳಲ್ಲೂ ಅವ್ಯವಹಾರದ ಸೋಂಕು ತಗುಲಿರುವಂತಿದೆ. ದೆಹಲಿ ತನಿಖೆಯ ಫಲಿತಾಂಶ ನಿಜಕ್ಕೂ ಕುತೂಹಲಕಾರಿಯಾದದ್ದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.