ತಂದೆಗಾಗಿ ಚಿನ್ನದ ಪದಕ ಗೆದ್ದು ತಂದ
ಕೆಲವೊಮ್ಮೆ ಎದುರಾಗುವ ಅನಿವಾರ್ಯ ಕಾರಣಗಳು ಹೇಗೆ ಅವಕಾಶ ವಂಚಿತರನ್ನಾಗಿ ಮಾಡುತ್ತವೆ ಎನ್ನುವುದಕ್ಕೆ ಇಲ್ಲೊಂದು ಜೀವಂತ ನಿದರ್ಶನವಿದೆ. ಅಮೆರಿಕದ ಪ್ರಸಿದ್ಧ ದೋಣಿ ಚಾಲಕ ವಿಲಿಯಂ ಡಾಡ್ಜ್ ಹೆವೆನ್ಸ್ ದೋಣಿ ಚಾಲನೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ಆಟಗಾರನಾಗಿದ್ದ. 1924ರ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಅದೇ ಮೊದಲ ಬಾರಿಗೆ ದೋಣಿಚಾಲನಾ ಸ್ಪರ್ಧೆಯನ್ನು ಸೇರಿಸಲಾಗಿತ್ತು. ಈ ಸ್ಪರ್ಧೆಗೆ ವಿಶ್ವದ ಕೆಲವು ದೇಶಗಳು ಭಾಗಹಿಸಿದ್ದರೂ ಅಮೆರಿಕದ ತಂಡ ಗೆಲ್ಲುವುದೆಂದು ಎಲ್ಲರೂ ತಿಳಿದಿದ್ದರು. ಈ ನಾಲ್ಕು ಜನರ ತಂಡದ ಸದಸ್ಯರಲ್ಲಿ ಒಬ್ಬನಾಗಿದ್ದವನು ವಿಲಿಯಂ ಹೆವೆನ್ಸ್. ಅವನು ಆಗಲೇ ಉತ್ತಮ ದೋಣಿ ಚಾಲನಾ ಪಟುವೆಂದು ಹೆಸರು ಪಡೆದಿದ್ದ. ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದ. ಆದ್ದರಿಂದ ಸಹಜವಾಗಿಯೇ ಆ ಒಲಿಂಪಿಕ್ಸ್ ಸ್ಪರ್ಧೆಗೆ ತನ್ನ ತಂಡದೊಡನೆ ಭಾಗವಹಿಸಲು ಅವನಿಗೆ ಅವಕಾಶವೂ ದೊರೆತಿತ್ತು. ಆದರೆ ಅದೇ ಸಮಯಕ್ಕೆ ಆತನ ಪತ್ನಿ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಳು. ಆಗ ಪ್ಯಾರಿಸ್ಗೆ ಹೋಗಿಬರಲು ತಿಂಗಳುಗಟ್ಟಲೆ ಹಡಗಿನಲ್ಲಿ ಪ್ರಯಾಣಿಸಬೇಕಾಗಿದ್ದುದರಿಂದ ತನ್ನ ಪತ್ನಿಯನ್ನು ಏಕಾಂಗಿಯಾಗಿ ಬಿಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿಲು ಬಂದ ಅವಕಾಶವನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು. ನಿರೀಕ್ಷೆಯಂತೆ ಆ ವರ್ಷ ಅವನ ತಂಡದವರು ಪ್ಯಾರಿಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನೂ ಗೆದ್ದರು. ಹೀಗೆ ಕೈಗೆ ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳದೆ ವಿಲಿಯಂ ಪದಕವಂಚಿತನಾದ. ಕಾಕತಾಳೀಯವೆಂಬಂತೆ ಅವನ ಮಗ ಫ್ರ್ಯಾಂಕ್ ಹೆವೆನ್ಸ್ ಸಹ ದೋಣಿಚಾಲನೆಯಲ್ಲಿ ಆಸಕ್ತಿ ಬೆಳೆಸಿಕೊಂಡ. ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿ, ಕೊನೆಗೆ 1952 ರಲ್ಲಿ ಫಿನ್ಲೆಂಡಿನ ಹೆಲ್ಸಿಂಕಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ. ದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕವನ್ನೂ ಪಡೆದ. ಹತ್ತು ಸಾವಿರ ಮೀಟರ್ ದೂರವನ್ನು ಕೇವಲ 57 ನಿಮಿಷ, 41 ಸೆಕೆಂಡುಗಳಲ್ಲಿ ಕ್ರಮಿಸಿ ವಿಶ್ವದಾಖಲೆಯನ್ನು ಸ್ಥಾಪಿಸಿದ. ಅದಕ್ಕಾಗಿ ಅವನು ಬಾಡಿಗೆ ದೋಣಿಯನ್ನು ಪಡೆದಿದ್ದ. ಗೆದ್ದನಂತರ ಆ ದೋಣಿಯನ್ನು ವಾಪಸ್ಸು ನೀಡಲು ಹೋದಾಗ ಆ ದೋಣಿಯ ಮಾಲೀಕ ಪ್ರೀತಿಯಿಂದ ಆ ದೋಣಿಯನ್ನು ಫ್ರ್ಯಾಂಕ್ನಿಗೇ ಸಮರ್ಪಿಸಿದ. ಅಲ್ಲಿಂದಲೇ ತನ್ನಪ್ಪನಿಗೆ ತಂತಿ ಸಂದೇಶವೊಂದನ್ನು ಕಳಿಸಿ, ತಾನು ಚಿನ್ನದ ಪದಕ ಗೆದ್ದಿರುವುದಾಗಿಯೂ, 1924ರಲ್ಲಿ ತಾನು ಹುಟ್ಟುವುದಕ್ಕಾಗಿ ಕಾಯುತ್ತಾ ಕುಳಿತು ಕಳೆದುಕೊಂಡ ಚಿನ್ನವನ್ನು ತಾನು ಗೆದ್ದು ತಂದಿರುವುದಾಗಿಯೂ ತಿಳಿಸಿದ. ಹೀಗೆ ತನಗಾಗಿ ಕಳೆದುಕೊಂಡ ಚಿನ್ನದ ಪದಕವನ್ನು ಗೆದ್ದು ತಂದು ತಂದೆಗೆ ಅರ್ಪಿಸಿದ ಅಪೂರ್ವ ಸಾಧಕ ಫ್ರ್ಯಾಂಕ್ ಹೆವೆನ್ಸ್.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

