ಸಂಪಾದಕೀಯ

ಕೃಷ್ಣಯ್ಯರ್ ಮತ್ತವರ ಪ್ರತಿಭೆ

Published On :

ತಿರುಕ್ಕೋಡಿಕಾವಲ್ ಕೃಷ್ಣಯ್ಯರ್ 19ನೇ ಶತಮಾನದ ಆದಿಯಲ್ಲಿದ್ದಂತಹ ಪ್ರಖ್ಯಾತ ಪಿಟೀಲು ವಾದಕರು. ಅವರು ಶಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಚಿಕ್ಕಪ್ಪ. ತಮ್ಮ ತಂದೆ ಕುಪ್ಪುಸ್ವಾಮಿ ಭಾಗವತರಿಂದ ಮೊದಲ ಸಂಗೀತದ ಪಾಠಗಳನ್ನು ಕಲಿತರು.  ಮಹಾವೈದ್ಯನಾಥ ಭಾಗವತರ್, ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಪಕ್ಕವಾದ್ಯ ನುಡಿಸುತ್ತಿದ್ದ ಕೀರ್ತಿ ಅವರದಾಗಿತ್ತು. ಒಮ್ಮೆ ಅನಂತರಾಮ ಭಾಗವತರ ಸಂಗೀತಕ್ಕೆ ಕೃಷ್ಣಯ್ಯರ್ ಪಿಟೀಲು ನುಡಿಸುತ್ತಿದ್ದಾಗ ಪಿಟೀಲಿನ ಒಂದು ತಂತಿ ಹರಿದು ಹೋಯಿತು. ಅದನ್ನು ಬೇಕಂತಲೇ ಅವರಿಗೆ ಅವಮಾನ ಮಾಡಲು ಸ್ವತಃ ಭಾಗವತರೇ ಮಾಡಿದ್ದುದು ಅವರಿಗೆ ತಿಳಿದುಬಂತು. ಎದೆಗುಂದದ ಕೃಷ್ಣಯ್ಯನವರು ತಮ್ಮ ಪಲ್ಲವಿ ನುಡಿಸಲು ಒಂದು ತಂತಿ ಸಾಲದೆ? ಎಂದು ಹೇಳಿ ಅದರಲ್ಲಿಯೇ ಅಮೋಘವಾಗಿ ನುಡಿಸಿದರು. ಇಂತಹ ಮಹಾನ್ ಕಲಾವಿದರು ಯಾರ ಮುಂದೆಯೂ ತಮ್ಮ ಪಿಟೀಲು ವಾದನವನ್ನು ಅಭ್ಯಾಸ ಮಾಡುತ್ತಿರಲಿಲ್ಲ. ಅವರು ಏಕಾಂತದಲ್ಲಿ ನುಡಿಸುವುದನ್ನು ಕದ್ದು ಕೇಳಿ ಸವಿಯಲು ಪ್ರಸಿದ್ಧ ಸಂಗೀತಗಾರರಾಗಿದ್ದ ವಾಸುದೇವಾಚಾರ್ಯರು ಒಂದು ದಿನ ನಿರ್ಧರಿಸಿದರು.
 ಒಂದು ದಿನ ಸದ್ದಿಲ್ಲದೆ ಅವರು ನುಡಿಸುತ್ತಿದ್ದ ಕೊಠಡಿಯ ಹೊರಗೆ ಕಿಟಿಕಿಯ ಬಳಿ ಕುಳಿತರು. ನಾದವಾಹಿನಿ ನಿರಂತರವಾಗಿ ಹರಿದು ಮೈಮರೆಸುವಂತೆ ಮಾಡಿತು. ಅದೆಷ್ಟು ಕಾಲ ಹಾಗೆ ಕುಳಿತಿದ್ದರೋ ಗೊತ್ತಿಲ್ಲ. ಸಮಯ ಸರಿದಿದ್ದೇ ಗೊತ್ತಾಗಲಿಲ್ಲ ವಾಸುದೇವಾಚಾರ್ಯರಿಗೆ. ಒಮ್ಮೆಲೇ ಪಿಟೀಲು ವಾದನ ನಿಂತಾಗಲೇ ಎಚ್ಚರವಾಗಿದ್ದು. ಅಷ್ಟರಲ್ಲಿ ಕಿಟಕಿಯ ಬಾಗಿಲು ತೆಗೆದ ಕೃಷ್ಣಯರ್ ಬಾಯಲ್ಲಿದ್ದ ತಾಂಬೂಲದ ಚರಟವನ್ನು ಹೊರಗೆ ಉಗುಳಿದರು. ಅದು ನೇರವಾಗಿ ಅಲ್ಲಿಯೇ ಕದ್ದು ಕೇಳುತ್ತಿದ್ದ ವಾಸುದೇವಾಚಾರ್ಯರ ತಲೆಯ ಮೇಲೆ ಬಿತ್ತು! ಅದನ್ನು ಗಮನಿಸಿದ ಕೃಷ್ಣಯ್ಯರ್ ಹೊರಬಂದು ತಮ್ಮಿಂದ ತುಂಬಾ ಅಪಚಾರವಾಯಿತು ಎಂದು ಕ್ಷಮೆ ಕೇಳಿದರು. ಅದಕ್ಕೆ ಆಚಾರ್ಯರು ಇದರಿಂದ ತಮಗೆ ಶಾರದಾನುಗ್ರಹವಾಯಿತು, ಅದು ತಮ್ಮ ಪೂರ್ವಜನ್ಮದ ಪುಣ್ಯ ಎಂದು ನುಡಿದರು. ಆಚಾರ್ಯರನ್ನು ಒಳಕ್ಕೆ ಕರೆದೊಯ್ದು, ಉಪಚರಿಸಿ, ಮತ್ತೆ ಅದೇ ಪಲ್ಲವಿಯನ್ನು ನುಡಿಸಿ ಅವರ ಮನಸ್ಸನ್ನು ಸಂತೋಷಪಡಿಸಿದರು. ಅವರು ಎಷ್ಟು ತನ್ಮಯರಾಗಿದ್ದರೆಂದರೆ ಸೂರ್ಯನ ಕಿರಣಗಳು ಅದೇತಾನೆ ಅವರ ಮೇಲೆ ಬಿದ್ದಾಗಲೇ ಅವರಿಗೆ ಎಚ್ಚರವಾದದ್ದು. ಒಂದು ರೀತಿಯ ವಿಶಿಷ್ಟ ಆನಂದದಲ್ಲಿ ಅವರಿಬ್ಬರೂ ಮೈಮರೆತಿದ್ದರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.