ಸಂಪಾದಕೀಯ

ಡಾ. ಜಾಕೀರ್ ಹುಸೇನ್ರ ದೃಷ್ಟಿಯಲ್ಲಿ ಜಾತ್ಯತೀತತೆ

ಡಾ. ಜಾಕೀರ್ ಹುಸೇನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಷ್ಟ್ರೀಯವಾದಿಯಾಗಿ, ಹಿರಿಯ ಮುತ್ಸದ್ದಿಯಾಗಿ ಹೆಸರು ....

Published On :

ಡಾ. ಜಾಕೀರ್ ಹುಸೇನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಷ್ಟ್ರೀಯವಾದಿಯಾಗಿ, ಹಿರಿಯ ಮುತ್ಸದ್ದಿಯಾಗಿ ಹೆಸರು ಮಾಡಿದವರು. ವಿದ್ವಾಂಸರಾಗಿದ್ದ ಅವರು ಪ್ರಜಾಪ್ರಭುತ್ವ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಎಲ್ಲರಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಬೇಕೆಂದು ಪ್ರತಿಪಾದಿಸಿದವರು ಅವರು. ನಂತರ ಬಿಹಾರದ ರಾಜ್ಯಪಾಲರಾಗಿ, ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸಹ ಸಂಸ್ಥಾಪಕರಾಗಿ, ಅದರ ಉಪಕುಲಪತಿಗಳಾಗಿ ಅಮೋಘ ಸೇವೆಯನ್ನು ಸಲ್ಲಿಸಿದ್ದಾರೆ. ಬರ್ಲಿನ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಪಡೆದ ಹುಸೇನರು ಭಾರತರತ್ನ ಪ್ರಶಸ್ತಿ ಗೌರವವನ್ನೂ ಪಡೆದಿದ್ದಾರೆ. ಅವರು ಭಾರತದ ಪ್ರಥಮ ಮುಸ್ಲಿಂ ರಾಷ್ಟ್ರಪತಿಯಾಗಿ ಚುನಾಯಿತರಾದಾಗ ನಡೆದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಪತ್ರಿಕಾಮಿತ್ರರೆಲ್ಲ ತುಂಬ ಪ್ರೀತಿಯಿಂದ ಅವರನ್ನು ಅಭಿನಂದಿಸಿದರು. ಭಾಗವಹಿಸಿದ್ದ ಪತ್ರಕರ್ತರೊಬ್ಬರು ಜಾಕೀರರನ್ನು ಅಭಿನಂದಿಸಿ ಮಾತನಾಡುತ್ತಾ, ಇದು ಜಾತ್ಯತೀತತೆಯ ಗೆಲುವು ಎಂದು ಬಣ್ಣಿಸಿದರು. ಅದಕ್ಕೆ ಅಚ್ಚರಿಗೊಂಡ ಜಾಕೀರರು ತಾವು ರಾಷ್ಟ್ರಾಧ್ಯಕ್ಷರಾದುದು ಹೇಗೆ ಜಾತ್ಯತೀತ ತತ್ವಗಳ ಗೆಲುವಾಗುತ್ತದೆ ಎಂದು ಮರು ಪ್ರಶ್ನಿಸಿದರು. ಅದಕ್ಕೆ ಆ ಪರ್ತಕರ್ತ ಹೇಳಿದ, "ಭಾರತದಂತಹ ದೇಶದಲ್ಲಿ ಮುಸ್ಲಿಮರೊಬ್ಬರು ದೇಶದ ಅತ್ಯುನ್ನತ ಪದವಿಯನ್ನೇರಿರುವುದು, ಅದೂ ಮೊದಲ ಬಾರಿಗೆ! ಇದು ಜಾತ್ಯತೀತತೆಯ ಗೆಲುವಲ್ಲದೆ ಮತ್ತೇನು?'
ಆತನ ಮಾತು ಜಾಕೀರರಿಗೆ ಹಿಡಿಸಲಿಲ್ಲ. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು ಪತ್ರಕರ್ತರ ಅಭಿಪ್ರಾಯವನ್ನು ಒಪ್ಪಲಾಗುವುದಿಲ್ಲವೆಂದು ನುಡಿದರು. ಅಚ್ಚರಿಗೊಂಡ ಪತ್ರಕರ್ತ ಅದೇಕೆ ಹಾಗೆ ಹೇಳುತ್ತೀರಿ ಎಂದು ಕೇಳಿದಾಗ ಜಾಕೀರರು, "ನನ್ನ ಧರ್ಮ ಯಾವುದೆಂದು ನಿಮಗೆ ಯಾವಾಗ ಗೋಚರಿಸುವುದಿಲ್ಲವೋ ಆಗ ಜಾತ್ಯತೀತ ಭಾವನೆ ಸ್ಥಿರವಾಗಿರುತ್ತದೆ" ಎಂದು ನುಡಿದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.