ನಿವೃತ್ತಿವೇತನ ನಿರಾಕರಿಸಿದ ಡಿವಿಜಿ
ತಾವು ನಂಬಿದ ತತ್ವಗಳನ್ನು ಎಷ್ಟೇ ಕಷ್ಟ ಬಂದರೂ ಚಾಚೂ ತಪ್ಪದೆ ಪಾಲಿಸಿದವರ ಪೈಕಿ ಡಿ.ವಿ.ಜಿ. ಅವರು ಅಗ್ರಗಣ್ಯರಾಗಿದ್ದಾರೆ. ಕನ್ನಡದ ಭಗವದ್ಗೀತೆಯೆಂದೇ ಖ್ಯಾತವಾದ 'ಮಂಕುತಿಮ್ಮನ ಕಗ್ಗ' ವನ್ನು ನೀಡಿದ ದಾರ್ಶನಿಕರವರು. ಮೈಸೂರಿನ ದಿವಾನರುಗಳ ನಿಕಟ ಪರಿಚಯವಿಟ್ಟುಕೊಂಡಿದ್ದ ಡಿ.ವಿ.ಜಿ, ಎಂದಿಗೂ ತಮ್ಮ ಹಿತಕ್ಕಾಗಿ ಆ ಪರಿಚಯವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಆಗಾಗ್ಗೆ ಇವರ ಸಲಹೆ ಪಡೆದ ವಿಶ್ವೇಶ್ವರಯ್ಯನವರು ಅದಕ್ಕಾಗಿ ನೀಡಿದ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕದೇ, ಸ್ವಾಭಿಮಾನವನ್ನು ಮೆರೆದವರು. ತಮ್ಮ ಬಡತನವನ್ನೆಂದೂ ದೊಡ್ಡ ವಿಷಯವೆಂದು ಭಾವಿಸಿದವರೇ ಅಲ್ಲ. ಸಮಾಜ ಸೇವಕನೆಂದೂ ಪ್ರಚಾರ, ಹೆಸರು, ಗೌರವ ಮತ್ತು ಆರ್ಥಿಕ ಲಾಭಕ್ಕಾಗಿ ಆಸೆ ಪಡಬಾರದು ಎಂಬ ನಿಲವನ್ನು ಹೊಂದಿದ್ದ ನಿಷ್ಠಾವಂತರವರು. ತಮಗೆ ಸನ್ಮಾನ ಮಾಡಿ ನೀಡಿದ ಹಮ್ಮಿಣಿ ಹಣವನ್ನು ಗೋಖಲೆ ಸಂಸ್ಥೆಗೆ ನೀಡಿದ ಮಹಾ ಪುರುಷ. ಇಂತಹ ಶ್ರೇಷ್ಠ ವ್ಯಕ್ತಿ ಡಿವಿಜಿಯವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ತುಂಬಾ ಸೊರಗಿದ್ದರು. ತಮ್ಮ ಮಗ ಬಿ.ಜಿ.ಎಲ್ ಸ್ವಾಮಿಯವರು ಕಳುಹಿಸುತ್ತಿದ್ದ ಹಣವನ್ನೇ ಅವರು ಪೂರ್ಣ ಅವಲಂಬಿಸಿದ್ದರು. ಅವರ ತತ್ವನಿಷ್ಠೆಗೆ ನಿದರ್ಶನವಾದ ಈ ಘಟನೆ ಅವರ ಸ್ವಾಭಿಮಾನದ ಸಂಕೇತವಾಗಿ ಅವರ ಬಗ್ಗೆ ನಮಗಿರುವ ಗೌರವವನ್ನು ಹೆಚ್ಚಿಸಿದೆ:
ಕರ್ನಾಟಕ ಸರ್ಕಾರ 1970ರಲ್ಲಿ ಸಾಹಿತ್ಯ, ಸಂಗೀತ ಮತ್ತು ಕಲಾಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಸಾಧಕರಿಗೆ ನಿವೃತ್ತಿ ವೇತನ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಸರ್ಕಾರ ಸಿದ್ಧಪಡಿಸಿದ ಪಟ್ಟಿಯಲ್ಲಿ ಡಿ.ವಿ.ಗುಂಡಪ್ಪನವರ ಹೆಸರೂ ಇತ್ತು. ಅದು ಪತ್ರಿಕೆಯಲ್ಲಿಯೂ ಪ್ರಕಟವಾಯಿತು. ಅದನ್ನು ಗಮನಿಸಿದ ಡಿವಿಜಿಯವರಿಗೆ ಸಂತೋಷವಾಗುವುದರ ಬದಲು ಬೇಸರವಾಯತು. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು, ಸಾರ್ವಜನಿಕ ಹಣದ ಮೇಲೆ ತಾವೆಂದೂ ಭಾರವಾಗಿರಲು ಇಚ್ಛಿಸುವುದಿಲ್ಲವೆಂದೂ, ತಮ್ಮ ಹೆಸರನ್ನು ಪಿಂಚಿಣಿದಾರರ ಪಟ್ಟಿಯಿಂದ ತೆಗೆದುಹಾಕಬೇಕೆಂದೂ ಹೇಳಿದರು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

