ಸರ್ಕಾರದ ಸಂವಹನ ವೈಫಲ್ಯ
ಬಿಜಾಪುರ ಜಿಲ್ಲೆಯ ಬಸವನ ಬಾಗೆವಾಡಿ ಸಮೀಪದ ಕೂಡಿಗೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ನಿರ್ಮಾಣದ ವಿಚಾರದಲ್ಲಿ...
ಬಿಜಾಪುರ ಜಿಲ್ಲೆಯ ಬಸವನ ಬಾಗೆವಾಡಿ ಸಮೀಪದ ಕೂಡಿಗೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ನಿರ್ಮಾಣದ ವಿಚಾರದಲ್ಲಿ, ಇಂತಹ ಎಲ್ಲ ಯೋಜನೆಗಳಲ್ಲೂ ಕಂಡುಬಂದಿರುವ ವಿರೋಧ, ಪ್ರತಿಭಟನೆ ದೇಶಕ್ಕೆ ಹೊಸದೇನೂ ಅಲ್ಲ. ಅದು ಅನಿರೀಕ್ಷಿತವೂ ಅಲ್ಲ.
ಆದರೆ, ಇದ್ದಕ್ಕಿದ್ದಂತೆ ಶನಿವಾರ ರೈತರ ಸಂಘಟನೆಗಳ ಹೆಸರಿನಲ್ಲಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ಹಿಂಸೆಯ ಸ್ವರೂಪವನ್ನು ಪಡೆದಿದ್ದು ಅನಿರೀಕ್ಷಿತವೇ. ಪೊಲೀಸ್ ಸಿಬ್ಬಂದಿಗೆ ಪ್ರದರ್ಶನಗಳು ನಡೆಯುವ ವಿಚಾರದಲ್ಲಿ ಮಾಹಿತಿ ಇತ್ತು. ಅದನ್ನು ಅಧಿಕಾರಿಗಳು ಗಮನಿಸಿ, ಸಾಕಷ್ಟು ಮುನ್ನೆಚ್ಚರಿಕೆ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಆದರೆ ದೊಡ್ಡ ರೀತಿಯ ಅಸಂಘಟಿತ ಹಿಂಸಾಚಾರವನ್ನು ಪೊಲೀಸರು ನಿರೀಕ್ಷಿಸಿರಲಿಲ್ಲ. ಆ ಸೂಚನೆ ಯಾವ ಮೂಲದಿಂದಲೂ ಅವರಿಗೆ ಸಿಕ್ಕಿರಲಿಲ್ಲ. ರೈತರು ಅಥವಾ ಅವರ ಹೆಸರಿನಲ್ಲಿ ಚಳವಳಿ ನಡೆಸುತ್ತಿರುವವರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಯಾದರೂ ಏನು? ಆ ಯೋಜನೆಯನ್ನು ನಿಲ್ಲಿಸಿ ಎನ್ನುವ ಸಾರಾಸಗಟು ಸ್ವರೂಪದ ಒತ್ತಾಯವನ್ನು ಈ ಹಂತದಲ್ಲಿ ಯಾವ ಸರ್ಕಾರವೂ ಒಪ್ಪುವುದಿಲ್ಲ. ಯೋಜನೆಯ ಕೆಲಸ ಹಿಂದಕ್ಕೆ ಬರಲಾಗದ ಗೆರೆಯನ್ನು ದಾಟಿದ್ದಾಗಿದೆ.
ನಿಜ. ಇಂತಹ ಆಂದೋಲನಕ್ಕೆ ಕರೆ ಕೊಡುವವರು, ಅದು ತಮ್ಮ ಕೈ ಮೀರಿ ಹೋಗುವುದನ್ನು ತಡೆಯುವ ಶಕ್ತಿಯನ್ನು ಪಡೆದಿರುವುದಿಲ್ಲ. ಜನ ಸಮುದಾಯಗಳನ್ನು ಉದ್ರೇಕಗೊಳಿಸುವುದು ಸುಲಭ. ಆದರೆ ಅದನ್ನು ನಿಯಂತ್ರಿಸುವುದು ಕಷ್ಟ. ಅದನ್ನು ಆಂದೋಲನದ ನಾಯಕರು ತಿಳಿದುಕೊಂಡಿರಬೇಕಾಗಿತ್ತು. ಈಗಿನ ಆಂದೋಲನಕ್ಕೆ ಪ್ರಚೋದನೆಯಾದರೂ ಏನು? ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿರುವ ಸರ್ವೇಸಾಮಾನ್ಯ ಆರೋಪಗಳೇ. ಹಾರುವ ಬೂದಿಯ (ಪ್ಲೈ ಆಷ್) ಹಾವಳಿಯಿಂದ ಪರಿಸರಕ್ಕಾಗುವ ಹಾನಿ. ಇಂತಹ ಬೃಹತ್ ಯೋಜನೆಗಳಲ್ಲಿ ಸಾಮಾನ್ಯವಾಗಿ ರೈತರ ವಿರೋಧ ಕಂಡುಬರುವುದು ಭೂಸ್ವಾಧೀನದ ಪ್ರಮಾಣ ಹಾಗೂ ಅಲ್ಪ ಪರಿಹಾರದ ವಿರುದ್ಧ. ಈ ಎರಡೂ ವಿಚಾರಗಳಲ್ಲಿ ಸರ್ಕಾರದ ವಕ್ತಾರರು, ರೈತ ಸಮುದಾಯಗಳ ಮಧ್ಯೆ ಹೋಗಿ ಸೂಕ್ತ ರೀತಿಯಲ್ಲಿ ಅವರ ಹೆದರಿಕೆಯನ್ನು ನಿವಾರಿಸುವ ಪ್ರಯತ್ನ ಮಾಡಬೇಕಾಗಿತ್ತು.
ಇದನ್ನೇ ಸರ್ಕಾರದ ಸಂವಹನ ವೈಫಲ್ಯ ಎನ್ನಬಹುದು. ಯೋಜನೆಯ ನೀಲನಕ್ಷೆ ತಯಾರಾದಾಗಲೇ ಅದರ ವಿರೋಧಿಗಳ ಪ್ರಚಾರ, ಸಮರವೂ ಆರಂಭವಾಗುತ್ತದೆ. ಈ ಪ್ರಚಾರಕರು ಜನಸಮುದಾಯಗಳ ಮಧ್ಯೆ ಹೋಗಿ ಆತಂಕದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿದರೆ, ಸರ್ಕಾರದ ವಕ್ತಾರರಾದ ಅಧಿಕಾರಿಗಳಿಗೆ ಸರಿಯಾಗಿ ನಿಯಂತ್ರಣ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಆ ಪ್ರದೇಶದ ಸಾರ್ವಜನಿಕ ಮುಖಂಡರೇ ಸರಿಯಾದ ವ್ಯಕ್ತಿಗಳು. ಅವರನ್ನೇ ಸರ್ಕಾರ ಬಳಸಿಕೊಂಡು, ಯೋಜನೆಯ ಸಾಧಕ ಬಾಧಕಗಳನ್ನು ವಿವರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ, ಆಂದೋಲನಕಾರರಿಗೆ ಪ್ರತಿಕೂಲವಾದ ವಾತಾವರಣ ನಿರ್ಮಾಣವಾಗುತ್ತಿತ್ತೋ ಏನೋ. ಕೈಗಾದ ಅಣು ವಿದ್ಯುತ್ ಸ್ಥಾವರದ ಆಂದೋಲನದ ಸಮಯದಲ್ಲಿ ದೇಶದ ಪ್ರತಿಷ್ಠಿತ ವಿಜ್ಞಾನಿಗಳು, ತಂತ್ರಜ್ಞಾನ ಪಂಡಿತರು ನೇರವಾಗಿ, ಬಹಿರಂಗವಾಗಿ ಆಂದೋಲನಕಾರರ ಮನಸ್ಸನ್ನು ಪರಿವರ್ತಿಸಲು ಪ್ರಯತ್ನಿಸಿದ್ದರು.ಅವರಲ್ಲಿ ಆಂದೋಲನಕಾರರು ಎತ್ತಿದ್ದ ಪ್ರತಿಯೊಂದು ಪ್ರಶ್ನೆಗೂ ಉತ್ತರವಿತ್ತು.
ರಾಜ್ಯದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಕೂಡಿಗೆಯಲ್ಲಿ ಮಾತ್ರ ಸ್ಥಾಪನೆಯಾಗುತ್ತಿದೆ ಎಂದೇನೂ ಅಲ್ಲ. ರಾಯಚೂರಿನಲ್ಲಿ ಈಗಾಗಲೇ ಶಕ್ತಿನಗರದ ಒಂದೇ ಪ್ರದೇಶದಲ್ಲಿ ಐದಾರು ಸ್ಥಾವರಗಳು ಕೆಲಸ ಮಾಡುತ್ತಿವೆ. ಅಲ್ಲಿ ಇದುವರೆಗೆ ಪರಿಸರದ ಸರ್ವನಾಶವಾಗಿರುವ ವರದಿಗಳೇನೂ ಪ್ರಕಟವಾಗಿಲ್ಲ.
ನಿಜ. ಒಂದು ದೊಡ್ಡ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಮುಂದಾದಾಗ ಹಲವು ಸಮಸ್ಯೆಗಳನ್ನು ಸಮಾಜ ಎದುರಿಸಲೇಬೇಕು. ಆ ಯೋಜನೆಯಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಿಂದ ರಾಜ್ಯದ ಪ್ರಗತಿಗೆ ಸಿಗುವ ಉತ್ತೇಜನ ಹಾಗೂ ಕಾಣಿಕೆಯನ್ನು ಗಮನಿಸಬೇಕು. ಅದನ್ನು ಯೋಜನೆಯ ಸಂತ್ರಸ್ತ ಸಮುದಾಯಕ್ಕೆ ವಿವರಿಸಬೇಕು. ಕರ್ನಾಟಕ ಈಗ ಅಕ್ಷರಶಃ ವಿದ್ಯುತ್ ಅಭಾವದಿಂದ ತತ್ತರಿಸುತ್ತಿದೆ. ಹೊರಗಿನಿಂದ ವಿದ್ಯುತ್ ಕೊಳ್ಳುವುದು ಬಲು ದುಬಾರಿ - ಜಲಸಂಪತ್ತಿನ ಬಳಕೆಯಿಂದ ವಿದ್ಯುತ್ ಉತ್ಪಾದನೆಗೆ ಈಗ ಅವಕಾಶ ಕಡಿಮೆ. ಆದ್ದರಿಂದಲೇ ಸರ್ಕಾರ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಮುಂದಾಗುವುದು. ಅದರಲ್ಲಿ ಕೂಡಿಗೆ ಸ್ಥಾವರವೂ ಒಂದು. ಸಾಮಾನ್ಯ ಜನರಿಗೆ ಯೋಜನೆಯಿಂದ ಆಗಬಹುದಾದ ಹಾನಿಯ ವಿರುದ್ಧ ರಕ್ಷಣೆ ನೀಡುವ ಕಾರ್ಯಕ್ರಮವೂ ಯೋಜನೆಯಲ್ಲಿ ಅಳವಡಿಸಲಾಗಿರುತ್ತದೆ. ಭೂಮಿಗೆ ಪರಿಹಾರವೂ ಸಿಗುತ್ತಿದೆ. ಹಿಂಸಾಚಾರದಿಂದ ಯಾವುದೇ ಆಂದೋಲನವೂ ತನ್ನ ಗುರಿಯನ್ನು ಸಾಧಿಸಿಲ್ಲ. ಹಿಂಸಾಚಾರವನ್ನು ಯಾರೂ ಬೆಂಬಲಿಸಬಾರದು. ಕೂಡಿಗೆ ಆಂದೋಲನದ ಹಿಂಸಾಚಾರದಲ್ಲಿ ಪೆಟ್ಟು ತಿಂದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರನ್ನು ವೈಯಕ್ತಿಕವಾಗಿ ಮುಖ್ಯಮಂತ್ರಿ ಭೇಟಿಯಾಗಿ ಸಾಂತ್ವನ ಹೇಳಿರುವುದು, ಪರಿಹಾರದ ಭರವಸೆ ನೀಡಿರುವುದು ಒಂದು ಒಳ್ಳೆಯ ಸಂಕೇತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ.
ಈಗಲಾದರೂ ಆ ಭಾಗದ ಶಾಸಕರು, ಸಂಸದರು, ಇತರ ಸಾರ್ವಜನಿಕ ಮುಖಂಡರು, ಅಧಿಕಾರಿಗಳ ಜತೆಯಲ್ಲಿ ಹೋಗಿ ಸಂತ್ರಸ್ತರನ್ನು ಸಂತೈಸುವುದರ ಜತೆಯಲ್ಲೇ ಯೋಜನೆಯ ವಿಚಾರದಲ್ಲಿ ಮೂಡಿರಬಹುದಾದ ಸಂದೇಹಗಳನ್ನು ನಿವಾರಿಸುವುದು ಒಳ್ಳೆಯದು. ಇಲ್ಲಿ ಒಂದು ಮಾತು ಅನಿವಾರ್ಯ. ಪೊಲೀಸರಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಅಧಿಕಾರ ಪೊಲೀಸ್ ಕಾಯಿದೆಯಲ್ಲಿ ಇಲ್ಲ. ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

