ಇಂದಿಗೂ ಕಸಮುಸುರೆ ಕೆಲಸ ಬಿಟ್ಟಿಲ್ಲ
ಬೇಬಿ ಹಲ್ದರ್ ಒಬ್ಬ ಬಂಗಾಲಿ ಲೇಖಕಿ. ಆಕೆ ಓದಿದ್ದು ಆರನೇ ತರಗತಿಯಾದರೂ ಆಕೆ ಬರೆದ "ಆಲೋ ಆಂಧಾರಿ" (ಬೆಳಕು ಮತ್ತು ಕತ್ತಲು) ...
ಬೇಬಿ ಹಲ್ದರ್ ಒಬ್ಬ ಬಂಗಾಲಿ ಲೇಖಕಿ. ಆಕೆ ಓದಿದ್ದು ಆರನೇ ತರಗತಿಯಾದರೂ ಆಕೆ ಬರೆದ "ಆಲೋ ಆಂಧಾರಿ" (ಬೆಳಕು ಮತ್ತು ಕತ್ತಲು) ಎಂಬ ಬಂಗಾಲಿ ಕೃತಿ, "ಎ ಲೈಫ್ಲೆಸ್ ಆರ್ಡಿನರಿ" ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ತರ್ಜುಮೆಯಾಗಿ ಬಿಸಿದೋಸೆಯಂತೆ ಖರ್ಚಾಗಿದೆ. ಅಲ್ಲದೆ ಫ್ರೆಂಚ್, ಜರ್ಮನ್, ಜಪಾನೀಸ್ ಸೇರಿ ಹನ್ನೆರಡು ವಿದೇಶೀ ಭಾಷೆಗಳಿಗೆ ತರ್ಜುಮೆಯಾಗಿ ಅಪಾರ ಹೆಸರು ತಂದುಕೊಟ್ಟಿದೆ. ಪ್ಯಾರಿಸ್, ಫ್ರಾಂಕ್ಫರ್ಟ್, ಹಾಂಕಾಂಗ್ಗಳಿಗೆ ಹೋಗಿ ಅಲ್ಲಿನ ಚಿಂತಕರ ಜೊತೆ ವೇದಿಕೆ ಹಂಚಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾಳೆ ಹಲ್ದರ್. ಆದರೂ ಸಹ ಇಂದಿಗೂ ಅವರು ಪ್ರೊ. ಪ್ರಬೋದ್ ಕುಮಾರ್ ಅವರ ಮನೆಯ ಕಸ ಮುಸುರೆ ಕೆಲಸವನ್ನು ಮಾತ್ರ ಬಿಟ್ಟಿಲ್ಲ. ಕಾಶ್ಮೀರದಲ್ಲಿ ಜನಿಸಿದ ಬೇಬಿ ಹಲ್ದರ್ ಕೊನೆಗೆ ತಾಯಿಯೊಡನೆ ವಲಸೆ ಬಂದಿದ್ದು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ. ಅವಳ ಬದುಕು ಒಂದು ಹೋರಾಟ. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಈಕೆ ಹನ್ನೆರಡು ವರ್ಷದವಳಿದ್ದಾಗ ತನಗಿಂತ 14 ವರ್ಷ ಹಿರಿಯನ ಜೊತಗೆ ಅವಳ ತಂದೆ ಮದುವೆ ಮಾಡಿದರು. ಆತ ಹುಟ್ಟಾ ಕುಡುಕನಾಗಿದ್ದುದರಿಂದ ಅವನೊಡನೆ ಬಾಳಲಾಗದೆ, ತನ್ನ ಮೂರು ಮಕ್ಕಳನ್ನು ಕಟ್ಟಿಕೊಂಡು ದೆಹಲಿಗೆ ಬಂದು ಒಂದು ಮನೆಯಲ್ಲಿ ಮನೆಗೆಲಸಕ್ಕೆ ಸೇರಿಕೊಂಡಳು. ಅಲ್ಲಿ ಯಜಮಾನನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದಾಗ ಅವಳನ್ನು ಮನೆಗೆ ಕರೆದೊಯ್ದು ಆಶ್ರಯ ನೀಡಿದವರು ಪ್ರಸಿದ್ಧ ಹಿಂದಿ ಲೇಖಕ ಪ್ರೇಮ್ಚಂದ್ ಅವರ ಮೊಮ್ಮಗ ಪ್ರೊ.ಪ್ರಭೋದ ಕುಮಾರ್ ಅವರು. ಸಹೃದಯಿಗಳಾದ ಇವರು ತಮ್ಮ ಮನೆಯ ಮೇಲಿನ ಒಂದು ಕೋಣೆಯನ್ನೇ ಬಿಟ್ಟುಕೊಟ್ಟು ಆಶ್ರಯ ನೀಡಿದರು. ಅಲ್ಲಿ ಅವರ ಮನೆಯ ಕಸ ಮುಸುರೆ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಪ್ರೊಫೆಸರ್ ಮನೆಯಲ್ಲಿದ್ದ ಬೆಂಗಾಲಿ ಪುಸ್ತಕಗಳನ್ನು ಕದ್ದು ಓದುವುದನ್ನು ಗಮನಿಸಿದ ಕುಮಾರ್ ಅವಳಿಗೆ ಬಂಗಾಳಿ ಪುಸ್ತಕಗಳನ್ನು ತಂದುಕೊಟ್ಟು ಓದಲು ಪ್ರೋತ್ಸಾಹಿಸಿದರು. ಒಂದು ದಿನ ಪೆನ್ನು ಮತ್ತು ನೋಟ್ಬುಕ್ಕನ್ನು ನೀಡಿ ಅವಳ ಜೀವನದ ಕಥೆಯನ್ನೇ ಬರೆಯಲು ಹುರಿದುಂಬಿಸಿದರು. ಅಂದಿನಿಂದ ಅವಳ ಬದುಕೇ ಅಕ್ಷರಧಾರೆಯಾಗಿ ಆಲೋ ಆಂಧಾರಿ ಒಡಮೂಡಿತು. ಹೀಗೆ ಲೇಖಕಿಯಾಗಿ ಹೊರಹೊಮ್ಮಿದ ಬೇಬಿ ಹಲ್ದರ್ ಪುಸ್ತಕವನ್ನು ಸ್ವತಃ ಪ್ರೊ.ಕುಮಾರ್ ಅವರು ಇಂಗ್ಲಿಷಿಗೆ ಅನುವಾದ ಮಾಡಿದಾಗ ಅದು ಬಹುಬೇಗ ಜನಪ್ರಿಯವಾಯಿತು. ಇದರಿಂದ ಆಕೆ ಈಗ ಬಹುಬೇಡಿಕೆಯ ಲೇಖಕಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಇದೀಗ ತನ್ನ ಎರಡನೆಯ ಕೃತಿ ಇಶಸ್ತ್ ರೂಪಾಂತರ್ ಕೃತಿ ಅವಳ ಜೀವನದ ಸತ್ಯ ಕಥೆಯಾಗಿ ಹೊರಬಂದಿದೆ. ಅದನ್ನೂ ಸಹ ಆಂಗ್ಲ ಭಾಷೆಗೆ ತರ್ಜುಮೆ ಮಾಡಲಾಗುತ್ತಿದೆ. ತನ್ನ ಪುಸ್ತಕ ಮಾರಾಟದಿಂದ ಲಕ್ಷಾಂತರ ರು. ಸಂಪಾದಿಸಿ ಅದರಿಂದ ಕಲ್ಕತ್ತದಲ್ಲಿ ಮನೆಯೊಂದನ್ನು ಕೊಂಡು, ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಂಡರೂ ಸಹ ತನ್ನ ಯಶಸ್ಸಿಗೆ ಕಾರಣರಾದ 80 ವರ್ಷದ ಪ್ರೊಫೆಸರ್ ಮನೆಗೆಲಸವನ್ನು ಇನ್ನೂ ಬಿಟ್ಟಿಲ್ಲ. ಏಕೆಂದರೆ ಅವರ ಈ ವೃದ್ಧಾಪ್ಯದಲ್ಲಿ ಅವರಿಗೆ ನೆರವಾಗಿ ಋಣತೀರಿಸುವಾಸೆ ಹಲ್ದಳದ್ದು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

