ಸಂಪಾದಕೀಯ

ಆತ್ಮಾಭಿಮಾನವೆಂದರೆ ಇದು

Published On :

ಕೆ.ಜಿ. ಕುಂದಣಗಾರರ ಹೆಸರು ಪ್ರಾಚ್ಯವಿದ್ಯಾಶಾಸ್ತ್ರದಲ್ಲಿ ಹಿರಿಯ ಹೆಸರು. ಅಧ್ಯಯನ ಅವರ ಉಸಿರಾಗಿತ್ತು. ಜೈನ ಮತ್ತು ವೀರಶೈವ ವಿದ್ವಾಂಸರಾದ ಕಲ್ಲಪ್ಪ ಗುರಪ್ಪ ಕುಂದಣಗಾರರು ಮೂಲತಃ ಕೌಜಲಗಿಯವರು. ಅತಿ ಬಡ ಕುಟುಂಬದಿಂದ ಬಂದ ಶ್ರೀಯುತರು ತುಂಬ ಕಷ್ಟಪಟ್ಟು ಮುಂದೆ ಬಂದವರು. "ಜಿನ ವಿಜಯ" ಪತ್ರಿಕೆಯ ಸಂಪಾದಕರಾಗಿದ್ದರು. ಸಂಸ್ಕೃತ, ಪಾಲಿ, ಕನ್ನಡ, ಪ್ರಾಕೃತ ಮತ್ತು ಮರಾಠಿ ಭಾಷೆಗಳ ಬಗ್ಗೆ ಪರಿಣಿತರಾಗಿದ್ದ ಕುಂದಣಗಾರರು ಒಳ್ಳೆಯ ಪ್ರಾಧ್ಯಾಪಕರಾಗಿದ್ದರು. ಗದಗ್ನಲ್ಲಿ ನಡೆದ 43ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕುಂದಣಗಾರರು ಕನ್ನಡ ಸಾಹಿತ್ಯಕ್ಕೆ ಅನೇಕ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಸರಸ್ವತಿ ಮತ್ತು ಮಹಾದೇವಿಯಕ್ಕ ಕೃತಿಗಳನ್ನೂ, ಅಲ್ಲದೆ ಅನೇಕ ಮೌಲಿಕ ಕೃತಿಗಳನ್ನು ಕನ್ನಡದಿಂದ ಇತರ ಭಾಷೆಗೆ ಅನುವಾದ ಮಾಡಿದ್ದಾರೆ. ಸರಳರೂ, ಸಜ್ಜನರೂ ಆಗಿದ್ದ ಕುಂದಣಗಾರರು ಜೀವನದಲ್ಲಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದವರು. ಕೊನೆಕೊನೆಗಂತೂ ದಿನನಿತ್ಯದ ಊಟಕ್ಕೂ ಪರದಾಡುವಂತಾಯಿತು.
ಅವರ ಬಳಿ ಅಪಾರವಾದ ಪುಸ್ತಕ ಭಂಡಾರವಿತ್ತು. ಆಗಿನ ಕಾಲಕ್ಕೇ ಅದು ಸಹಸ್ರಾರು ರುಪಾಯಿ ಬೆಲೆಬಾಳುವಂತಹದ್ದು. ತಮ್ಮ ದುಡಿಮೆಯ ಬಹುಭಾಗವನ್ನು ಅವರು ಪುಸ್ತಕಕ್ಕಾಗಿ ವಿನಿಯೋಗಿಸಿದ್ದರು. ಒಂದು ಹೊತ್ತು ಕೂಳಿಗೂ ತತ್ವಾರವಾಗಿದ್ದ ಅವರಿಗೆ ನೆರವಾಗಲೆಂದು ಕರ್ನಾಟಕ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಡಿ.ಸಿ.ಪಾವಟೆಯವರು ಅವರ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ವಿಶ್ವವಿದ್ಯಾನಿಲಯಕ್ಕಾಗಿ ಕೊಳ್ಳುವ ನಿರ್ಧಾರ ಕೈಗೊಂಡರು. ಅದರಂತೆ ಡಾ.ಆರ್.ಸಿ.ಹಿರೇಮಠ್ ಮತ್ತು ಸಂಗಡಿಗರು ವಿಶ್ವವಿದ್ಯಾನಿಲಯದ ಪರವಾಗಿ ಬೆಳಗಾವಿಯಲ್ಲಿದ್ದ ಕುಂದಣಗಾರರನ್ನು ಕಂಡು ಅವರಿಗೆ ಪಾವಟೆಯವರ ಉದ್ದೇಶವನ್ನು ತಿಳಿಸಿದರು. ವಿಶ್ವ ವಿದ್ಯಾನಿಲಯದ ವತಿಯಿಂದ ನೀಡಿದ ಇಪ್ಪತ್ತು ಸಾವಿರ ರು.ಗಳ ಚೆಕ್ಕನ್ನು ಸ್ವೀಕರಿಸಬೇಕೆಂದೂ, ಪುಸ್ತಕಗಳೆಲ್ಲವನ್ನೂ ಮೌಲ್ಯ ಮಾಪನ ಮಾಡಿ ಇನ್ನುಳಿದ ಹಣವನ್ನು ನಂತರ ನೀಡಲಾಗುವುದೆಂದು ತಿಳಿಸಿದರು. ಇದನ್ನು ಕೇಳಿ ಕುಂದಣಗಾರರಿಗೆ ಸಂತೋಷವಾಗುವ ಬದಲು ಕಣ್ಣೀರು ಧಾರೆಯಾಗಿ ಹರಿಯಿತು. ಅವರು ತಮ್ಮ ಬಳಿಯಿದ್ದ ಅಪಾರ ಸಾಹಿತ್ಯ ಭಂಡಾರವನ್ನು ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಅದಕ್ಕಾಗಿ ಅವರು ಹೇಳಿದರು, "ಈ ಸರಸ್ವತಿಯನ್ನು ಮಾರಿಕೊಂಡು ಬದುಕಲಿಕ್ಕೆ ಹೇಳುವಿರೇನು? ಅದು ನನ್ನ ಕಡೆಯಿಂದ ಆಗುವಂಥಹುದಲ್ಲ. ಈ ಚೆಕ್ಕು ಪಾವಟೇ ಸಾಹೇಬರಿಗೇ ನೀಡಿ ನನ್ನ ಕೃತಜ್ಞತೆ ತಿಳಿಸಿ". ಅಂತಹ ದೈನ್ಯ ಪರಿಸ್ಥಿತಿಯಲ್ಲಿಯೂ ತಮ್ಮ ಪುಸ್ತಕ ಭಂಡಾರವನ್ನು ಮಾರಿಕೊಳ್ಳದೇ ತಮ್ಮ ಆತ್ಮಾಭಿಮಾನವನ್ನು ತೋರಿದ್ದು ಮೆಚ್ಚುಗೆಯ ವಿಷಯವಾಗಿತ್ತು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.