ಎಲ್ಲ ಸೈನಿಕರೂ ನನ್ನ ಮಕ್ಕಳೇ
ಜನರಲ್ ಕಾರಿಯಪ್ಪನವರು ಭಾರತೀಯ ಸೈನ್ಯದ ದಂಡನಾಯಕರಾಗಿದ್ದರು. ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ತಮ್ಮ...
ಜನರಲ್ ಕಾರಿಯಪ್ಪನವರು ಭಾರತೀಯ ಸೈನ್ಯದ ದಂಡನಾಯಕರಾಗಿದ್ದರು. ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದ ಕಾರಿಯಪ್ಪನವರು ಶಿಸ್ತಿಗೆ ತುಂಬಾ ಬೆಲೆಕೊಡುತ್ತಿದ್ದರು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನರು ಸ್ವಾತಂತ್ರ್ಯ ಪೂರ್ವದಲ್ಲಿ ಕಾರಿಯಪ್ಪನವರ ಅಡಿಯಲ್ಲಿ ಸೈನ್ಯಾಧಿಕಾರಿಯಾಗಿದ್ದರು. 1953ರಲ್ಲಿ ನಿವೃತ್ತರಾದ ಮೇಲೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ ಭಾರತದ ಹೈಕಮಿಷನರ್ ಆಗಿದ್ದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಂಭವಿಸಿದ ಗಲಭೆ, ಅಶಾಂತಿ ಇವುಗಳನ್ನು ನೋಡಿದ ಕಾರಿಯಪ್ಪನವರು ನಮ್ಮ ಸೈನಿಕರು ಯುದ್ಧಭೂಮಿಯಲ್ಲೇ ಹೆಚ್ಚಿನ ಶಾಂತಿ ಪಡೆಯುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದರು. ನಂತರ ಅವರು ತಮ್ಮ ವಿಶ್ರಾಂತ ಜೀವನವನ್ನು ಕನ್ನಡ ನೆಲದಲ್ಲಿಯೇ ಕಳೆದರು. 1965ರ ಸಮಯ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಘೋರ ಯುದ್ಧವಾಗುತ್ತಿದೆ. ಆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನರಿಗೆ ಹೇಗಾದರೂ ಮಾಡಿ ಭಾರತವನ್ನು ಮಣಿಸಲೇಬೇಕೆಂಬ ಒದ್ದಾಟ. ಆಗ ಭಾರತೀಯ ವಾಯುದಳದಲ್ಲಿ ಕಾರಿಯಪ್ಪನವರ ಪುತ್ರ ಕೆ.ಸಿ.ಕಾರಿಯಪ್ಪ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ನಡೆಸುತ್ತಿದ್ದ ಯುದ್ಧ ವಿಮಾನ ಪಾಕಿಸ್ತಾನದ ಗಡಿದಾಟಿ ಬಾಂಬ್ ಸುರಿಸಲು ಪ್ರಾರಂಭಿಸಿತು. ಆದರೆ ಪಾಕಿಸ್ತಾನ ಸೇನೆಯ ಸೈನ್ಯಾಧಿಕಾರಿ ಮೇಜರ್ ಜನರಲ್ ಜೈದಿ ಕಾರಿಯಪ್ಪನ ಯುದ್ಧವಿಮಾನವನ್ನು ನೆಲಕ್ಕಿಳಿಯುವಂತೆ ಮಾಡಿ, ಕಾರಿಯಪ್ಪನವರನ್ನು ಯುದ್ಧ ಖೈದಿಯನ್ನಾಗಿ ಬಂಧಿಸಿದ್ದ. ಇದನ್ನರಿತ ಜ.ಕಾರಿಯಪ್ಪನವರಿಗೆ ಬೇಕಾಗಿದ್ದ ಅಧಿಕಾರಿಯೋರ್ವರು ಜ.ಕಾರಿಯಪ್ಪನವರಿಗೆ ಸಂದೇಶ ಕಳುಹಿಸಿ, ಅಲ್ಲಿ ಕಾರಿಯಪ್ಪನವರ ಮಗನನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆಯೆಂದೂ, ಅಪೇಕ್ಷೆ ಪಟ್ಟರೆ ಬಿಡುಗಡೆಗೊಳಿಸಿ ಭಾರತಕ್ಕೆ ಹಿಂದಿರುಗಿಸುವುದಾಗಿಯೂ ತಿಳಿಸಿದರು.
ಅದಕ್ಕೆ ಕಾರಿಯಪ್ಪನವರು ನೀಡಿದ ಉತ್ತರ ತುಂಬಾ ಮಾರ್ಮಿಕವೂ, ಅನುಕರಣೀಯವೂ ಆಗಿತ್ತು. " ನಿಮ್ಮ ಸದ್ಭಾವನೆಗೆ ಕೃತಜ್ಞತೆಗಳು. ನೀವು ಎಲ್ಲ ಭಾರತೀಯ ಸೈನಿಕರನ್ನು ಹೇಗೆ ನೋಡಿಕೊಳ್ಳುತ್ತೀರೋ ಅದೇರೀತಿ ನನ್ನ ಮಗನನ್ನೂ ನೋಡಿಕೊಳ್ಳಿ. ಅವನಿಗೆ ವಿಶೇಷ ಸವಲತ್ತುಗಳು ಬೇಡ. ಬೇರೆ ಸೈನಿಕರನ್ನು ಬಿಡುಗಡೆಗೊಳಿಸಿದಾಗಲೇ ಅವನನ್ನೂ ಬಿಡುಗಡೆ ಮಾಡಿ. ಭಾರತೀಯ ಸೈನಿಕರೆಲ್ಲರೂ ನನ್ನ ಮಕ್ಕಳೇ."!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

