ಸಂಪಾದಕೀಯ

ಮಾಧ್ಯಮಗಳ ಶೋಕಿ ಮಿತ್ರರು

ಹತ್ತು ವರ್ಷಗಳು ನಿರಂತರ ಆಡಳಿತ ನಡೆಸಿದ ಕಾಂಗ್ರೆಸ್ (ಯುಪಿಎ) ಆತ್ಮಹತ್ಯೆ ಮಾಡಿಕೊಂಡದ್ದು ....

Published On :

ಹತ್ತು ವರ್ಷಗಳು ನಿರಂತರ ಆಡಳಿತ ನಡೆಸಿದ ಕಾಂಗ್ರೆಸ್ (ಯುಪಿಎ) ಆತ್ಮಹತ್ಯೆ ಮಾಡಿಕೊಂಡದ್ದು ಈಗ ಇತಿಹಾಸ. ಆ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ಪಡೆಯಲೂ ಜನಾದೇಶ ಸಿಕ್ಕಿಲ್ಲ. ದುರಾಡಳಿತ, ನಿಷ್ಕ್ರಿಯತೆ, ರಾಷ್ಟ್ರಾಭಿಮಾನ ಕಾರ್ಯಸೂಚಿ ವ್ಯಾಖ್ಯಾನಗಳಲ್ಲಿ ತೊಡಕು ಕಿವಿ ಕಚ್ಚುವವರ ಗುಂಪಿನಲ್ಲೇ ರಿಮೋಟ್ ಆಡಳಿತ ನಡೆಸಿದ ಯುಪಿಎ ದೇಶದೆಲ್ಲೆಡೆ ನರೇಂದ್ರ ಮೋದಿ ಸಾರಥ್ಯದ ಬಿಜೆಪಿಗೆ ಪ್ರಮೋಟ್ ದಾರಿ ತೋರಿತ್ತು. ಅಪೂರ್ವ ಅವಕಾಶದಲ್ಲಿ ಅದ್ಭುತ ವಿಜಯ ದಾಖಲಿಸಿಕೊಂಡ ಬಿಜೆಪಿ ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ನಂತರ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿಕೊಂಡಿದೆ.
ಮಾಧ್ಯಮಗಳಲ್ಲಿ ಶೋಕಿ ಮಿತ್ರರಾದ ಕಮಲ ಪರಿವಾರದವರು ಅಧಿಕಾರ ವಹಿಸಿಕೊಂಡು ತಿಂಗಳು ಕಳೆಯುವುದರಲ್ಲೇ ಹೇಳಿಕೆಗಳ ಹುಚ್ಚಿಗೆ ಬಿದ್ದು ಅನರ್ಥಗಳನ್ನು ಹೇರಿಕೊಂಡು ಕಸಿವಿಸಿ ಸಂದಿಗ್ಧಗಳಿಗೆ ಕಾರಣೀಭೂತರಾಗಿದ್ದಾರೆ. ಬೆಲೆ ಏರಿಕೆಗೆ ರೇಲ್ವೆ ದರ ಹೆಚ್ಚಿಸಿ ಕಾರಣರಾದ ಮಾನ್ಯ ರೇಲ್ವೆ ಸಚಿವರು ಯುಪಿಎ ಸಿದ್ಧಪಡಿಸಿದ್ದ ದರ ಏರಿಕೆ ಪಟ್ಟಿಯನ್ನೇ ನಾವು ಜಾರಿಗೊಳಿಸಿದ್ದೇವೆ ಎನ್ನುವ ಮೂಲಕ ಯುಪಿಎ ಶವದ ಪೆಟ್ಟಿಗೆಯನ್ನು ಹೊರತೆಗೆದಿದ್ದಾರೆ. ಇಂತಹ ಮಾತುಗಳಾಡುವ ಔಚಿತ್ಯವಾದರೂ ಏನಿತ್ತು? ಹಾಗಾದರೆ ಈ ಎನ್‌ಡಿಎ ಸರ್ಕಾರ ಯುಪಿಎ ಸರ್ಕಾರದ ಮುಂದುವರಿದ ಭಾಗವೇ? ಜನಸಾಗರ ಇಂತಹ ಮಿಮಿಕ್ರಿ ಮಾತುಗಳನ್ನು ಒಪ್ಪರು. ರಾಜಧಾನಿ ಎಕ್ಸ್‌ಪ್ರೆಸ್ ಅಪಘಾತಗೊಂಡ ಸಮಯದಲ್ಲಿ ರೇಲ್ವೆ ಸಚಿವರದ್ದು ನಕ್ಸಲೈಟ್ ಕಡೆಗೆ ಬೊಟ್ಟು . ರಾಜನಾಥ್‌ಸಿಂಗ್‌ರವರದ್ದು ನಕ್ಸಲೈಟ್ ಕೃತ್ಯ ಇರಲಿಕ್ಕಿಲ್ಲ ಎನ್ನುವ ಉವಾಚ. ಒಂದೇ ಸರ್ಕಾರದ ಅತ್ಯುನ್ನತ ಖಾತೆಗಳ ಮಂತ್ರಿಗಳ ದ್ವಂದ್ವ -ಭಿನ್ನ ಹೇಳಿಕೆಗಳು! ಹಿಂದಿ ಹೇರಿಕೆಯ ರಾಡಿ, ಆರ್ಟಿಕಲ್ 370 ವಿಧಿಯ ಮಾಧ್ಯಮಗಳ ಮುಂದಿನ ಅನಗತ್ಯ ಚರ್ಚೆ. ನವ ತಂಗಾಳಿಯಾಗಿ ಪಸರಿಸಬೇಕಾದ ನೂತನ ಸರ್ಕಾರ ಆಡಳಿತ ಅನುಭವ ಕೊರತೆಯಿಂದಲೋ ಪಿತ್ತ ಹೆಚ್ಚಿಸಿಕೊಂಡ ಸಲುವಾಗೋ ಬಿರುಗಾಳಿಯಾಗದಿರಲೆಂದು ಆಶಯ.
-ಎಚ್. ಆನಂದಕುಮಾರ್, ಚಿತ್ರದುರ್ಗ

ಅನಾಹುತಕ್ಕೆ ಉದಾಸೀನ ಕಾರಣ
ಬಿಜಾಪುರದ ನಾಗಠಾಣಾ ಗ್ರಾಮದ ತೋಟದಲ್ಲಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ಅಕ್ಷತಾಳ ಬಗ್ಗೆ ಕರ್ನಾಟಕದಾದ್ಯಂತ ತೋರಿ ಬಂದ ಪ್ರತಿಕ್ರಿಯೆ ಜತೆಗೆ ಮಗುವನ್ನು ಉಳಿಸಲು ಮಾಡಿದ ಹರಸಾಹಸ ಎಲ್ಲರ ಕಣ್ಣಿಗೆ ಕಟ್ಟಿದಂತಿದೆ. ಈಗ ನಾಲ್ಕೈದು ವರ್ಷಗಳ ಹಿಂದೆ ಕೂಡಾ ಇಂಥ ಪ್ರಕರಣಗಳಾಗಿ ಬದುಕುಳಿಯದ ಜೀವಿಗಳ ಬಗ್ಗೆ ನಾವು ತೀವ್ರವಾಗಿ ಆಲೋಚಿಸಬೇಕಾಗಿದೆ. ಈ ತೆರೆದ ಕೊಳವೆ ಬಾವಿಗಳಿಂದಾಗುವ ದುರಂತಗಳನ್ನು ತಪ್ಪಿಸುವ ಬಗ್ಗೆ ಜನರೇಕೆ ಯೋಚಿಸುತ್ತಿಲ್ಲ!
ಮೊದಲನೆಯದಾಗಿ ಕೊಳವೆ ಬಾವಿಗಳನ್ನು ಬಂದೋಬಸ್ತ್ ಮಾಡಿ ಯಾರ ಪ್ರಾಣಕ್ಕೂ ಹಾನಿಯಾಗದಂತೆ ಎಚ್ಚರ ವಹಿಸಬೇಕಾದ್ದು ಅದರ ಮಾಲೀಕರ ಕರ್ತವ್ಯ. ಸ್ವಲ್ಪ ಮುಂದಾಲೋಚನೆಯಿದ್ದಿದ್ದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಿತ್ತು. ಈಗಲೂ ಕೆಲವು ಕಡೆ ಜೀವಂತವಾಗಿರುವ ಕೊಳವೆ ಬಾವಿಗಳನ್ನು
ಆದಷ್ಟು ಬೇಗ ಮುಚ್ಚಿ ಮಕ್ಕಳ ಪ್ರಾಣ ಉಳಿಸುವ ಬಗ್ಗೆ ಆಲೋಚಿಸಬೇಕಾಗಿದೆ. ಇಂತಹ ದುರಂತಗಳು ನಡೆದಾಗ ಮನೆಯವರಿಗಾಗುವ ದುಃಖ, ಸಂಕಟ, ಸಾರ್ವಜನಿಕರ ಸಂತಾಪ ಜೊತೆ ಜೊತೆಗೇ ಎಷ್ಟೋ ಜನ ಊಟ, ನಿದ್ರೆ ಬಿಟ್ಟು ಕಾಯುತ್ತಾ ಇದ್ದು, ಅಮೂಲ್ಯ ಸಮಯದ ಅಪವ್ಯಯ, ಸಾವಿರಾರು ಜನ  ಕಣ್ಗಾವಲಿನಲ್ಲಿದ್ದಂತೆ ಇದ್ದರೂ ಮಗುವಿನ ಪ್ರಾಣ ಉಳಿಸಬೇಕಿತ್ತು. ಮಗುವಿನ ಮನೆಯವರೂ ಸ್ವಲ್ಪ ಜಾಗ್ರತೆ ವಹಿಸಬೇಕಿತ್ತು. ಮುಂದಾದರೂ ಇಂತಹ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ.
-ವಿಜಯಾ ಎ. ಡೋಂಗ್ರೆ, ಕೊಪ್ಪ


ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.