ಸಂಪಾದಕೀಯ

ಇದು ಬರಲಿರುವ ಒಳ್ಳೆಯ ದಿನಗಳ ಸಂಕೇತ

Published On :

ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹಣಸಂಗ್ರಹಿಸುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅವರು ಸಂಗ್ರಹಿಸುತ್ತಿದ್ದ ರೀತಿ ಮಾತ್ರ ಒಂದೇ ರೀತಿಯಲ್ಲಿರುತ್ತಿರಲಿಲ್ಲ. ಒಮ್ಮೆ ಅವರು 'ತಿಲಕ್ ಸ್ವರಾಜ್ಯ' ನಿಧಿಗೆ ಒಂದು ಕೋಟಿ ರುಪಾಯಿಗಳನ್ನು ಕೇವಲ ಮೂರು ತಿಂಗಳಲ್ಲಿ ಸಂಗ್ರಹಿಸಬೇಕೆಂದು ನಿರ್ಧರಿಸಿದರು. ಅವರ ಪ್ರಕಾರ ಸಾರ್ವಜನಿಕ ಉದ್ದೇಶಗಳಿಗೆ ಸಾವಿರಾರು ಮಂದಿ ಶ್ರೀಮಂತರಿಗೆ ಸ್ವಾಗತವಿದ್ದರೂ, ಬಡಜನರ ತಾಮ್ರದ ನಾಣ್ಯಗಳು ಮತ್ತು ಒಂದೊಂದೇ ರುಪಾಯಿ ಅವರ ಉದ್ದೇಶಕ್ಕೆ ಅನುಗ್ರಹಕಾರಕವಾಗಿದ್ದವು. ಉದ್ದೇಶವನ್ನು ತಿಳಿದುಕೊಂಡು ಕೊಡಲಾಗುವ ಒಂದೊಂದು ತಾಮ್ರದ ನಾಣ್ಯವೂ, ಅದನ್ನು ಕೊಡುವವರ, ಸ್ವರಾಜ್ಯವನ್ನು ಸ್ಥಾಪಿಸುವ ದೃಢನಿಶ್ಚಯದ ಚಿನ್ಹೆಯಾಗಿರುತ್ತದೆ ಎಂದವರು ಹೇಳುತ್ತಿದ್ದರು. ಆದ್ದರಿಂದ ಸಾಮಾನ್ಯ ಜನರ ದೇಣಿಗೆಗೆ ಅವರು ಹೆಚ್ಚು ಮಹತ್ವವನ್ನು ನೀಡಿದ್ದರು. ಕೆಲವರಂತೂ ತಾವು ಕೈಯಾರೆ ನೂತ ನೂಲು, ನೇಯ್ದ ಖಾದಿ ಬಟ್ಟೆಯನ್ನೂ, ತರಕಾರಿಯನ್ನೂ, ಕೆಲದಿನ ತುಪ್ಪ ಹಾಲು ಬಳಕೆಯನ್ನು ಮಾಡದೆ ಉಳಿಸಿದ ಹಣವನ್ನು ತಂದುಕೊಡುತ್ತಿದ್ದರು. ಒಮ್ಮೆ ಒಬ್ಬ ವಿಧವೆ ಎರಡು ಆಣೆಯನ್ನು (ಈಗಿನ ಹನ್ನೆರಡು ಪೈಸೆ) ಬೇಡಿ ತಂದು ಗಾಂಧೀಜಿಗೆ ನೀಡಿದಳು. ಯಾಕೆ ಎರಡು ಆಣೆಗಳನ್ನು ಮಾತ್ರ ಕೊಟ್ಟೆ ಎಂದು ಅವಳನ್ನು ಕೇಳಿದಾಗ, "ಉದ್ದೇಶಕ್ಕಾಗಿ ಸಹಾಯವಾಗಲಿ ಎಂದು ನಾನು ಕೊಡಲಿಲ್ಲ. ಬದಲಿಗೆ, ಎಲ್ಲವನ್ನೂ ತ್ಯಜಿಸಿರುವ ಮಹಾತ್ಮನಿಗೆ ದಾನ ಮಾಡಬೇಕೆಂಬ ನನ್ನ ಜೀವನದ ಕನಸನ್ನು ಸಾರ್ಥಕ ಮಾಡಿಕೊಳ್ಳಲು ಕೊಟ್ಟೆ" ಎಂದವಳು ಉತ್ತರಿಸಿದಳು. ಹೀಗೆ ಜನಸಾಗರವೇ ಅವರ ಬಳಿ ಹರಿದು ಬಂದು ತಮ್ಮ ಕಾಣಿಕೆಯನ್ನು ಅರ್ಪಿಸುವುದರಲ್ಲಿ ಪೈಪೋಟಿ ನಡೆಸುತ್ತಿತ್ತೆಂದರೆ ಅವರ ಮಾತಿಗೆಷ್ಟು ಬೆಲೆಯಿರುತ್ತಿತ್ತು ಎಂದು ತಿಳಿದು ಬರುತ್ತದೆ. ತಾಮ್ರದ ನಾಣ್ಯಗಳನ್ನು ಎಣಿಸಿದ ಒಬ್ಬ ಸ್ವಯಂ ಸೇವಕನ ಅಂಗೈನಲ್ಲಿ ಗುಳ್ಳೆಗಳೆದ್ದು ಹಸಿರು ಕಲೆಗಳಾಗಿದ್ದವು! ಅದನ್ನು ನೋಡಿ ಗಾಂಧೀಜಿ ಹೇಳಿದರು, "ಇದೊಂದು ಅನುಗ್ರಹದ ಕೊಡುಗೆ. ನಮಗೆ ಇದು ನಿಷ್ಠೆ, ಆದರೆ ಅವರಿಗೆ ಹತಾಶೆ ಮುಸುಕಿರುವ  ವಿಶ್ವದಲ್ಲಿ ಒಂದು ಆಸೆಯ ಕಿರಣ. ಬರಲಿರುವ ಒಳ್ಳೆಯ ದಿನಗಳ ಬಗ್ಗೆ ಅವರಿಗೊಂದು ಸಂಕೇತ." ಗಾಂಧೀಜಿ ಹೀಗೆ ಸಂಗ್ರಹಿಸಿದ ಎಲ್ಲಾ ಉಡುಗೊರೆಗಳಿಗೆ, ಹಣಕ್ಕೆ ರಸೀದಿಗಳನ್ನು ನೀಡುತ್ತಿದ್ದರು. ಎಲ್ಲ ವೆಚ್ಚಗಳಿಗೂ ಲೆಕ್ಕವಿವರಗಳನ್ನು ಒಪ್ಪಿಸಿದರು. ದಾನಿಗಳ ಭಾವನೆಗಳನ್ನು ಗೌರವಿಸಿದರು. ದೇಣಿಗೆಯಾಗಿ ಬಂದ ಹಣದ ಒಂದು ಕಿಲುಬುಕಾಸನ್ನೂ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಿಲ್ಲ.  ಸಾರ್ವಜನಿಕರ ಹಣವನ್ನು ಖರ್ಚುಮಾಡುವಾಗ ತುಂಬಾ ಎಚ್ಚರಿಕೆ ವಹಿಸುತ್ತಿದ್ದರು. ಹೀಗಾಗಿ ಕೆಲವೇ ದಿನಗಳಲ್ಲಿ ಒಂದು ಕೋಟಿಗೂ ಮೀರಿ ಹಣ ಸಂಗ್ರಹಿಸಲು ಸಾಧ್ಯವಾಯಿತು. ಸಾರ್ವಜನಿಕರ ಹಣವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕೆಂಬ ವಿಷಯದಲ್ಲಿ ಎಲ್ಲರೂ ಗಾಂಧೀಜಿಯವರ ಮಾರ್ಗವನ್ನನುಸರಿಸಬೇಕೆಂದು ರವೀಂದ್ರನಾಥ ಠಾಕೂರರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದುದುಂಟು.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.