ಸಂಪಾದಕೀಯ

ನಾಗಲಿಂಗಸ್ವಾಮಿ ದೇವಾಲಯದಲ್ಲಿ ಬೈಬಲ್ ಪೂಜೆ!

Published On :

ಬೈಬಲ್ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ. ಅದನ್ನು ಪ್ರತಿನಿತ್ಯ ಹಿಂದು ದೇವಾಲಯವೊಂದರಲ್ಲಿ ಪೂಜಿಸುತ್ತಾರೆನ್ನುವುದು ನಂಬಲು ಕಷ್ಟವಾದರೂ ಸತ್ಯ ಸಂಗತಿ. ಧಾರವಾಡದ ನವಲಗುಂದದ ಅಜಾತ ನಾಗಲಿಂಗಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯ ಬೈಬಲ್ಲಿಗೆ ಹೂ ಏರಿಸಿ, ಆರತಿ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ನಾಗಲಿಂಗ ಸ್ವಾಮಿಯೆಂಬ ಯೋಗಿಯ ದೇವಾಲಯವಿದು. ದೇವಾಲಯದ ಪ್ರಮುಖ ವೀರೇಂದ್ರಸ್ವಾಮಿ ಹೇಳುವಂತೆ, 1865ರಲ್ಲಿ ವೆಸ್ಲಿಯನ್ ಮಿಷನರಿ ಸೊಸೈಟಿಯವರು ಮಂಗಳೂರಿನಲ್ಲಿ ಕನ್ನಡದಲ್ಲಿ ಮುದ್ರಿಸಿದ  ಬೈಬಲ್ ಮುಷ್ಟಿಗೇರಿಯ ಕಲ್ಲಪ್ಪನೆಂಬುವರ ಬಳಿ ಇತ್ತು. ದೇವಿ ಆರಾಧಕರಾದ ಕಲ್ಲಪ್ಪನವರು ಅದನ್ನು ತಮ್ಮ ಮನೆಯಲ್ಲಿ ಜೋಪಾನವಾಗಿ ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದರು. ಹತ್ತೊಂಭತ್ತನೇ ಶತಮಾನದಲ್ಲಿ ಜೀವಿಸಿದ್ದ ಪವಾಡಪುರುಷ ನಾಗಲಿಂಗಸ್ವಾಮಿಯವರು ದೇಶಪರ್ಯಟನೆಗೆ ಹೋದಾಗ ಕಲ್ಲಪ್ಪನವರನ್ನು ಭೇಟಿಮಾಡಲು ಅವರ ಬಳಿ ಬಂದರು. ಬೈಬಲ್ ಓದುತ್ತಿದ್ದ ಕಲ್ಲಪ್ಪ ಯೋಗಿಗಳು ತಮ್ಮ ಬಗ್ಗೆ ತಪ್ಪು ತಿಳಿಯಬಾರದೆಂದು ಭಾವಿಸಿ, ಆ ಬೈಬಲ್ಲನ್ನು ನಾಗಲಿಂಗಸ್ವಾಮಿಯವರ ಕಣ್ಣಿಗೆ ಬೀಳದಂತೆ ಮುಚ್ಚಿಟ್ಟರಂತೆ. ಮಾತುಕತೆ ಸಂದರ್ಭದಲ್ಲಿ ಯೋಗಿವರ್ಯರು ಕಲ್ಲಪ್ಪನವರು ಬಚ್ಚಿಟ್ಟ ಬೈಬಲ್ ಪುಸ್ತಕವನ್ನು ತೋರಿಸಲು ಸೂಚಿಸಿದರು. ಅಚ್ಚರಿಗೊಂಡ ಕಲ್ಲಪ್ಪ ಅದನ್ನು ನಾಗಲಿಂಗಸ್ವಾಮಿಯವರಿಗೆ ನೀಡಿದರು. ಅದನ್ನು ಕೈಗೆ ತೆಗೆದುಕೊಂಡು ಅದರ ಮಧ್ಯಭಾಗದಲ್ಲಿ ಒಂದು ರಂಧ್ರ ಕೊರೆದು ಅದರಲ್ಲಿ ಒಂದು ಬೆಳ್ಳಿನಾಣ್ಯವನ್ನು ಹಾಕಿದಾಗ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಾಗವಾಗಿ ತೂರಿಕೊಂಡು ಬಂತು. ಆಗ ನಾಗಲಿಂಗಸ್ವಾಮಿಯವರು, "ಯಾವಾಗ ಬೈಬಲ್ಲಿನ ಆ ರಂಧ್ರ ಮುಚ್ಚಿಕೊಳ್ಳುತ್ತದೋ ಆಗ ತಮ್ಮ ಪುನರ್ಜನ್ಮವಾಗುತ್ತದೆ" ಎಂದು ಹೇಳಿದರಂತೆ. ಹೀಗಾಗಿ ಅದನ್ನು ದೇವಾಲಯದಲ್ಲಿಟ್ಟು ಪ್ರತಿನಿತ್ಯ ಪೂಜೆ ಮಾಡಲಾಗುತ್ತದೆ. ರಂಧ್ರ ತಾನಾಗಿ ಮುಚ್ಚಿಕೊಂಡ ದಿನ ನಾಗಲಿಂಗಸ್ವಾಮಿಯವರ ಮತ್ತೆ ಜನ್ಮತಾಳುತ್ತಾರೆಂಬ ನಂಬಿಕೆಯಿದೆ. ದೇವಾಲಯದವರು ಆ ರಂಧ್ರದ ಸುತ್ತಳತೆಯನ್ನು ಆಗಾಗ್ಗೆ ಅಳತೆ ಮಾಡಿ ದಾಖಲಿಸಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ ಆ ರಂಧ್ರ ಮುಚ್ಚುತ್ತಾ ಬರುತ್ತಿದೆಯಲ್ಲದೆ, ಅಲ್ಲಿ ನಷ್ಟವಾದ ಅಕ್ಷರಗಳೂ ಕಾಣಿಸಿಕೊಳ್ಳುತ್ತಿವೆ! ದೇವಾಲಯಕ್ಕೆ ಭೇಟಿ ನೀಡುವವರು ಅಪೇಕ್ಷಿಸಿದಲ್ಲಿ ಪೂಜೆಯ ಮೊದಲು ಆಡಳಿತವರ್ಗದ ಅನುಮತಿ ಪಡೆದು ಅದನ್ನು ಪರಿಶೀಲಿಸಬಹುದಾಗಿದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.