ಲಕ್ಷಾಂತರ ಜನರನ್ನು ಆಹ್ವಾನಿಸಲು ಎಷ್ಟು ಖರ್ಚಾಯಿತು?
ಒಮ್ಮೆ ಪ್ರಯಾಗದಲ್ಲಿ ಕುಂಭಮೇಳ ನಡೆದಿತ್ತು. ಸಾಮಾನ್ಯವಾಗಿ ಕುಂಭಮೇಳ ನಡೆಯುವುದು ಹನ್ನೆರಡು ವರ್ಷಕ್ಕೊಂದು ...
ಒಮ್ಮೆ ಪ್ರಯಾಗದಲ್ಲಿ ಕುಂಭಮೇಳ ನಡೆದಿತ್ತು. ಸಾಮಾನ್ಯವಾಗಿ ಕುಂಭಮೇಳ ನಡೆಯುವುದು ಹನ್ನೆರಡು ವರ್ಷಕ್ಕೊಂದು ಬಾರಿ. ಇಂತಹ ಮೇಳಗಳು ಉಜ್ಜಯಿನಿ, ನಾಸಿಕ್, ಹರಿದ್ವಾರ ಮುಂತಾದ ಕಡೆಯೂ ನಡೆಯುತ್ತವೆ. 1942ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು. ಸಾಧು ಸಂತರು, ಬೈರಾಗಿಗಳು, ಸಾಧಕರು, ಭಕ್ತರು ಅತಿಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಬ್ರಿಟಿಷ್ ವೈಸ್ರಾಯ್ ಆಗಿದ್ದ ಲಾರ್ಡ್ ಲಿನ್ಲಿತ್ಗೋರವರು ಆ ಕುಂಭಮೇಳವನ್ನು ವೀಕ್ಷಿಸಲು ಮತ್ತು ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲು ಇಚ್ಛಿಸಿದರು. ಅವರಿಗೆ ಭಾರತೀಯರ ನಂಬಿಕೆಯ ಪ್ರತೀಕವಾಗಿದ್ದ ಈ ಮಹಾಮೇಳದ ಆಯೋಜನೆ ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ನೋಡಬೇಕೆಂಬ ಕುತೂಹಲ ತುಂಬಾ ಇತ್ತು. ಅದಕ್ಕಾಗಿ ಪಂಡಿತ ಮದನಮೋಹನ ಮಾಳವೀಯರನ್ನು ಕರೆಸಿ ಕುಂಭಮೇಳದ ಬಗ್ಗೆ ಸಾಕಷ್ಟು ಮಾಹಿತಿ ಪಡೆದರು. ಅವರನ್ನೂ ತಮ್ಮ ಜೊತೆಗೆ ಕರೆದೊಯ್ದು ವೈಮಾನಿಕ ವೀಕ್ಷಣೆ ನಡೆಸಿದರು. ವಿಮಾನದ ಮಟ್ಟವನ್ನು ತಗ್ಗಿಸಿ ನೋಡಿದಾಗ ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದ ಜನಸಾಗರ ಪವಿತ್ರ ಸಂಗಮದಲ್ಲಿ ಮಿಂದು ಕೃತಾರ್ಥವಾಗುವುದನ್ನು ನೋಡಿ ಪುಳಕಿತರಾದರು. ಅವರು ಮಾಳವೀಯರಿಗೆ, "ಇಷ್ಟೊಂದು ಜನ ಇಲ್ಲಿ ಸೇರುವಂತೆ ಮಾಡಲು ಆಹ್ವಾನ ಪತ್ರಿಕೆಗೆ ತುಂಬ ಹಣ ಖರ್ಚಾಗಿರಬೇಕಲ್ಲಾ?" ಎಂದು ಪ್ರಶ್ನಿಸಿದರು. ಅದಕ್ಕೆ ಮಾಳವೀಯರು ಶಾಂತ ಧ್ವನಿಯಲ್ಲಿ, "ಹೆಚ್ಚೇನಿಲ್ಲ ಎರಡು ಪೈಸೆ" ಎಂದರು. ವೈಸ್ರಾಯ್ಗೆ ಅಚ್ಚರಿ. ಕೇವಲ ಎರಡು ಪೈಸೆ ಖರ್ಚುಮಾಡಿ ಇಷ್ಟೊಂದು ಜನರನ್ನು ಸೇರಿಸಲು ಸಾಧ್ಯವೆ ಎಂದು. ಮಾಳವೀಯರು ತಮಾಷೆ ಮಾಡುತ್ತಿರಬೇಕೆಂದು ಅಂದುಕೊಂಡು ಮತ್ತೆ ಅದೇ ಪ್ರಶ್ನೆಯನ್ನು ಕೇಳಿದರು. ಆಗಲೂ ಮಾಳವೀಯರು ಎರಡು ಪೈಸೆ ಎಂದು ಉತ್ತರಿಸಿದ್ದನ್ನು ಕೇಳಿ ಅದು ಹೇಗೆ ಎಂದು ಪ್ರಶ್ನಿಸಿದರು. ಆಗ ಮಾಳವೀಯರು ತಮ್ಮ ಜೇಬಿನಿಂದ ಒಂದು ಪಂಚಾಂಗವನ್ನು ಹೊರತೆಗೆದು ತೋರಿಸಿ, ಇದರ ಬೆಲೆ ಎರಡು ಪೈಸೆ, ಜನರು ಇದನ್ನು ನೋಡಿ, ಕುಂಭಮೇಳದ ಶುಭ ಮುಹೂರ್ತ ಯಾವುದೆಂದು ತಿಳಿದು ಇಲ್ಲಿಗೆ ಆಗಮಿಸುತ್ತಾರೆ. ಪವಿತ್ರ ಸಂಗಮದಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಯಾರಿಗೂ ವೈಯಕ್ತಿಕ ಆಹ್ವಾನವನ್ನು ನೀಡಲಾಗುವುದಿಲ್ಲ ಎಂದಾಗ ವೈಸ್ರಾಯ್ಗೆ ಭಾರತೀಯರ ಧರ್ಮಶ್ರದ್ಧೆಯನ್ನು ಕಂಡು ಮೂಕವಿಸ್ಮಿತರಾದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

