ಮಕ್ಕಳ ಆಸೆ ಪೂರೈಸುವ ಸಂಸ್ಥೆ
ಮರಣಾಸನ್ನ ಮತ್ತು ಗುಣಪಡಿಸಲಾಗದಂತಹ ರಕ್ತಕ್ಷಯ, ಥೆಲಸೀಮಿಯದಂತಹ ರೋಗಪೀಡಿತ ಮಕ್ಕಳ ...
ಮರಣಾಸನ್ನ ಮತ್ತು ಗುಣಪಡಿಸಲಾಗದಂತಹ ರಕ್ತಕ್ಷಯ, ಥೆಲಸೀಮಿಯದಂತಹ ರೋಗಪೀಡಿತ ಮಕ್ಕಳ ಎಳೆಯ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಸಾವು ಸಮೀಪಿಸಿದರೂ ಅವರ ವಯೋಸಹಜವಾದ ಕೆಲವು ಬಯಕೆಗಳಿರುತ್ತವೆ. ಅದು ಹೆಲಿಕಾಪ್ಟರ್‌ನಲ್ಲಿ ಸಂಚರಿಸಬೇಕೆಂದೋ, ನಯಾಗರಾ ಜಲಪಾತವನ್ನು ನೋಡಬೇಕೆಂದೋ, ಡಿಸ್ನಿಲ್ಯಾಂಡಿಗೆ ಭೇಟಿ ನೀಡಬೇಕೆಂದೋ, ಅಮೆರಿಕದ ರಾಷ್ಟ್ರಪತಿ ಒಬಾಮರನ್ನು ಮಾತನಾಡಿಸಬೇಕೆಂದೋ, ಅಮಿತಾಭ್ ಬಚ್ಚನ್ ಅವರೊಡನೆ ಆಡಬೇಕೆಂದೋ, ಸಚಿನ್ ತೆಂಡೂಲ್ಕರ್ ಜೊತೆಗೆ ಉಪಹಾರ ಸೇವಿಸಬೇಕೆಂದೋ, ಪೊಲೀಸ್ ಉಡುಪು ಧರಿಸಿ ಜೀಪಿನಲ್ಲಿ ಸುತ್ತಾಡಬೇಕೆಂತಲೋ -ಹೀಗೆ ಹತ್ತು ಹಲವಾರು ಆಸೆಗಳಿರಬಹುದು. ಅವುಗಳನ್ನು ಪೂರೈಸಲು ಪೋಷಕರಿಗೆ ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಇಂತಹ ಮಕ್ಕಳ ಆಸೆ ಏನೇ ಇದ್ದರೂ ಅವುಗಳನ್ನು ಪೂರೈಸಲು ಮುಂದೆ ಬರುವ ಒಂದು ಸಂಸ್ಥೆ ಮೇಕ್ ಎ ವಿಶ್ ಫೌಂಡೇಷನ್. ಈ ಸಂಸ್ಥೆಯ ನೆರವು ಪಡೆಯಲು ಎರಡು ಮುಖ್ಯ ಅರ್ಹತೆಯೆಂದರೆ, ಮಕ್ಕಳು ಎರಡೂವರೆ ವರ್ಷದಿಂದ 18 ವರ್ಷದ ವಯೋವುತಿಯಲ್ಲಿರಬೇಕು ಮತ್ತು ವೈದ್ಯರು ಸದರಿ ಮಗುವಿನ ಖಾಯಿಲೆ ಗುಣಪಡಿಸಲಾಗದ್ದೆಂದು ತಿಳಿಸಬೇಕು. ಅಂತಹ ಮಕ್ಕಳ ಎಲ್ಲ ಆಶಯಗಳನ್ನೂ ಪೂರೈಸುವುದು ಈ ಸಂಸ್ಥೆಯ ಕರ್ತವ್ಯವಾಗಿದೆ. 1983ರಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಈ ಸಂಸ್ಥೆ ತನ್ನ ಕಾರ್ಯ ಕ್ಷೇತ್ರವನ್ನಿಂದು 50 ದೇಶಗಳಿಗೆ ವಿಸ್ತರಿಸಿಕೊಂಡಿದೆ. ಮುಂಬೈಯಲ್ಲಿ ಸಹ ಈ ಸಂಸ್ಥೆಯ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೆ ಇಂತಹ 25 ಸಾವಿರಕ್ಕೂ ಹೆಚ್ಚು ಮಕ್ಕಳ ಆಸೆ ಪೂರೈಸಿದ ತೃಪ್ತಿ ಈ ಫೌಂಡೇಷನ್ನಿಗಿದೆ. ಅದಕ್ಕಾಗಿ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ನೆರವನ್ನೂ ಪಡೆಯಲಾಗುತ್ತಿದೆ. ಪ್ರಸಿದ್ಧ ಅಂತಾರಾಷ್ಟ್ರೀಯ ಕುಸ್ತಿಪಟು ಜಾನ್ ಸೇನಾ 450ಕ್ಕೂ ಹೆಚ್ಚು ಮಕ್ಕಳ ಆಸೆಯನ್ನು ನೆರವೇರಿಸಿದ ಏಕೈಕ ವ್ಯಕ್ತಿಯೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡೇವಿಡ್ ವಿಲಿಯಮ್ಸ್ ಹೇಳುವಂತೆ ಯಾವ ಅಲ್ಪಾಯು ಮಕ್ಕಳೂ ತಮ್ಮ ಆಸೆ ನೆರವೇರಿಸಿಕೊಳ್ಳದೇ ಮರಣಿಸಬಾರದು.
ಈ ಸಂಸ್ಥೆಗೆ ಮಗುವಿನ ಆಸೆಯ ಬಗ್ಗೆ ಮನವಿ ಬಂದಾಕ್ಷಣ, ಸಂಸ್ಥೆಯವರು ಸಂಬಂಧ ಪಟ್ಟ ವೈದ್ಯರಿಂದ ಮಗುವಿನ ರೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು, ಮಗುವಿನ ತಂದೆ ತಾಯಿಯರನ್ನು ಸಂಪರ್ಕಿಸಿ ವಿಚಾರ ವಿನಿಮಯ ಮಾಡುತ್ತಾರೆ. ನಂತರ ಸಹಾಯಕ್ಕೆ ಯೋಗ್ಯವಾಗಿದೆ ಎಂಬುದನ್ನು ದೃಢೀಕರಿಸಿಕೊಂಡು ಅಂತಹ ಮಕ್ಕಳ ಇಚ್ಛೆಪೂರೈಸಲು ಕ್ರಮ ಕೈಗೊಳ್ಳುತ್ತಾರೆ. ಹೆಚ್ಚಿನ ವಿವರಗಳಿಗೆ info@makeawishindia.org .
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

