ಸಂಪಾದಕೀಯ

ಮೊರಾರ್ಜಿಗಾಗಿ ಕಾಯದ ಅಣ್ಣೂ ಗುರೂಜಿ

ಅಣ್ಣೂ ಗುರೂಜಿಯವರು ಹುಕ್ಕೇರಿಯ ಪಾಚಾಪುರದವರು. ಅವರ ಮೂಲ ಹೆಸರು ಬಿ.ವೈ.ದೇಶಪಾಂಡೆ. ಅದರೆ ಅವರನ್ನು ಎಲ್ಲರೂ ಅಣ್ಣೂಗುರೂಜಿ...

Published On :

ಅಣ್ಣೂ ಗುರೂಜಿಯವರು ಹುಕ್ಕೇರಿಯ ಪಾಚಾಪುರದವರು. ಅವರ ಮೂಲ ಹೆಸರು ಬಿ.ವೈ.ದೇಶಪಾಂಡೆ. ಅದರೆ ಅವರನ್ನು ಎಲ್ಲರೂ ಅಣ್ಣೂಗುರೂಜಿ ಎಂದೇ ಕರೆಯುತ್ತಿದ್ದರು. ಉತ್ತರ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಗಣ್ಯರಾಗಿದ್ದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಭೂಗತರಾಗಿದ್ದುಕೊಂಡು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಅವರನ್ನು ಹಿಡಿಯಲು ಬ್ರಿಟಿಷರು ಐದು ಸಾವಿರ ರು.ಗಳ ಬಹುಮಾನ ಘೋಷಿಸಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಅವರಿಗೆ ಜೈಲು ಶಿಕ್ಷೆಯೂ ಆಗಿತ್ತು. ಗಾಂಧೀಜಿಯವರ ಅನುಯಾಯಿಗಳಾಗಿದ್ದ ಗುರೂಜಿಯವರು ಸರಳ ಜೀವನಕ್ಕೆ ಪ್ರಾಶಸ್ತ್ಯ ನೀಡಿದ್ದರು. ಜೈಲಿನಲ್ಲಿದ್ದಾಗ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು. ಬೆಳಗಾವಿ ಸಮಸ್ಯೆಯ ಬಗ್ಗೆ ಮಹಾಜನ್ ಆಯೋಗ ರಚನೆಯಾದಾಗ ಬೆಳಗಾವಿ ಕರ್ನಾಟಕಕ್ಕೆ ಏಕೆ ಸೇರಿದೆ ಎಂಬುದನ್ನು ದಾಖಲೆ ಸಹಿತವಾಗಿ ಪ್ರತಿಪಾದಿಸಿದವರು ಅಣ್ಣೂ ಗುರೂಜಿ. ಮಹಾಜನ್ ಅವರು ಇಂಗ್ಲಿಷಿನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದ ಅಪ್ಪಟ ಕನ್ನಡಿಗರಾಗಿದ್ದರು. ಒಮ್ಮೆ ಮೊರಾರ್ಜಿ ದೇಸಾಯಿಯವರು ಕೊಲ್ಲಾಪುರಕ್ಕೆ ಬಂದಾಗ ಅಣ್ಣೂ ಗುರೂಜಿಯವರನ್ನು ಭೇಟಿ ಮಾಡಲು ಬೆಳಗಾವಿಗೂ ಬಂದರು. ಮೊರಾರ್ಜಿಯಂಥವರು ಬೆಳಗಾವಿಗೆ ಬರುವರೆಂದು ಸಂಭ್ರಮಿಸಿದ ಅನೇಕರು ಅವರ ಸ್ವಾಗತಕ್ಕಾಗಿ ವ್ಯಾಪಕ ಏರ್ಪಾಡುಗಳನ್ನು ಮಾಡಿಕೊಂಡು ಕಾಯುತ್ತಿದ್ದರೆ, ಅಣ್ಣೂ ಗುರೂಜಿಯವರು ಮಾತ್ರ ಪಾಚಾಪುರದಲ್ಲಿ ಕಟ್ಟಿಸುತ್ತಿದ್ದ ಗಾಂಧಿಭವನ ಕಟ್ಟಡದ ಉಸ್ತುವಾರಿಗೆ ಹೊರಟು ನಿಂತರು. ಎಲ್ಲರಿಗೂ ಆಶ್ಚರ್ಯ. ಮೊರಾರ್ಜಿಯವರನ್ನು ಭೆಟ್ಟಿಯಾಗುವುದಿಲ್ಲವೆ ಎಂದು ಕೇಳಿದ್ದಕ್ಕೆ ಅವರು ನೀಡಿದ ಉತ್ತರ ಮಾರ್ಮಿಕವಾಗಿತ್ತು. "ಮೊರಾರ್ಜಿ ಬರಲಿ. ನನ್ನದೇನೂ ಅವರ ಬಳಿ ಕೆಲಸವಿಲ್ಲ. ನನಗೆ ಬೇರೆ ಉಪಯುಕ್ತ ಕೆಲಸವಿದೆ ಎಂದು ಹೇಳಿ ಹೊರಟೇ ಬಿಟ್ಟರು. ಮೊರಾರ್ಜಿ ಬಂದು ಅಣ್ಣೂ ಗುರೂಜಿಯವರ ಬಗ್ಗೆ ವಿಚಾರಿಸಿದಾಗ ಅವರು ಪಾಚಾಪುರಕ್ಕೆ ಹೊರಟು ಹೋದದ್ದು ತಿಳಿಯಿತು. ಅದಕ್ಕೆ ಅವರು ಬೇಸರಿಸದೆ, "ಹೋಗಲಿ ಬಿಡಿ, ಅವರಿಗೆ ಯಾರದೇ ಪರಿವೆಯಾಗಲೀ, ಗಮನವಾಗಲೀ ಇಲ್ಲ. ಆತ ಹಠಮಾರಿ" ಎಂದರು. ಸ್ವಾತಂತ್ರ್ಯಾನಂತರ ಅವರು ಮನಸ್ಸು ಮಾಡಿದ್ದರೆ ರಾಜಕೀಯದಲ್ಲಿ ಯಾವುದೇ ಅಧಿಕಾರವನ್ನು ಪಡೆಯಬಹುದಾಗಿತ್ತು. ಆದರೆ ಹಾಗೆ ಮಾಡದೆ, ಸಮಾಜಸೇವೆ ಮಾಡುತ್ತಾ ಕಾಲ ಕಳೆದರು. ಅವರ ನಿಸ್ಪೃಹ ಸೇವೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲು 2005ರಲ್ಲಿ ಅವರ ಶತಮಾನೋತ್ಸವ ಸಮಾರಂಭವನ್ನು ಏರ್ಪಡಿಸಿ, ನುಡಿನಮನ ಸಲ್ಲಿಸಲಾಯಿತು.



- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.