ಹಣ ತಂದ ಹೊರತು ಆಗುವುದಿಲ್ಲ
ಹಿಂದೆ ಮೈಸೂರಿನಲ್ಲಿ ಅಣ್ಣಯ್ಯ ಪಂಡಿತರೆಂಬ ಶ್ರೀಮಂತರಿದ್ದರು. ಅವರು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದು, ಲೇವಾದೇವಿ ವ್ಯವಹಾರವನ್ನೂ ಮಾಡುತ್ತಿದ್ದರು. ಮಹಾ ದಾನಿಗಳೆಂದು ಹೆಸರು ಪಡೆದಿದ್ದರೂ ಸಹ ಸಾಲ ವಸೂಲಿಯಲ್ಲಿ ಮಾತ್ರ ನಿರ್ದಾಕ್ಷಿಣ್ಯ. ವ್ಯವಹಾರದಲ್ಲಿ ತುಂಬಾ ಕಟ್ಟುನಿಟ್ಟು. ಯಾರಿಗೂ ಅಸಲಿನಲ್ಲಾಗಲೀ, ಬಡ್ಡಿಯಲ್ಲಾಗಲೀ ರಿಯಾಯಿತಿ ತೋರಿದ್ದೇ ಇಲ್ಲ. ಒಮ್ಮೆ ಬ್ರಾಹ್ಮಣನೊಬ್ಬ ಪಂಡಿತರಿಂದ 25 ರುಪಾಯಿಗಳನ್ನು ಸಾಲಪಡೆದಿದ್ದ. ಆಗಿನ ಕಾಲದಲ್ಲಿ ಅಂದರೆ 1900 ರ ವೇಳೆಗೆ ಆ ಹಣಕ್ಕೆ ತುಂಬಾ ಬೆಲೆಯಿತ್ತು. ಕೆಲವು ದಿನಗಳಾದ ನಂತರ ಆ ಬ್ರಾಹ್ಮಣನು ತಾನು ಪಡೆದ ಹಣವನ್ನು ಹಿಂದಿರುಗಿಸಿ, ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಕೇಳಿಕೊಂಡನು. ಆದರೆ ಪಂಡಿತರು ಮಾತ್ರ ಅದಾಗದು ಎಂದು ಪಟ್ಟು ಹಿಡಿದರು. ಬಡ್ಡಿ ಹಣವನ್ನು ಬಿಟ್ಟರೆ ಅದನ್ನು ಮಗನ ಉಪನಯನಕ್ಕೆ ಉಪಯೋಗಿಸಬಹುದೆಂದು ಹೀಗೆ ಕೇಳುತ್ತಿದ್ದೇನೆ ಎಂದು ಅಂಗಲಾಚಿದರೂ, ಹಣ ತಂದ ಹೊರತು ಆಗುವುದಿಲ್ಲ ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು. ಕೊನೆಗೆ ಆ ಬ್ರಾಹ್ಮಣ ಅಲ್ಲಿ ಇಲ್ಲಿ ಕಾಡಿಬೇಡಿ ಹಣವನ್ನು ಬಡ್ಡಿ ಸಮೇತ ವಾಪಸ್ಸು ನೀಡಿ, ಹೊರಡಲುದ್ಯುಕ್ತನಾದ. ಆಗ ಪಂಡಿತರು ಬ್ರಾಹ್ಮಣನನ್ನು ತಡೆದು ಒಳಬರುವಂತೆ ತಿಳಿಸಿದರು. ಆ ಬ್ರಾಹ್ಮಣ ಏನು ಎಂಬಂತೆ ಪಂಡಿತರ ಕಡೆ ನೋಡಿದ. ಅವನನ್ನು ಒಳಗೆ ಕರೆದುಕೊಂಡು ಹೋಗಿ ಮಣೆಯ ಮೇಲೆ ಕುಳ್ಳಿರಿಸಿ, ತಾಂಬೂಲದ ಜೊತೆಗೆ ಐವತ್ತು ರುಪಾಯಿಗಳನ್ನಿಟ್ಟು ನಮಸ್ಕರಿಸಿದರು. ಅದನ್ನು ಅವರ ಮಗನ ಉಪನಯನಕ್ಕಾಗಿ ತಮ್ಮ ಕಾಣಿಕೆಯಾಗಿ ಉಪಯೋಗಿಸಬೇಕೆಂದು ಕೇಳಿಕೊಂಡರು. ಬ್ರಾಹ್ಮಣನಿಗೆ ಅಚ್ಚರಿಯ ಜೊತೆಗೆ ಪರಮಾನಂದವಾಯಿತು. ಅವನು ಪಂಡಿತರ ಎರಡೂ ಕಾಲುಗಳನ್ನು ಹಿಡಿದುಕೊಂಡು ನಮಸ್ಕರಿಸಿ ತನ್ನ ಕೃತಜ್ಞತೆಯನ್ನು ಅರ್ಪಿಸಿದನು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

