ಇಂದಿನ ಶಾಸಕರು, ಸಂಸದರು
ಪರಕೀಯರ ಕೈಯಿಂದ ಸಾಕಷ್ಟು ಬಲಿದಾನ, ತ್ಯಾಗದಿಂದ ಗಳಿಸಿಕೊಂಡಿರುವ ಸ್ವಾತಂತ್ರ್ಯ ಒಂದು ಮಂಗನ ಕೈಯಲ್ಲಿಯ ಮಾಣಿಕ್ಯವೆನಿಸಿದೆ ನಮ್ಮ ಹಲವಾರು ಶಾಸಕರು ಸಂಸದರಿಂದಾಗಿ. ದಕ್ಷತೆ, ನಿಷ್ಠೆ, ಶಿಸ್ತು, ಪ್ರಾಮಾಣಿಕತೆ ಹೇಳ ಹೆಸರಿಲ್ಲದೆ ಮಾಯವಾಗಿ ದೇಶಾದ್ಯಂತ ಭ್ರಷ್ಟಾಚಾರ, ಅಪ್ರಾಮಾಣಿಕತೆ ತಾಂಡವವಾಡುತ್ತಿದೆ. ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರಿಸಿ ಕಳಿಸಿರುವ ಶಾಸಕರು, ಸಂಸದರು ದೇಶವನ್ನು ಅಧೋಗತಿಯಿಂದ ಸರಿಯಾದ ದಾರಿಗೆ ತರುವಂತಹ ರಾಷ್ಟ್ರಾಭಿಮಾನಿಗಳಾಗಿರಬೇಕು. ಆದರೆ ಈಗ ನಡೆಯುತ್ತಿರುವುದೇನು? ಪಶ್ಚಿಮ ಬಂಗಾಲದ ಸಂಸದರೊಬ್ಬರು ಮತ್ತೊಂದು ಪಕ್ಷದ ಕಾರ್ಯಕರ್ತೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುವಂತೆ ಹಾಡಹಗಲೇ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ನಮ್ಮ ಕರ್ನಾಟಕ ರಾಜ್ಯದ ಶಾಸಕರೊಬ್ಬರು ತಮ್ಮವರೊಂದಿಗೆ ಬಾರಿನಲ್ಲಿ ಸರಿ ರಾತ್ರಿಯ ತನಕ (ಅವಧಿಯ ಸಮಯ ಮೀರಿ) ಮದ್ಯಪಾನ ಮಾಡುತ್ತಾ ಕುಳಿತಿದ್ದಾರೆ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರು ನಾವೇ ಆರಿಸಿ ಕಳಿಸಿದ ಶಾಸಕರು ಮತ್ತು ಸಂಸದರು. ಹೀಗಾದರೆ ನಮ್ಮ ದೇಶದ ಗತಿ? ಅಧೋಗತಿ? ಇದಕ್ಕೆ ಒಂದೇ ದಾರಿ, ಮತದಾರ ಪ್ರಬುದ್ಧನಾಗಬೇಕು. ಒಳ್ಳೆಯ ಚಾರಿತ್ರ್ಯವುಳ್ಳ ಜನಪ್ರತಿನಿಧಿಗಳನ್ನು ಆರಿಸಿ ಕಳಿಸಬೇಕು.
-ವಿಶ್ವನಾಥ್ ಕೋಟಿ, ಧಾರವಾಡ.
ಅರ್ಹರು ಏನು ಮಾಡಬೇಕು?
ಪದವಿ ಕಾಲೇಜುಗಳ ಉಪನ್ಯಾಸಕರಾಗಲು ಕನಿಷ್ಠ ಶೈಕ್ಷಣಿಕ ಅರ್ಹತೆ ಎಂ.ಎ.ದಲ್ಲಿ ಶೇ.55 ಅಂಕಗಳನ್ನು ಪಡೆದಿರಬೇಕು, ಎನ್ಇಟಿ/ಎಸ್ಎಲ್ಇಟಿ ಅಥವಾ ಕೆ-ಸೆಟ್/ಪಿಎಚ್.ಡಿ. ಪದವಿ ಹೊಂದಿರಬೇಕು ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) 01-06-2009 ರಂದು ಆದೇಶ ಹೊರಡಿಸಿದೆ. ಆದರೆ, ಈಗ ಅತಿಥಿ ಉಪನ್ಯಾಸಕರಾಗಿದ್ದವರಲ್ಲಿ ಅನೇಕರು ಉಪನ್ಯಾಸಕರಾಗಲು ಇರುವ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಹೊಂದಿಲ್ಲ. ಇದರಲ್ಲಿ ಅನೇಕರು ರೆಗ್ಯುಲರ್ ಆಗಿ ಸ್ನಾತ್ತಕೋತ್ತರ ಪದವಿಯನ್ನು ಕೂಡಾ ಮುಗಿಸಿಲ್ಲ. ಅನಧಿಕೃತ ಸ್ಟಡಿ ಸೆಂಟರ್ಗಳಲ್ಲಿ ಅನೇಕರು ಸರ್ಟಿಫಿಕೇಟ್ ಪಡೆದವರಾಗಿದ್ದಾರೆ. ರಾಜ್ಯದಲ್ಲಿ ಈಗ ಅನೇಕರು ಎನ್ಇಟಿ/ಎಸ್ಎಲ್ಇಟಿ ಅಥವಾ ಕೆ-ಸೆಟ್/ ಪಿಎಚ್.ಡಿ. ಡಿಗ್ರಿಗಳನ್ನು ಮುಗಿಸಿದ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಕೆಲವರು ಅವರ ಕುಟುಂಬಗಳಿಗೆ ಭಾರವಾಗಿದ್ದಾರೆ. ಅರ್ಹತೆ ಹೊಂದಿದ ಇವರನ್ನು ಬೀದಿ ಪಾಲು ಮಾಡಿ ಅನರ್ಹರಿಗೆ ಅತಿಥಿ ಉಪನ್ಯಾಸಕರನ್ನಾಗಿ 2014-2015ನೇ ಸಾಲಿಗೆ ಮುಂದುವರೆಸುವುದು ಸರಿಯೇ? ಇದ್ಯಾವ ನ್ಯಾಯ? ಸರಕಾರ ಉತ್ತರಿಸಬೇಕು. ಈ ಹಿಂದೆ ಕೆಪಿಎಸ್ಸಿ ಮೂಲಕ 2008-2009ರಲ್ಲಿ 2550 ಉಪನ್ಯಾಸಕರ ನೇಮಕಾತಿ ನಡೆದಾಗಲೂ ಸರಕಾರ ನೇಮಕಾತಿ ಆದೇಶ ನೀಡುವಾಗ ಉಪನ್ಯಾಸಕರಾಗಲು ಅರ್ಹತೆ ಇಲ್ಲದ 1564 ಅಭ್ಯರ್ಥಿಗಳಿಗೆ ಎರಡು ವರ್ಷದ ಪರೀಕ್ಷಾರ್ಥ (ಪ್ರೊಬೇಷನರಿ) ಕಾಲಾವಧಿಯಲ್ಲಿ ಎನ್ಇಟಿ/ಎಸ್ಎಲ್ಇಟಿ/ಪಿಎಚ್.ಡಿ. ಪದವಿಗಳನ್ನು ಪೂರ್ಣಗೊಳಿಸಿಬೇಕು ಅಂದರೆ ಮಾತ್ರ ತಮ್ಮ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರ ಎಂದು ಘೋಷಿಸಲಾಗುವುದು ಎಂದು ಅವರಿಂದ ರು.100ರ ಛಾಪಾ ಕಾಗಾದದ ಮೇಲೆ ಬರೆಸಿಕೊಂಡು ನೇಮಕಾತಿ ಆದೇಶ ನೀಡಲಾಗಿತ್ತು. ಆಗಲೂ ಅರ್ಹರನ್ನು ಹೊರಗಿಟ್ಟು ಅನರ್ಹರಿಗೆ ನೌಕರಿ ನೀಡಿದ ಸರಕಾರ ಅನೇಕ ಅರ್ಹ ಪದವಿಧರರ ಜೀವದ ಜೊತೆ ಚೆಲ್ಲಾಟ ಆಡಿದೆ. ನೇಮಕಾತಿ ನಿಯಮಗಳನ್ನು ಮೀರಿ (ಉಲ್ಲಂಘಿಸಿ) ಹೀಗೆ ಅನರ್ಹರಿಗೆ ಉದ್ಯೋಗದ ಅವಕಾಶ ನೀಡುತ್ತ ಹೋದರೆ ಅರ್ಹತೆ ಇರುವವರು ಏನು ಮಾಡಬೇಕು?
-ಡಾ.ಅಂಬಣ್ಣ. ಮ. ಢವಳಾರ, ಸಿಂದಗಿ
ಏಡ್ಸ್ ನಿಯಂತ್ರಣಕ್ಕೆ ಪರಿಹಾರವೇನು?
ಪೋಲಿಯೋ ಮುಕ್ತ ರಾಷ್ತ್ರವೆಂದು ಬೀಗುತ್ತಿರುವ ದೇಶವು ತನ್ನ ಒಡಲಲ್ಲಿ ಸುಮಾರು 7-8 ಲಕ್ಷಗಳಷ್ಟು ಏಡ್ಸ್/ಎಚ್ಐವಿ ಬಾಧಿತರನ್ನು ಇರಿಸಿಕೊಂಡಿರುವುದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಅದರಲ್ಲೂ ನಮ್ಮ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು,1,07,986 ಏಡ್ಸ್ ಸೋಂಕಿತರನ್ನು ಹೊಂದಿರುವ ವಿಷಯವನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿರುವುದು ನಿಜಕ್ಕೂ ಆತಂಕದ ವಿಷಯ. ಏಡ್ಸ್ ಸೋಂಕಿಗೆ ನೈತಿಕ ಮೌಲ್ಯಗಳ, ಕೌಟುಂಬಿಕ ಮೌಲ್ಯಗಳ ಕೊರತೆ ಕಾರಣ ಎಂಬ ನಿಲುವು ಒಪ್ಪಿಕೊಳ್ಳಬಹುದಾದರೂ ಸುರಕ್ಷಿತ ಲೈಂಗಿಕತೆಯ ಅಜ್ಞಾನವೇ ಮುಖ್ಯ ಕಾರಣ. ಇದೊಂದು ರಾಷ್ಟ್ರೀಯ ಆರೋಗ್ಯ ಸಮಸ್ಯೆಯಾಗಿರುವುದರಿಂದ ಇದರ ನಿಯಂತ್ರಣಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚಿಸುವುದು ಒಳಿತು.
-ಡಾ ಸಮೀರ ಎಲ್. ಹಾದಿಮನಿ, ಆಲಮೇಲ
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

