ಸಂಪಾದಕೀಯ

ಹೊಗಳಿಕೆ ಒಲ್ಲದ ನಜೀರ್‌ಸಾಬ್

Published On :

ಕರ್ನಾಟಕದ ರಾಜಕೀಯದಲ್ಲಿ ಅಚ್ಚಳಿಯದ ಹೆಸರು ಅಬ್ದುಲ್ ನಜೀರ್ ಸಾಬ್. ಹಳ್ಳಿ ಹಳ್ಳಿಗೆ ಕುಡಿಯುವ ನೀರನ್ನು ಒದಗಿಸಿಕೊಟ್ಟು ನೀರಿನ ಬವಣೆಯನ್ನು ನೀಗಿಸಿದರು. ಹೀಗಾಗಿ ಅವರನ್ನು 'ನೀರ್ ಸಾಬ್‌' ಎಂದೇ ಜನ ಕರೆಯುತ್ತಿದ್ದರು. ಅತ್ಯಂತ ಪ್ರಾಮಾಣಿಕರಾಗಿ ಕರ್ತವ್ಯನಿಷ್ಠೆಯನ್ನು ಮೆರೆದ, ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದ ಅನರ್ಘ್ಯರತ್ನ ಅವರಾಗಿದ್ದರು. ಒಮ್ಮೆ ಉತ್ತರಕರ್ನಾಟಕದ ಒಂದು ಪುಟ್ಟ ಹಳ್ಳಿಯಲ್ಲಿ ಹಾದುಹೋಗುವಾಗ ಎದುರಿನಿಂದ ಹಳ್ಳಿ ಹೆಂಗಸರು ತಲೆಯ ಮೇಲೊಂದು ಕಂಕುಳಲ್ಲೊಂದು ನೀರಿನ ಕೊಡಗಳನ್ನು ಹೊತ್ತು ಬರುತ್ತಿರುವುದು ಕಂಡು ಬಂತು. ಅವರನ್ನು ವಿಚಾರಿಸಿದಾಗ ಅವರು ಮೂರು ಮೈಲು ದೂರದ ಹಳ್ಳಿಯಿಂದ ನೀರಿನ ಕೊಡಗಳನ್ನು ಹೊತ್ತು ತರುತ್ತಿರುವುದಾಗಿ ತಿಳಿಯಿತು. ಅದನ್ನು ಕೇಳಿ ನಜೀರರ ಕಣ್ಣಾಲಿಗಳು ತುಂಬಿ ಬಂದವು. ಆ ಕ್ಷಣವೇ ಆ ಪ್ರದೇಶದ ಇಂಜಿನಿಯರ್‌ಗಳನ್ನು ಕರೆಸಿ ಮೂರು ದಿನಗಳಲ್ಲಿ ಆ ಹಳ್ಳಿಗೆ ಎರಡು ಬಾವಿಗಳನ್ನು ತೋಡಿಸಿಕೊಡುವಂತೆ ಅಪ್ಪಣೆಮಾಡಿದರು. ಮೂರು ದಿನಗಳಲ್ಲಿ ಆ ಹಳ್ಳಿಗೆ ನೀರು ಬಂತು.
ಇಂತಹ ದಕ್ಷ ಸಚಿವರಾಗಿದ್ದ ನಜೀರರು ತ.ಸು.ಶಾಮರಾಯರ ಆಶ್ರಯದಲ್ಲಿ ಅವರ ಶಿಷ್ಯರಾಗಿದ್ದವರು. ಗುರುಗಳ ಮೇಲೆ ಅಪಾರ ಭಕ್ತಿ ಗೌರವ ಅವರಿಗಿತ್ತು. ದಿ.ವೆಂಕಣ್ಣಯ್ಯನವರ ಶತಮಾನೋತ್ಸವ ಸಮಾರಂಭದಲ್ಲಿ ಒಂದು ಕಾರ್ಯಕ್ರಮಕ್ಕೆ ತ.ಸು.ಶಾಮರಾಯರು ಮತ್ತು ನಜೀರರು ವೇದಿಕೆಯನ್ನು ಹಂಚಿಕೊಂಡಿದ್ದರು. ವೆಂಕಣ್ಣಯ್ಯನವರನ್ನು ಕುರಿತು ಮಾತನಾಡುವಾಗ ಶಾಮರಾಯರು ನಜೀರರ ಬಗ್ಗೆಯೂ ಎರಡು ಹೊಗಳಿಕೆಯ ಮಾತುಗಳನ್ನಾಡಿದರು. ನಂತರ ನಜೀರರು ಮಾತನಾಡುವಾಗ "ಪೂಜ್ಯರಾದ ಶಾಮರಾಯರು ನನ್ನನ್ನು ಪ್ರೀತಿಯಿಂದ ಮಗು ಎಂದು ಕರೆಯುತ್ತಿದ್ದರು. ಇಂದು ನನ್ನನ್ನು ಹೊಗಳಿದುದು ಮಾತ್ರವಲ್ಲ, ಬಹುವಚನದಲ್ಲಿ ಸಂಬೋಧಿಸಿದರು.  ಇದು ನನಗೆ ತುಂಬಾ ನೋವನ್ನುಂಟುಮಾಡಿದೆ. ಏಕವಚನದಿಂದಲೇ ಮಾತನಾಡಿದರೆ ನನಗೆ ಅತೀವ ಸಂತೋಷವಾಗುತ್ತದೆ" ಎಂದರು. ತುಂಬಿದ ಸಭೆಯಲ್ಲಿ ಅದೂ ಮಂತ್ರಿಗಳಿಗೆ ಏಕವಚನದಲ್ಲಿ ಕರೆಯುವುದು ಸೂಕ್ತವಾಗದು ಎಂದು ಶಾಮರಾಯರು ಸಮಜಾಯಿಷಿ ಕೊಟ್ಟರೂ ಒಪ್ಪಲಿಲ್ಲ. ಇಂತಹ ನಜೀರರು ತಮ್ಮ ಪ್ರಿಯ ಶಾಮರಾಯರಿಗೆ ಬೆಂಗಳೂರಿನಲ್ಲೊಂದು ನಿವೇಶನವನ್ನು ಸರ್ಕಾರದಿಂದ ಕೊಡಿಸಲು ಮುಂದಾದರು. ಅದಕ್ಕಾಗಿ ಒಂದು ಅರ್ಜಿಯನ್ನು ಬರೆದುಕೊಡಲು ವಿನಂತಿಸಿದರು. ಆದರೆ ಶಾಮರಾಯರದ್ದು ಒಂದೇ ಹಠ. ತಮಗೆ ಬೆಂಗಳೂರಿನಲ್ಲಿ ಸೈಟೇಕೆ? ಮನೆ ಕಟ್ಟಿಸಲು ಹಣ ಎಲ್ಲಿಂದ ತರೋಣ ಎಂದು. ಆಗ ನಜೀರರು "ಮುಂದೆ ಅದಕ್ಕೆ ತುಂಬಾ ಬೆಲೆಬರುತ್ತದೆ. ಮುಂದೆ ಒಳ್ಳೆ ದರಕ್ಕೆ ಮಾರಬಹುದು" ಎಂದು ಸಲಹೆ ನೀಡಿದರು. "ಮಗೂ ಮನೆಕಟ್ಟಿಕೊಳ್ಳಲಾಗುವುದಿಲ್ಲವೆಂದು ಕೊಟ್ಟ ಸೈಟನ್ನು ಮಾರಿಕೊಳ್ಳುವುದು ಯಾವ ನ್ಯಾಯ? ನನಗೆ ಅನ್ಯಾಯದ ಹಣ ಬೇಡ" ಎಂದು ಶಾಮರಾಯರು ನಜೀರರ ಸಲಹೆಯನ್ನು ನಯವಾಗಿಯೇ ತಿರಸ್ಕರಿಸಿದರು. ಕೊನೆಗೆ ಶಾಮರಾಯರ ಮಗ ಛಾಯಾಪತಿಗೆ ಹೇಳಿದರೂ ಪ್ರಯೋಜನವಾಗಲಿಲ್ಲ.



 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.