ಗಾಂಧೀಜಿಯ ಪತ್ರ ಹರಿದ ವಿನೋಬಾ
ವಿನೋಬಾಜಿಯವರು ನಮ್ಮ ನಾಡುಕಂಡ ಒಬ್ಬ ಅಪೂರ್ವ ಸಂತ. ಬರಿಗಾಲಲ್ಲಿ ದೇಶಾದ್ಯಂತ ಸುತ್ತಿ ಭೂದಾನ ಚಳವಳಿಯನ್ನು ಯಶಸ್ವಿಯಾಗಿ ಮಾಡಿದ ಒಬ್ಬ ಸಾಧಕ. ಅವರು ಪೌನಾರ್ ಆಶ್ರಮವನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡರೂ ಆಗಾಗ್ಗೆ ಗಾಂಧೀಜಿಯವರ ಜೊತೆ ವಾಸಿಸುತ್ತಿದ್ದುದುಂಟು. ಸರಳತೆ ಮತ್ತು ಸಜ್ಜನಿಕೆ ಅವರ ಮುಖ್ಯ ಗುಣಗಳಾಗಿದ್ದವು. ಸರ್ವೋದಯ ಚಳವಳಿಯ ನೇತಾರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ 'ಮ್ಯಾಗ್ಸೆಸೆ' ಪ್ರಶಸ್ತಿ ಮತ್ತು 'ಭಾರತರತ್ನ' ಪ್ರಶಸ್ತಿ ಸಹ ಲಭಸಿದೆ. ವಿನೋಬಾಜಿಯವರ ಬಗ್ಗೆ ಗಾಂಧೀಜಿಯವರಿಗೆ ತುಂಬಾ ಗೌರವವಿತ್ತು. ಏಕೆಂದರೆ ಅವರು ಯಾವುದೇ ಸ್ವಾರ್ಥವಿಲ್ಲದೆ ಲಕ್ಷಾಂತರ ಹೆಕ್ಟೇರಿನಷ್ಟು ಭೂಮಿಯನ್ನು ಭೂಮಾಲೀಕರಿಂದ ಪಡೆದು ಅರ್ಹ ರೈತರಿಗೆ ನೀಡುತ್ತಿದ್ದುದು ಮತ್ತು ಅಹಿಂಸಾತ್ಮಕ ಚಳವಳಿ, ಗೋರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದುದು ಅವರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ವಿನೋಬಾಜಿಯವರ ಕಾರ್ಯವನ್ನು ಮೆಚ್ಚಿ ಒಮ್ಮೆ ಗಾಂಧೀಜಿಯವರು ಪತ್ರವೊಂದನ್ನು ಬರೆದರು. ಅದರಲ್ಲಿ ವಿನೋಬಾರವರ ಸಮಾಜಸೇವಾ ಕಾರ್ಯವನ್ನು ಶ್ಲಾಘಿಸಿ, ವಿನೋಬಾರಿಗಿಂತ ಉತ್ತಮ ಪುರುಷನನ್ನು ತಾನು ಕಂಡಿಲ್ಲವೆಂದು ತಿಳಿಸಿದರು. ಆ ಪತ್ರವನ್ನು ವಿನೋಬಾಜಿಯವರು ಓದಿ ಹೆಮ್ಮೆ ಪಡಲಿಲ್ಲ. ಅದರ ಬದಲಾಗಿ ಓದಿದ ಕೂಡಲೇ ಅದನ್ನು ಚೂರು ಚೂರುಮಾಡಿ ಹರಿದು ಹಾಕಿದರು.
ಅವರ ಬಳಿಯಲ್ಲಿಯೇ ಇದ್ದ ಅವರ ಆತ್ಮೀಯ ಶಿಷ್ಯರಲ್ಲೊಬ್ಬರಾದ ಜಮ್ನಾಲಾಲ್ ಬಜಾಜರ ಪುತ್ರ ಕಮಲನಯನ ಬಜಾಜ್ ಹರಿದ ಕಾಗದಗಳ ಚೂರುಗಳನ್ನು ಸೇರಿಸಿ ಓದಿ, ಸಿಟ್ಟಾದರು. ಪ್ರತಿಯೊಬ್ಬರೂ ಗಾಂಧೀಜಿಯವರು ಗೀಚಿದ ಒಂದು ಸಣ್ಣ ಕಾಗದದ ತುಂಡನ್ನೂ ಜೋಪಾನವಾಗಿ ಇಟ್ಟುಕೊಳ್ಳುವ ಸನ್ನಿವೇಶವಿರುವಾಗ ಕಾಗದವನ್ನು ಹರಿದುಹಾಕುವುದು ಅದೆಷ್ಟು ಸಮಂಜಸ ಎಂದು ಆಕ್ಷೇಪಿಸಿದರು. ಅದಕ್ಕೆ ವಿನೋಬಾ ಹೇಳಿದರು, "ಗಾಂಧೀಜಿ ತನ್ನನ್ನು ಮಹಾಪುರುಷನೆಂದು ಕರೆದು ದೊಡ್ಡ ತಪ್ಪು ಮಾಡಿದ್ದಾರೆ. ಆ ರೀತಿಯ ಹೋಲಿಕೆಯನ್ನು ಮಾಡಿ ಅನೇಕ ಮಹಾಪುರುಷರನ್ನು ಅವಮಾನಿಸಿದ್ದಾರೆ. ಆದ್ದರಿಂದ ಆ ಪತ್ರವನ್ನು ಹರಿದುಹಾಕಿ ಆದ ತಪ್ಪನ್ನು ಸರಿಪಡಿಸಲಾಗಿದೆ".
ಆದರೆ ಬಜಾಜ್ ಅದಕ್ಕೆ ಒಪ್ಪದೆ, ಮಹಾತ್ಮ ಗಾಂಧಿಯವರು ವಿನೋಬಾರ ಯೋಗ್ಯತೆಯನ್ನು ತಿಳಿದೇ ಆ ರೀತಿ ಬರೆದಿರುವುದಾಗಿಯೂ, ಅದು ಆತುರದಿಂದ ಬರೆದುದಲ್ಲವೆಂದೂ ವಾದಿಸಿದರು. ಆಗ ವಿನೋಬಾ "ಒಂದು ವೇಳೆ ಗಾಂಧೀಜಿ ತಪ್ಪುಮಾಡಿಲ್ಲವೆಂದು ಅಂದುಕೊಂಡರೂ, ಆ ಪತ್ರವನ್ನು ಹಾಗೆಯೇ ತಮ್ಮ ಬಳಿ ಇಟ್ಟುಕೊಂಡರೆ ತನ್ನ ಅಹಂ ಹೆಚ್ಚಬಹುದು. ಅದು ತನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಕುತ್ತಾಗಬಹುದು. ಆದ್ದರಿಂದ ಅದನ್ನು ತನ್ನಲ್ಲಿಟ್ಟುಕೊಳ್ಳದೆ ಅದನ್ನು ಹರಿದು ಹಾಕುತ್ತಿರುವುದಾಗಿ" ಹೇಳಿದರು. ಅವರ ವಿವರಣೆ ಕೇಳಿದ ಶಿಷ್ಯನಿಗೆ ತಮ್ಮ ಗುರುಗಳು ಮಾಡಿದ್ದೇ ಸರಿಯೆಂದೆನಿಸಿ, ಕಾಗದವನ್ನು ಸುಟ್ಟು ಹಾಕಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

