ಹೀಗೊಂದು ಪ್ರತಿಭಟನೆ
ಅಮೆರಿಕದಲ್ಲಿ ಗುಲಾಮಗಿರಿಯು ರದ್ದಾದರೂ, ಜನಾಂಗನೀತಿಯನ್ನು ಅನುಸರಿಸುತ್ತಿದ್ದ ಕಾಲವದು. ಕಪ್ಪು ಜನರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದ್ದರು. ವರ್ಣಬೇಧ ನೀತಿಯನ್ನು ಅನುಸರಿಸುತ್ತಿದ್ದ ಆ ಕಾಲದಲ್ಲಿ ಕರಿಯರ ಆಶಾಕಿರಣವಾಗಿ ಮೂಡಿಬಂದವನು ಮಾರ್ಟಿನ್ ಲೂಥರ್ ಕಿಂಗ್. ಬಿಳಿಯರ ದಬ್ಬಾಳಿಕೆಯನ್ನು ವಿರೋಧಿಸಿ, ಕರಿಯರನ್ನು ಸಂಘಟಿಸಿದ್ದು ಈತನೇ. ಅಮೆರಿಕದ ಪ್ರಸಿದ್ಧ ವಾಗ್ಮಿಗಳಲ್ಲಿ ಒಬ್ಬನಾಗಿದ್ದ ಕಿಂಗ್ ಕರಿಯರನ್ನು ಸಂಘಟಿಸಿ ಹೋರಾಟಮಾಡಿದ್ದು ಒಂದು ದೊಡ್ಡ ಸಾಧನೆಯಾಗಿದೆ. ಸಾರ್ವಜನಿಕ ಸಾರಿಗೆಯಾದ ಬಸ್ನಲ್ಲಿ ಬಿಳಿಯರು ಹತ್ತಿದರೆ, ಕರಿಯರು ಎದ್ದು ಅವರಿಗೆ ಸೀಟು ಬಿಟ್ಟುಕೊಡಬೇಕಾಗಿತ್ತು. ಇಲ್ಲದಿದ್ದರೆ ಅವರನ್ನು ಎಳೆದುಹಾಕಿ ಅವಮಾನಿಸಲಾಗುತ್ತಿತ್ತು. ಒಮ್ಮೆ ತಮಗೆ ಬಸ್ಸಿನಲ್ಲಾದ ಅವಮಾನಕ್ಕೆ ಪ್ರತೀಕಾರಕ್ಕೆ ಕರಿಯ ಜನಾಂಗದವರು ಒಂದು ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಂಡರು. ಅದೆಂದರೆ ಬಸ್ ಪ್ರಯಾಣವನ್ನೇ ಬಹಿಷ್ಕರಿಸಿದ್ದು. ಇದರಿಂದ ಯಾವತ್ತೂ ಕಪ್ಪುಜನರಿಂದ ತುಂಬಿರುತ್ತಿದ್ದ ಬಸ್ಗಳು ಖಾಲಿಯಾಗಿ ಓಡಲು ಪ್ರಾರಂಭಿಸಿದವು. ಕರಿಯರು ನಡೆದೋ, ಗಾಡಿಯಲ್ಲಿ ಕುಳಿತೋ ಅಥವಾ ಸ್ವಂತ ಕಾರಿನಲ್ಲಿ ಕುಳಿತೋ ಪಯಣಿಸಲು ಪ್ರಾರಂಭಿಸಿದರು. ಟ್ಯಾಕ್ಸಿ ಓಡಿಸುತ್ತಿದ್ದ ಕರಿಯರು ಅತಿ ಕಡಿಮೆ ದರಕ್ಕೆ ತಮ್ಮ ಕಾರುಗಳನ್ನು ಓಡಿಸಿ, ಇತರ ತಮ್ಮ ಜನಾಂಗದವರಿಗೆ ನೆರವಾಗುತ್ತಿದ್ದರು. ಇದರಿಂದ ಬಸ್ ಮಾಲೀಕರಿಗೆ ನಷ್ಟ ಉಂಟಾಗುತ್ತಿತ್ತು. ಮಾರ್ಟಿನ್ ಲೂಥರನ ಈ ಶಾಂತಿಯುತ ಹೋರಾಟ ವಿಶ್ವದ ಗಮನ ಸೆಳೆಯಿತಲ್ಲದೆ, ಬಿಳಿಯ ಪ್ರತ್ಯೇಕವಾದಿಗಳ ಬಗ್ಗೆ ಜಿಗುಪ್ಸೆ ತಾಳಲು ಕಾರಣವಾಯಿತು. ಇದರಿಂದ ಕೆರಳಿದ ಬಿಳಿಯರ ಸರ್ಕಾರ ಕಾರುಗಳನ್ನು ಕಡಿಮೆ ದರಕ್ಕೆ ಓಡಿಸುವುದನ್ನು ನಿಷೇಧಿಸಿದರು. ವಾಹನ ಚಾಲಕರನ್ನು ವಿನಾಕಾರಣ ತಡೆದು ದೌರ್ಜನ್ಯ ಮಾಡತೊಡಗಿದರು. ಮಾರ್ಟಿನ್ ಲೂಥರನನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು. ಆದರೆ ನ್ಯಾಯಾಲಯದಲ್ಲಿ ಬಿಳಿಯರ ಪ್ರಾಂತೀಯ ಕಾನೂನು ಅಸಿಂಧುವೆಂದು ಘೋಷಿಸಲಾಯಿತು. ಮಾರ್ಟಿನ್ನನ ಕರೆಯಂತೆ 1963ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಉಗ್ರರೂಪ ತಳೆಯಿತು. ಆ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ನೀರಿನ ಕೊಳವೆಗಳು ಮತ್ತು ನಾಯಿಗಳನ್ನು ಬಿಟ್ಟು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಜನರನ್ನು ಹಿಂಸಿಸಿದರು. ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ವಿಶ್ವಕ್ಕೆ ಗೊತ್ತಾಗುವಂತೆ ಮಾಡಿದಾಗ ಪ್ರತ್ಯೇಕವಾದಿಗಳ ದುಷ್ಕೃತ್ಯವನ್ನು ಇಡೀ ವಿಶ್ವ ಖಂಡಿಸಿತು. 1964 ರಲ್ಲಿ ಕಿಂಗ್ಗೆ ನೊಬೆಲ್ ಶಾಂತಿ ಪಾರಿತೋಷಕ ದೊರೆಯಿತು. ನಂತರ ಕಿಂಗ್ ಸೆಲ್ಮಾ ನಗರವನ್ನು ಆರಿಸಿಕೊಂಡು ಅಲ್ಲಿನ ಜನರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಪ್ರತಿಭಟನೆ ಮಾಡಿದರು. ಇದರಿಂದಾಗಿ ಸೆಲ್ಮಾ ಜನರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
ajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

