ಸಂಪಾದಕೀಯ

ಕೊನೆಗೂ ಕಣ್ತೆರೆಸಿದ ಪ್ರಮಾದ

Published On :

1564 ರಿಂದ 1642ರವರೆಗೆ ಜೀವಿಸಿದ್ದ ಗೆಲಿಲಿಯೋ ಪ್ರಸಿದ್ಧ ಗಣಿತಶಾಸ್ತ್ರಜ್ಞ. ವಿಜ್ಞಾನಕ್ಷೇತ್ರಕ್ಕೆ ಅವನ ಕಾಣಿಕೆ ಅಪಾರವಾದುದು. ದೂರದರ್ಶಕ ಯಂತ್ರವನ್ನು ಕಂಡುಹಿಡಿದು ವಿಜ್ಞಾನ ಪ್ರಪಂಚಕ್ಕೆ ಚಿರಪರಿಚಿತರಾಗಿದ್ದಾನೆ. ಗೆಲಿಲಿಯೋ ವೈದ್ಯನಾಗಬೇಕೆಂದು ವ್ಯಾಸಂಗ ಮಾಡುವಾಗ ಒಮ್ಮೆ ಗಣಿತದ ಪ್ರಾಧ್ಯಾಪಕರಾಗಿದ್ದ ಒಸ್ಲಿಯೋ ರಿಕಿ ಅವರನ್ನು ಕಾಣಲು ಹೋದ. ಆಗ ಅವರು ಯೂಕ್ಲಿಡ್ ಗಣಿತವನ್ನು ಬೋಧಿಸುತ್ತಿದ್ದರು. ಗೆಲಿಲಿಯೋ ಮರೆಯಲ್ಲಿ ನಿಂತು ಇಡೀ ಪಾಠವನ್ನು ಕೇಳಿಸಿಕೊಂಡು ಅದರಲ್ಲಿ ಆಸಕ್ತಿ ಪಡೆದುಕೊಂಡರ. ಅದೇರೀತಿ ಪ್ರತಿದಿನವೂ ಹೀಗೆಯೇ ಮರೆಯಲ್ಲಿ ನಿಂತು ಗಣಿತಾಭ್ಯಾಸ ಮಾಡಿದ. ಅಲ್ಲದೆ ಯೂಕ್ಲಿಡ್‌ನ ಪುಸ್ತಕವನ್ನು ತಾನೇ ಓದಿ ಮನನ ಮಾಡಿಕೊಂಡ. ಕೆಲವೊಂದು ಸಮಸ್ಯೆಗಳ ಬಗ್ಗೆ ರಿಕಿ ಅವರೊಡನೆ ಚರ್ಚಿಸಲು ಹೋದಾಗ ಅವರಿಗೇ ಆಶ್ಚರ್ಯವಾಯಿತು. ನಿನಗೆ ಗಣಿತದ ಗುರುಗಳು ಯಾರು ಎಂದು ಪ್ರಶ್ನಿಸಿದಾಗ 'ನೀವೇ' ಎಂದು ಗೆಲಿಲಿಯೋ ಹೇಳಿದಾಗ ಅವರಿಗೆ ನಂಬಲಾಗಲಿಲ್ಲ. ಆಗ ಗೆಲಿಲಿಯೋ ತಾನು ಮರೆಯಲ್ಲಿ ನಿಂತು ಹೇಗೆ ಗಣಿತವನ್ನು ಕಲಿತೆ ಎಂಬುದನ್ನು ವಿವರಿಸಿದ. ದೂರದರ್ಶಕ ಯಂತ್ರವನ್ನು ಕಂಡುಹಿಡಿದು ವೆನಿಸ್‌ನ ಸೆಂಟ್ ಮಾರ್ಕ್ಸ್ ಚೌಕದಲ್ಲಿ ಪ್ರದರ್ಶಿಸಿದಾಗ ವೆನಿಸ್ ಸರ್ಕಾರದಿಂದ ಗೆಲಿಲಿಯೋಗೆ ಗೌರವ ಮತ್ತು ಧನಸಹಾಯ ಅಪಾರವಾಗಿ ದೊರಕಿತು. ಇಂಥ ಗೆಲಿಲಿಯೋ ಖಗೋಳ ಶಾಸ್ತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾನೆ. ಸೌರವ್ಯೂಹದಲ್ಲಿ ಸೂರ್ಯನೇ ಕೇಂದ್ರ ಬಿಂದುವೆಂದೂ ಉಳಿದ ಗ್ರಹಗಳು ಅವನ ಸುತ್ತ ಸುತ್ತುತ್ತವೆ ಎಂದು ಪ್ರತಿಪಾದಿಸಿದನು.
ಅದಕ್ಕೆ ಪೂರಕವಾಗಿ ಕೆಲವು  ಗ್ರಂಥಗಳನ್ನು ರಚಿಸಿದ. ಇದು ಚರ್ಚಿನವರ ಕೆಂಗಣ್ಣಿಗೆ ಗುರಿಯಾಯಿತು. ಹಾಗೆ ಸಮರ್ಥಿಸಬಾರದೆಂದು ಅವನಿಗೆ ತಾಕೀತು ಮಾಡಲಾಯಿತು. ಅವನ ಡಿಯಲಾಗ್ ಗ್ರಂಥ ಬಿಡುಗಡೆಯಾಗುವ ಹೊತ್ತಿಗೆ ಶೈನರ್ ರೋಸಾ ಉರ್ಸಾನಾ ಎಂಬ ಗ್ರಂಥವನ್ನು ಬಿಡುಗಡೆಗೊಳಿಸಿದನು. ಅದರಲ್ಲಿ ಗೆಲಿಲಿಯೋ ಬಗ್ಗೆ ನೇರವಾಗಿಯೇ ದೋಷಾರೋಪಣೆ ಮಾಡಲಾಗಿತ್ತು.
ಅದನ್ನು ಚರ್ಚಿನ ಗಮನಕ್ಕೆ ತಂದಾಗ ಅವನಿಗೆ ರೋಂಗೆ ವಿಚಾರಣೆಗಾಗಿ ಬರುವಂತೆ ನಿರೂಪ ಕಳುಹಿಸಲಾಯಿತು. ತನಗೆ ಇಷ್ಟವಿಲ್ಲದಿದ್ದರೂ ಗೆಲಿಲಿಯೋ ತಪ್ಪೊಪ್ಪಿಗೆ ಪತ್ರವನ್ನು ಬರೆದುಕೊಟ್ಟ. ಆದರೂ ವಿಚಾರಣೆಯ ನಾಟಕವಾಡಿ ಅವನನ್ನು ಸೆರೆಮನೆಗೆ ಕಳುಹಿಸಲಾಯಿತು. ಗೆಲಿಲಿಯೋ 1642 ರಲ್ಲಿ ತೀರಿಹೋದಾಗ ಅವನು ಅಪಾದನೆಯನ್ನು ಹೊತ್ತು ಸತ್ತವನೆಂದು ಅವನಿಗೆ ಸಲ್ಲುವ ಯಾವ ಮರ್ಯಾದೆಯನ್ನೂ ಚರ್ಚ್ ನೀಡಲಿಲ್ಲ. ಅವನ ಬಂಧು ಮಿತ್ರರು ಸೇರಿ ತೀರಾ ಸರಳವಾಗಿ ಅವನ ಅಂತ್ಯ ಸಂಸ್ಕಾರ ಮಾಡಿದರು. ಆದರೆ ಇನ್ನೂರು ವರ್ಷಗಳ ನಂತರ 1835 ರಲ್ಲಿ ಚರ್ಚ್‌ಗೆ ತನ್ನ ತಪ್ಪಿನ ಅರಿವು ಉಂಟಾಗಿ, 1835 ರಲ್ಲಿ ಅವನ ಕೃತಿಗಳಿಗಿದ್ದ ನಿಷೇಧವನ್ನು ತೆಗೆದು ಹಾಕಿತು.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.