ಸಂಪಾದಕೀಯ

ಸಮಸ್ಯೆಗಳು ಚರ್ಚೆಯಾಗಲಿ

Published On :

ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಶಾಸಕ ವಿಜಯಾನಂದ ಕಾಶಪ್ಪನವರ ಪ್ರಕರಣವೊಂದನ್ನು ಹಿಡಿದುಕೊಂಡು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರುಗಳು ಕಲಾಪವನ್ನು ಬಲಿತೆಗೆದುಕೊಳ್ಳುತ್ತಿರುವುದು ವಿಷಾದನೀಯ.
ಆರ್ಟಿಇ ಕಾಯ್ದೆ, ಪ್ರತಿಟನ್ ಕಬ್ಬಿಗೆ ವೈಜ್ಞಾನಿಕ ಬೆಲೆ, ಬರ ನಿರ್ವಹಣೆ, ಜಾನುವಾರುಗಳಿಗೆ ಮೇವು ಪೂರೈಕೆ, ಅಕ್ರಮ ಮರಳು ಗಣಿಕಾರಿಕೆಗೆ ಸೂಕ್ತ ಕಾನೂನು ಸೇರಿದಂತೆ ಮೊದಲಾದ ಹತ್ತು ಹಲವು ಜ್ವಲಂತ ಸಮಸ್ಯೆಗಳು ರಾಜ್ಯದ ಜನರನ್ನು ಕಾಡುತ್ತಿವೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪ್ರತಿಪಕ್ಷವಾದ ಬಿಜೆಪಿಯು ಚಾಟಿ ಏಟು ಬೀಸುವುದನ್ನು ಬಿಟ್ಟು ಶಾಸಕ ವಿಜಯಾನಂದ ಕಾಶಪ್ಪ ಮತ್ತು ಅವರ ಬೆಂಬಲಿಗರು ಪೊಲೀಸರ ಮೇಲೆ ನಡೆಸಿರುವ ಹಲ್ಲೆ ಪ್ರಕರಣಕ್ಕೆ ಕಲಾಪವನ್ನು ಸೀಮಿತಗೊಳಿಸುತ್ತಿರುವುದು ಖೇದಕರ.  ರಾಜ್ಯದಲ್ಲೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂಗಾರು ಹಂಗಾಮು ಪ್ರಾರಂಭಗೊಂಡು 1 ತಿಂಗಳಾದರೂ ಮಳೆಯಾಗದೇ ರೈತರ ಮೋಗದಲ್ಲಿ ಆತಂಕದ ಕಾರ್ಮೋಡ ಕವಿದಿದೆ ಮತ್ತು ರಾಜ್ಯದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕುಡಿವ ನೀರಿನ ಹಾಹಾಕಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನು ಅಕ್ರಮ ಮರಳು ದಂಧೆಗೆ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ 3 ಬಾಲಕಿಯರು ಬಲಿಯಾಗಿರುವುದರ ಕುರಿತು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಜಗದೀಶ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪನವರು ಪ್ರಶ್ನಿಸುವುದನ್ನು ಬಿಟ್ಟು ಸದನದಲ್ಲಿ ಒಂದೇ ಪ್ರಕರಣಕ್ಕೆ ಜೋತುಬಿದ್ದು ಸಭಾತ್ಯಾಗ ಮಾಡುವುದು, ಪ್ರತಿಭಟನೆ ಮಾಡುವುದು ಸೂಕ್ತವಲ್ಲ.
-ಸಂತೋಷ ಬಸವರಾಜ, ಸಿಂದಗಿ, ವಿಜಾಪುರ

ಕನ್ನಡಿಗರಿಗೇಕೆ ಹಿಂದಿ?
ನಮ್ಮದು ಬಹು ವೈವಿಧ್ಯತೆಯಿಂದ ಕೂಡಿದ ನಾಡು. ಅವುಗಳಲ್ಲಿ ಭಾಷಾ ವೈವಿದ್ಯತೆಯೂ ಒಂದು. ಹೀಗೆ ಬಹುಭಾಷಿಕರ ಅಸ್ತಿತ್ವದಲ್ಲಿ ರೂಪುಗೊಂಡಿರುವ ಭಾರತದ ಕೇಂದ್ರ ಸರ್ಕಾರ ಮಾತ್ರ, ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿ ಹಿಂದಿ ಭಾಷೆಗೆ ಎಲ್ಲಿಲ್ಲದ ಮನ್ನಣೆ ಕೊಡಲು ಮುಂದಾಗಿದೆ. ಭಾರತದ ಸಂವಿಧಾನ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಲು ಹೇಳಿದೆಯೇ ಹೊರತು, ಇದುವರೆಗೆ ಯಾವುದೇ ಒಂದು ಭಾಷೆಯನ್ನು ಭಾರತದ ರಾಷ್ಟ್ರಭಾಷೆಯನ್ನಾಗಿ ಗುರುತಿಸಿಲ್ಲ. ಹಾಗಾಗಿ ನಮಗೆ ಯಾವುದೇ ರಾಷ್ಟ್ರಭಾಷೆ ಇಲ್ಲ.
ಆದರೂ ಹಿಂದಿ ನಮ್ಮ ರಾಷ್ಟ್ರಭಾಷೆ, ಒಕ್ಕೂಟದ ಬಾಳ್ವೆಗೆ ಹಿಂದಿ ಅತ್ಯಗತ್ಯ ಎಂಬೆಲ್ಲಾ ತಪ್ಪುಸಂದೇಶಗಳನ್ನು ವಿನಾಕಾರಣ ಮಂದಿಯ ಮನದಲ್ಲಿ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಭಾರತದಲ್ಲಿ ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲವರು ಬಹುಸಂಖ್ಯೆಯಲ್ಲಿದ್ದಾರೆ ನಿಜ. ಏಕೆಂದರೆ ರಾಜಸ್ಥಾನಿ, ಗುಜರಾತಿ, ಪಂಜಾಬಿ, ಭೋಜ್ಪುರಿ ಭಾಷೆಗಳೆಲ್ಲ ಹಿಂದಿಯಿಂದ ಪ್ರಭಾವಿತವಾಗಿರುವ ಹಿಂದಿಯ ಉಪಭಾಷೆಗಳೇ ಹೊರತು ಹಿಂದಿಯಲ್ಲ. ಆದರೆ ಈ ಉಪಭಾಷೆಗಳನ್ನೆಲ್ಲಾ ಸೇರಿಸಿಕೊಂಡು ಭಾರತದಲ್ಲಿ ಹಿಂದಿ ಭಾಷಿಕರು ಬಹುಜನರು ಎಂದು ಬಿಂಬಿಸಲಾಗುತ್ತಿದೆ. ಭಾರತದ ಎಲ್ಲಾ ಭಾಗದಲ್ಲಿರುವ ಮಂದಿಯನ್ನು ಸಂಪರ್ಕಿಸುವ ಸಲುವಾಗಿ ಬಹುಜನ ಅರ್ಥೈಸಿಕೊಳ್ಳುವ ಹಿಂದಿಯನ್ನು ಭಾಷೆಯನ್ನು ಬಳಸಿಕೊಳ್ಳಬಹುದು ನಿಜ. ಆದರೆ ಹಿಂದಿ ಭಾಷಿಕರಂತೆಯೇ ಪ್ರಾದೇಶಿಕ ಭಾಷಿಕರಿಗೂ ಶಿಕ್ಷಣ, ಉದ್ಯೋಗ, ಸೌಲಭ್ಯಗಳಲ್ಲಿ ಸಮಾನತೆ ನೀಡಬೇಕಾದದ್ದು ಕೇಂದ್ರದ ಕರ್ತವ್ಯ.
ಆಡಳಿತ ಭಾಷೆಯಾದ ಹಿಂದಿಯನ್ನು ಪ್ರಚಾರ ಮಾಡಬೇಕಾದದ್ದು ಕೇಂದ್ರದ ಕರ್ತವ್ಯ ಎಂದು ಭಾರತೀಯ ಸಂವಿಧಾನದಲ್ಲಿ ಸೂಚಿಸಲಾಗಿದೆ ನಿಜ. ಹಾಗೆಂದ ಮಾತ್ರಕ್ಕೆ ಭಾರತದ ಭಾಷಾ ವೈವಿಧ್ಯತೆಯನ್ನು ನಿರ್ಲಕ್ಷಿಸಿ, ಭಾಷಾವಾರು ಪ್ರಾಂತ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಅಲ್ಲದೆ ಹಿಂದಿ ಭಾಷೆಯಿಂದ ಅನ್ಯಭಾಷಿಕರಿಗೇನೂ ಪ್ರಯೋಜನವಿಲ್ಲ ಎಂಬುದರ ಬಗ್ಗೆ ಕೇಂದ್ರಕ್ಕೆ ಮನವರಿಕೆ ಇದ್ದರೂ, ಇಂತಹ ಧೋರಣೆ ತೋರುತ್ತಿರುವುದು ಹಿಂದಿ ಭಾಷೆ ಮತ್ತು ಭಾಷಿಕರ ಹಿತಕ್ಕೇ ಹೊರತು ಅನ್ಯ ಭಾಷಿಕರಿಗಲ್ಲ. ಹಾಗಿದ್ದ ಮೇಲೆ ಕನ್ನಡಿಗರಿಗೇಕೆ ಬೇಕು ಹಿಂದಿ?
 - ಹರ್ಷಿತ್ ಮಂಜುನಾಥ್,  ಬಸರವಳ್ಳಿ.


ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.