ಏಕತೆಗಾಗಿ ಹೋರಾಡಿದ ಅಬ್ದುಲ್ ರೆಹಮಾನ್
ಮಹಮ್ಮದ್ ಅಬ್ದುಲ್ ರೆಹಮಾನ್ ಸಾಹೇಬ್ ಕೇರಳದ ಒಬ್ಬ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ. ಕೇರಳದ ಅಜಕೋಡ್ನವರಾದ ಇವರು ಗಾಂಧೀಜಿಯ ಅನುಯಾಯಿಗಳಾಗಿ, ಪತ್ರಕರ್ತರಾಗಿ, ಹಿಂದು-ಮುಸ್ಲಿಂ ಬಾಂಧವ್ಯ ವೃದ್ಧಿಗಾಗಿ ಶ್ರಮಿಸಿದ ಅಪ್ಪಟ ದೇಶಪ್ರೇಮಿ. ಕೇರಳದಲ್ಲಿ ಖಿಲಾಫತ್ ಚಳವಳಿಯ ನೇತೃತ್ವವನ್ನು ವಹಿಸಿದ್ದ ರೆಹಮಾನ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅನೇಕ ಬಾರಿ ಜೈಲುವಾಸ ಅನುಭವಿಸಿದರು. 1937ರಲ್ಲಿ ಮದರಾಸು ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಅಬ್ದುಲ್ ರೆಹಮಾನ್ ಆಲಿ ಸಹೋದರರ ಉದಾತ್ತ ಧ್ಯೇಯ, ಆದರ್ಶಗಳಿಂದ ಪ್ರೇರೇಪಿತರಾಗಿದ್ದರು. 1921 ಕೇರಳದ ಇತಿಹಾಸದಲ್ಲಿ ಒಂದು ಪ್ರಮುಖವಾದ ವರ್ಷ. ಏಕೆಂದರೆ ಆ ವರ್ಷ ಮಾಪಿಳ್ಳೆಗಳ ಬಂಡಾಯ ರಾಷ್ಟ್ರ ರಾಜಕಾರಣಕ್ಕೆ ತಿರುವು ನೀಡಿದ ಘಟನೆ. ಆಗ ನಡೆದ ಕೋಮು ಗಲಭೆಯಿಂದಾಗಿ ಹಲವಾರು ಜನ ಸಾವು ನೋವುಗಳಿಗೀಡಾದರು. ಪರಿಸ್ಥಿತಿ ಕೈಮೀರಿದಾಗ ಜನರ ನೆರವಿಗೆ ಧಾವಿಸಿ ಬಂದವರು ಮಹಮ್ಮದ್ ಅಬ್ದುಲ್ ರೆಹಮಾನ್. ಗಲಭೆ ಪೀಡಿತ ಪ್ರದೇಶಗಳಲ್ಲಿ ಹಗಲು ರಾತ್ರಿಯೆನ್ನದೆ ತಿರುಗಿ, ತಮ್ಮ ಜೀವವನ್ನೇ ಒತ್ತೆಯಿಟ್ಟು ಎರಡೂ ಕೋಮಿನ ಮುಖಂಡರ ಜೊತೆ ಸಮಾಲೋಚಿಸಿ, ಶಾಂತಿ ನೆಲೆಸಲು ಪ್ರಯತ್ನ ಪಟ್ಟು ಯಶಸ್ವಿಯಾದರು. ಹೀಗಾಗಿ ಅವರನ್ನು ಹಿಂದೂ-ಮುಸ್ಲಿಂ ಬಾಂಧವರು ಪ್ರೀತಿಯಿಂದ ಮತ್ತು ವಿಶ್ವಾಸದಿಂದ ಕಾಣುವಂತಾಯಿತು. ತಮ್ಮ ಪತ್ರಿಕೆ ಆಲ್ ಅಮೀನ್ ಮೂಲಕ ಮುಸ್ಲಿಂ ಬಾಂಧವರಲ್ಲಿ ರಾಷ್ಟ್ರೀಯತೆಯ ಸದ್ಭಾವನೆ ಮೂಡಲು ನೆರವಾದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಶಿಕ್ಷೆ ಸಹ ಅನುಭವಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸರ ಬಗ್ಗೆ ಅತೀವ ಗೌರವವನ್ನಿಟ್ಟುಕೊಂಡಿದ್ದ ರೆಹಮಾನ್ ಕೆಲಕಾಲ ಫಾರ್ವರ್ಡ್ ಬ್ಲಾಕ್ ಕಾರ್ಯಕರ್ತರೂ ಆಗಿದ್ದರು. 1945ರಲ್ಲಿ ಐದುವರ್ಷಗಳ ಕಾರಾಗೃಹವಾಸದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮರಣಿಸಿದ ಇವರನ್ನು ಇಂದಿಗೂ ಕೇರಳೀಯರು ವೀರಪುತ್ರನೆಂದು ಗೌರವಿಸುತ್ತಾರೆ. ಇದೇ ಹೆಸರಿನ ಚಲನಚಿತ್ರವೂ ತಯಾರಾಗಿದೆ. ಒಬ್ಬ ಕಟ್ಟಾ ಮುಸಲ್ಮಾನ್ ಮೌಲ್ವಿಯೊಬ್ಬ ರೆಹಮಾನ್ರನ್ನು ಕರೆಸಿ, ಹಿಂದೂಗಳ ಬಗ್ಗೆ ಅವರಿಗಿದ್ದ ಪ್ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ರೆಹಾಮಾನ್ ಹೇಳಿದರು: "ಭಾರತದ ಅಸ್ತಿತ್ವದ ಮೂಲ ಬೇರು ಹಿಂದೂ-ಮುಸ್ಲಿಂ ಐಕ್ಯತೆಯ ಮೇಲೆ ನಿಂತಿದೆ. ಭಾರತದ ಶಾಂತಿ ಮತ್ತು ಅಭಿವೃದ್ಧಿಗೆ ಎರಡೂ ಸಮುದಾಯದ ಒಗ್ಗಟ್ಟು ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿ ನಾನು ಬಲಿದಾನಕ್ಕೂ ಸಿದ್ಧನಾಗಿದ್ದೇನೆ."
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

