ಸಂಪಾದಕೀಯ

ಮುಖ್ಯಮಂತ್ರಿಗಳ ಮನೆಯಲ್ಲಿ ಹೆಚ್ಚು ಕುರ್ಚಿಗಳಿರಲಿಲ್ಲ

Published On :

ಕೇರಳದ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್.ನಂಬೂದರಿಪಾಡ್ ನಿಸ್ಪೃಹರೂ, ಪ್ರಾಮಾಣಿಕರೂ ಮತ್ತು ಸರಳಜೀವಿಗಳಾಗಿದ್ದರು. ಕೇರಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಎರಡು ಅವಧಿಯಲ್ಲಿ ಒಟ್ಟು ನಾಲ್ಕುವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಜನಪ್ರೀತಿಯನ್ನು ಗಳಿಸಿದ್ದರು. ಕೆಲಕಾಲ ಕೇರಳ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿದ್ದರು. ಆಧುನಿಕ ಮಲಯಾಳೀ ಸಾಹಿತ್ಯ ಬೆಳವಣಿಗೆಯಲ್ಲಿ ಅವರ ಪಾತ್ರ ಹಿರಿದಾಗಿತ್ತು. ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಭೂಸುಧಾರಣಾ ಕಾನೂನು ಮತ್ತು ಶಿಕ್ಷಣ ಸುಧಾರಣೆ ನಂಬೂರಿಪಾಡ್‌ರವರ ಕೊಡುಗೆಯಾಗಿದೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕರಾಗಿದ್ದು, ರಾಜ್ಯವನ್ನು ಪ್ರಗತಿಪಥದಲ್ಲಿ ಒಯ್ಯುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ರಾಜನೀತಿಯಲ್ಲಿ ವಿಶುದ್ಧ ಚಾರಿತ್ರ್ಯವನ್ನು ಹೊಂದಿದವರಾಗಿದ್ದರು. ಅತಿ ಸರಳ ಜೀವನ ನಡೆಸುತ್ತಿದ್ದ ನಂಬೂದರಿಪಾಡ್‌ರವರ ಮನೆಯಲ್ಲಿ ಯಾವುದೇ ಆಡಂಬರಕ್ಕೆ ಎಡೆಯಿರಲಿಲ್ಲ.  ಮುಖ್ಯಮಂತ್ರಿಗಳಾಗಿದ್ದಾಗ ಒಮ್ಮೆ ಅವರನ್ನು ಭೇಟಿಯಾಗಲು ಕೆಲ ಪತ್ರಕರ್ತರು ಅವರ ಮನೆಗೆ ಬಂದರು. ಅವರನ್ನು ತಮ್ಮ ಮನೆಗೆ ಸ್ವಾಗತಿಸಿ, ಸ್ವತಃ ತಾವೇ ನೆಲದ ಮೇಲೆ ಚಾಪೆ ಹಾಸಿದರು. ಏಕೆಂದರೆ ಅವರ ಮನೆಯಲ್ಲಿದ್ದುದು ಒಂದೆರಡು ಕುರ್ಚಿಗಳಷ್ಟೇ. ಹೀಗಾಗಿ ಅವರನ್ನೆಲ್ಲಾ ಚಾಪೆಯ ಮೇಲೆ ಕುಳಿತುಕೊಳ್ಳಲು ವಿನಂತಿಸಿದರು. ತಾವೂ ಸಹ ಅವರ ಜೊತೆಯಲ್ಲಿಯೇ ನೆಲದ ಮೇಲೆ ಕುಳಿತುಬಿಟ್ಟರು. ಅಲ್ಲಿಯೇ ಪತ್ರಕರ್ತರು ಅವರ ಸಂದರ್ಶನ ಮಾಡಿದರು. ಕೊನೆಯಲ್ಲಿ ಪತ್ರಕರ್ತರೊಬ್ಬರು ತಮ್ಮ ಸುದ್ದಿಯಲ್ಲಿ ಹೀಗೆ ಬರೆದಿದ್ದರು- "ಆಡಿದಂತೆ ಮಾಡುವ ನಂಬೂದರಿಪಾಡ್ ಇತರ ರಾಜಕಾರಣಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ".

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.