ಸಂಪಾದಕೀಯ

ಜ್ಞಾನಪೀಠ ಪುರಸ್ಕೃತ ಪನ್ನಾಲಾಲ್ ಪಟೇಲ್

Published On :

ಪನ್ನಾಲಾಲ್ ಪಟೇಲ್ ಗುಜರಾತಿನ ಒಬ್ಬ ಬಹುದೊಡ್ಡ ಲೇಖಕರು. ಗುಜರಾತಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟವರು. ಅವರು ಕಲಿತದ್ದು ಆರನೇ ಇಯತ್ತೆವರೆಗೆ ಮಾತ್ರ. ಆದರೆ ಗಳಿಸಿದ ಅಪಾರ ಅನುಭವ ಅವರನ್ನು ಸಾಹಿತ್ಯಕ್ಷೇತ್ರದತ್ತ ಒಯ್ದಿತು. ಬಾಲ್ಯದಲ್ಲಿಯೇ ಶಾಲೆಬಿಟ್ಟು ಮನೆಯಿಂದ ಓಡಿಹೋಗಿ ಕೆಲವು ವರ್ಷಗಳ ಕಾಲ ಒಬ್ಬ ಸಾಧುವಿನ ಜೊತೆ ಊರೂರು ಅಲೆದರು. ಅವರಿಗೆ ಆಧ್ಯಾತ್ಮದ ಹಸಿವು ಇತ್ತು. ಆದರೆ ಅದು ಸಾಧ್ಯವಾಗದೆ ಅಹಮದಾಬಾದಿಗೆ ಹಿಂದಿರುಗಿದ ಮೇಲೆ ಅವರ ಜೊತೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಗೆಳೆಯನೊಬ್ಬನನ್ನು ಭೇಟಿ ಮಾಡಿ ತಾವು ಪ್ರವಾಸದಲ್ಲಿ ಗಳಿಸಿದ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಅದನ್ನು ಆಸಕ್ತಿಯಿಂದ ಕೇಳಿದ ಗೆಳೆಯ, ಅವರ ಮಾತುಗಾರಿಕೆಗೆ ಮನಸೋತರು. ಇಷ್ಟೊಂದು ಅನುಭವ ಗಳಿಸಿದ್ದೀಯ ಎಷ್ಟು ಸ್ವಾರಸ್ಯಕರವಾಗಿ ವಿವರಿಸುತ್ತೀಯ ನೀನೇಕೆ ಇದನ್ನೆಲ್ಲಾ ಬರೆಯಬಾರದು ಎಂದು ಕೇಳಿದರು. ಅದನ್ನು ಕೇಳಿ ಪನ್ನಾಲಾಲರು ಪುಳಕಗೊಂಡರು. ಹೀಗೆ ಅವರ ಬರವಣಿಗೆಗೆ ಮೂಲ ಪ್ರೇರಕರಾದವರು ಯಾರೂ ಅಲ್ಲ, ಅವರೇ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು ಅವರೊಂದಿಗೆ ಹಂಚಿಕೊಂಡ ಗುಜರಾತಿನ ಪ್ರಸಿದ್ಧ ಕವಿ, ಉಮಾಶಂಕರ ಜೋಷಿ. ತನ್ನ ಗೆಳಯನ ಮಾತು  ಕೇಳಿದ ಪಟೇಲ್, ಹೌದಲ್ಲಾ, ಏಕೆ ಬರೆಯಬಾರದು? ಎಂದು ಯೋಚಿಸಿ, ಗೆಳೆಯನ ಸಲಹೆಯಂತೆ ಬರೆದೇ ಬರೆದರು. ಆಗ ಅವರಿಗಿನ್ನೂ ಇಪ್ಪತ್ತರ ಹರೆಯ. ಆದರೆ ಯಾವ ಪತ್ರಿಕೆಯವರೂ ಅವರು ಬರೆದುದನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಆದರೂ ಬರೆಯುವ ಕಾಯಕವನ್ನು ಮಾತ್ರ ಬಿಡಲಿಲ್ಲ ಪನ್ನಾಲಾಲ್. ಕೊನೆಗೂ ಅವರ ಒಂದು ಪುಟ್ಟ ಕಥೆ "ಯಾರಿವನು" ಒಂದು ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟವಾದಾಗ ಪಟೇಲರಿಗೆ ತುಂಬಾ ಸಂತೋಷವಾಯಿತು. ಅದನ್ನೋದಿದ ಓದುಗರು ಅಪಾರವಾಗಿ ಮೆಚ್ಚಿದರು. ವಿಮರ್ಶಕರು ಬೆರಗಾದರು. ಅಲ್ಲಿಂದ ಅವರು ಕೊನೆಯವರೆಗೆ ಬರೆದ ಕೃತಿಗಳು ಗುಜರಾತ್‌ನ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಹುಟ್ಟಿಹಾಕಿದವು. ಪ್ರಾರಂಭದಲ್ಲಿ ನಾಲ್ಕೈದು ವರ್ಷ ಸಣ್ಣ ಕಥೆಗಳನ್ನೇ ಬರೆದು ಪ್ರಸಿದ್ಧರಾದ ಮೇಲೆ, ಬರೆದ ಮೊದಲ ಕಾದಂಬರಿ "ಮಳೇಲಾ ಜೀವ" ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಟ್ಟಿತು. ನಂತರ ಪ್ರಕಟವಾದ ಮೂವತ್ತು ಕಾದಂಬರಿಗಳು, ಇಪ್ಪತ್ತೇಳು ಕಥಾ ಸಂಕಲನಗಳು, ಐದು ನಾಟಕಗಳು, ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟವು. 1985 ರಲ್ಲಿ "ಮಾನವೇನಿ ಭವಾಯಿ" (ಜೀವನ  ಒಂದು ನಾಟಕ) ಕೃತಿಗೆ ಜ್ಞಾನಪೀಠ ಪ್ರಶಸ್ತಿಯೂ ದೊರಕಿತು. ಅವರ ಕೆಲವು ಕೃತಿಗಳು ಕನ್ನಡಕ್ಕೂ ಅನುವಾದಗೊಂಡಿವೆ. ಓದಿದ್ದು ಅಲ್ಪವಾದರೂ ಗಳಿಸಿದ ಅಪಾರ ಅನುಭವ ಪನ್ನಾಲಾಲ್ ಪಟೇಲರನ್ನು ಒಬ್ಬ ಪ್ರಸಿದ್ಧ ಸಾಹಿತಿಯನ್ನಾಗಿ ಮಾಡಿದ್ದು ಒಂದು ಅಪರೂಪದ ಸಂಗತಿಯಾಗಿದೆ

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.