ತಪ್ಪಾಯ್ತು ತಿದ್ಕೋತೀವಿ
ರಾಯಚೂರು ಜಿಲ್ಲೆ ಮಾನ್ವಿಯಿಂದ ಅಂಬಮ್ಮ ಪ್ರತಾಪಸಿಂಗ್ ಅವರು ಬರೆಯುತ್ತಾರೆ- 'ಪತ್ರಿಕೆಯ 'ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ದೊಡ್ಡಬಳ್ಳಾಪುರದ ಡಾ.ಕೆ.ಎನ್.ಬಿ. ರಾಜ್ ಅವರು 'ಪೂರ್ವಾಗ್ರಹ' ಪದವೇ ಸರಿಯಾದುದು ಎಂಬ ಧಾಟಿಯಲ್ಲಿ ಪತ್ರ ಬರೆದಿದ್ದಾರೆ. ಅವರು 'ಪೂರ್ವಾಗ್ರಹ'ದ ಬಗ್ಗೆ 'ಪೂರ್ವಗ್ರಹ' ಹೊಂದಿರುವುದಕ್ಕೆ ಈ ಪ್ರತಿಕ್ರಿಯೆ.'
'ಅವರು 'ಪೂರ್ವಗ್ರಹ' ಎಂಬುದರ ಅರ್ಥವೇನು? ಯೋಚಿಸಿರಿ ಎಂದು ಬರೆದಿದ್ದಾರೆ. 'ಪೂರ್ವ' ಎಂದರೆ ಹಿಂದಿನದು, ಅಥವಾ ಪ್ರಾಚೀನವಾದುದು. 'ಗ್ರಹ' ಎಂದರೆ ಮನಸ್ಸಿನಲ್ಲಿ ಮೊದಲೇ ಮಾಡಿಕೊಂಡ ಅಭಿಪ್ರಾಯ. 'ಪೂರ್ವಾಗ್ರಹ' ಎಂದರೆ ಈ ಹಿಂದೆ ಮನಸ್ಸಿನಲ್ಲಿ ಮಾಡಿಕೊಂಡ ಅಭಿಪ್ರಾಯ ಎಂದರ್ಥ. ಇದನ್ನು ಯಾವುದೇ ವಿಷಯದ ಕುರಿತು ಅಥವಾ ವ್ಯಕ್ತಿಯ ಕುರಿತು ಪೂರ್ವಗ್ರಹಪೀಡಿತರಾಗಿ ಯೋಚಿಸಬಾರದು ಎಂಬರ್ಥದಲ್ಲಿ ಬಳಸುತ್ತೇವೆ. ಆದರೆ ಯಾವುದೇ ವಿಷಯವಾಗಲಿ ಅಥವಾ ವ್ಯಕ್ತಿಯಾಗಲಿ ಒಬ್ಬೊಬ್ಬರ ಅಭಿಪ್ರಾಯ ಅವರವರ ದೃಷ್ಟಿಕೋನದಲ್ಲಿ ಬೇರೆ ಬೇರೆಯಾಗಿರುತ್ತದೆ. ಯಾವುದೇ ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಬಗ್ಗೆ ನಾವು ಬೇರೆ ಬೇರೆಯವರ ದೃಷ್ಟಿಕೋನದಿಂದ ಯೋಚಿಸಬಾರದು. ನಾವು ನಮ್ಮದೇ ಅಭಿಪ್ರಾಯ ಹೊಂದಿರಬೇಕು. ಇಲ್ಲವಾದಲ್ಲಿ ನಾವು 'ಪೂರ್ವಗ್ರಹ' ಪೀಡಿತರಾಗುತ್ತೇವೆ.'
'ಆದ್ದರಿಂದ ಡಾ.ಕೆ.ಎನ್.ಬಿ.ರಾಜ್ ಅವರು 'ಪೂರ್ವಾಗ್ರಹ'ದ ಬಗ್ಗೆ 'ಪೂರ್ವಗ್ರಹ' ಪೀಡಿತರಾಗದೆ 'ಪೂರ್ವಗ್ರಹ'ದ ಅರ್ಥವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ರತ್ನಕೋಶ 1994ರ ಆವೃತ್ತಿಯ ಪುಟ 152ರಲ್ಲಿ ನೋಡಬೇಕಾಗಿ ವಿನಂತಿ' ಎಂದಿದ್ದಾರೆ.
ಈ ನಡುವೆ ಡಾ.ಕೆ.ಎನ್.ಬಿ. ರಾಜ್ ಅವರು ಬಹಳ ಬೇಸರದಿಂದ ಪತ್ರ ಬರೆದಿದ್ದಾರೆ. ಎಚ್. ಆನಂದರಾಮ ಶಾಸ್ತ್ರಿಯವರು ಕಟುವಾದ ಶಬ್ದಗಳಿಂದ ಟೀಕಿಸಿದ್ದೇ ಈ ಬೇಸರಕ್ಕೆ ಕಾರಣ ಎಂದಿದ್ದಾರೆ. ಅವರು ಬರೆದ ಪತ್ರವನ್ನು ಸಂಪೂರ್ಣವಾಗಿ ಇಲ್ಲಿ ಪ್ರಕಟಿಸುವುದು ಸಾಧ್ಯವಿಲ್ಲವಾದರೂ ಅದರ ಆಯ್ದ ಭಾಗವನ್ನು ಮಾತ್ರ ಪ್ರಕಟಿಸುತ್ತಿದ್ದೇನೆ. ಅವರು ಬರೆಯುತ್ತಾರೆ-
'ನಾನು ವೇದಾಧ್ಯಯನ ಪೌರೋಹಿತ್ಯ ಮಾಡಿದ್ದೇನೆ. ಆದರೆ 'ಪೂರ್ವಗ್ರಹ' ಎಂಬ ವಿಕೃತ ಶಬ್ದವನ್ನು ಎಲ್ಲಿಯೂ ಓದಿಲ್ಲ. ಯಾರಿಂದಲೂ ಈ ಪದದ ಉಚ್ಛಾರಣೆಯನ್ನು ಕೇಳಿಲ್ಲ. ಸ್ವಪ್ರತಿಷ್ಠೆ ಮೆರೆಯುವವರ ಒತ್ತಾಯದಿಂದ ಮಾತ್ರ ಕೆಲವು ವರ್ಷಗಳಿಂದ'ಕನ್ನಡಪ್ರಭ'ದಲ್ಲಿ ಕಾಣಿಸಿಕೊಂಡು ವಿವಾದ ಸೃಷ್ಟಿಸುತ್ತಿದೆ. 'ಪೂರ್ವಾಗ್ರಹ' ಪದವೇ ಇಲ್ಲ, 'ಪೂರ್ವಗ್ರಹ' ಮಾತ್ರ ಎಂಬುದಾಗಿ ಕತ್ತಿ ಝಳಪಿಸುತ್ತಿರುವ ಎಚ್.ಆನಂದರಾಮ ಶಾಸ್ತ್ರಿ ಅವರು ಆ ಪದ ಯಾವ ಗ್ರಂಥದಲ್ಲಿದೆ ಎಂಬುದನ್ನು ಆಧಾರಸಹಿತವಾಗಿ ಸಮರ್ಥಿಸಿಕೊಳ್ಳಲಿ, ಅದನ್ನು ಒಪ್ಪುತ್ತೇನೆ. ಅದುಬಿಟ್ಟು ತನ್ನದೇ ಆದ ವಾದ ಮಾಡಿದರೆ ಸಹಿಸಲಾರೆ. ಕನ್ನಡ ಪದಗಳು ಅಪಭ್ರಂಶ ಆಗಬಾರದು ಎಂಬುದು ನನ್ನ ಕಳಕಳಿ ಹೊರತು ಅವರಂತೆ ಸ್ವಪ್ರತಿಷ್ಠೆ ಮತ್ತು ಮೊಂಡುವಾದವಲ್ಲ' ಎಂದಿದ್ದಾರೆ.
ನನ್ನ ಪ್ರಕಾರ ಎಚ್ ಆನಂದರಾಮ ಶಾಸ್ತ್ರಿ ಅವರು ಕೂಡ ಡಾ.ಕೆ.ಎನ್.ಬಿ. ರಾಜ್ ಅವರ ಬಗ್ಗೆ ಯಾವುದೇ 'ಪೂರ್ವಗ್ರಹ'ವಿಲ್ಲದೇ ಪತ್ರ ಬರೆದಿದ್ದಾರೆ ಮತ್ತು ಅವರ ಕಾಳಜಿ ಕೂಡ ಕನ್ನಡ ಪದಗಳು ತಪ್ಪಾಗಿ ಬಳಕೆಯಾಗಬಾರದು ಎಂಬುದೇ ಆಗಿದೆ ಎಂದು ನಾನು ಭಾವಿಸಿದ್ದೇನೆ. ಆದ್ದರಿಂದ ಪರಸ್ಪರ ಟೀಕೆಗಳು ಸರಿಯಾದ ಬಳಕೆಗೆ ಸೀಮಿತವಾಗಿರಲಿ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

