ನಿಮ್ಮ ಕೆಲಸವನ್ನೇ ಮಾಡುತ್ತಿದ್ದೇನೆ!
ಆದ್ಯ ರಂಗಾಚಾರ್ಯ ಅವರು ಶ್ರೀರಂಗರೆಂದೇ ಪ್ರಸಿದ್ಧರು. ಅವರ ಮೂಲ ಹೆಸರು ಪ್ರೊ.ಆರ್.ವಿ. ಜಹಗೀರ್ದಾರ್. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರೂ, ಕನ್ನಡದ ಕಟ್ಟಾ ಅಭಿಮಾನಿಗಳು. ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿಗಳಿಗೆ ನೀರೆರೆದು ಅದು ವಿಜೃಂಭಿಸುವಂತೆ ಮಾಡಿದ ಮಹಾಚೇತನ ಶ್ರೀರಂಗರು. ಹಲವಾರು ನಾಟಕಗಳನ್ನು ಬರೆದು ಪ್ರಸಿದ್ಧರಾದವರು. ನರಕದಲ್ಲಿ ನರಹರಿ, ದಾರಿ ಯಾವುದಯ್ಯ ವೈಕುಂಠಕೆ, ಉದರ ವೈರಾಗ್ಯ, ಶೋಕಚಕ್ರ, ಹರಿಜನ್ವಾರ, ಕೇಳು ಜನಮೇಜಯ ಮುಂತಾದ ಹಲವಾರು ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಅವರನ್ನು ಕರ್ನಾಟಕದ ಬನಾರ್ಡ್ ಷಾ ಎಂದು ಕರೆಯುತ್ತಿದ್ದರು. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲ. ತುಂಬಾ ಮೇಧಾವಿಗಳಾಗಿದ್ದ ಅವರು ತಮ್ಮ ನವಿರಾದ ಹಾಸ್ಯದ ಮೂಲಕ ರಂಜಿಸುತ್ತಿದ್ದರು. ತಮ್ಮನ್ನು ಮುಂಬೈಗೆ ವರ್ಗಾಯಿಸಿದ್ದಕ್ಕಾಗಿ ಪ್ರತಿಭಟಿಸಿ, ರಾಜೀನಾಮೆ ನೀಡಿ ನಾಟಕ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಒಮ್ಮೆ ಒಂದು ಚಿಕ್ಕ ಸಂಸ್ಥಾನಿಕರ ಪುತ್ರ ಮೆಟ್ರಿಕ್ ಪರೀಕ್ಷೆಗೆ ಕುಳಿತಿದ್ದ. ಜಹಗೀರ್ದಾರರು ಆಗ ಮುಖ್ಯ ಪರೀಕ್ಷಕರಾಗಿದ್ದರು. ಹುಡುಗ ತುಂಬಾ ದಡ್ಡ. ಪಾಸಾಗುವ ಯಾವ ಸಂಭವವೂ ಇರಲಿಲ್ಲ. ಅವನು ಫೇಲಾದರೆ ತಮಗೆ ಅವಮಾನವಾಗುವುದು ಎಂದು ಭಾವಿಸಿದ ಸಂಸ್ಥಾನಿಕರು ತಮ್ಮ ಕಾರಭಾರಿಯನ್ನು ಜಹಗೀರದಾರರ ಬಳಿ ಕಳಿಸಿ ಮಗನನ್ನು ಮೆಟ್ರಿಕ್ ಪಾಸು ಮಾಡಿಸಿದರೆ ಅದಕ್ಕೆ ತಕ್ಕ ಸಂಭಾವನೆ ಕೊಡುವುದಾಗಿ ಹೇಳಿ ಕಳುಹಿಸಿದರು. ಅದನ್ನು ಕೇಳಿದ ಜಹಗೀರದಾರರು ಒಂದು ಪೆನ್ನು ಮತ್ತು ಹಾಳೆಯನ್ನು ತೆಗೆದುಕೊಂಡು ಲೆಕ್ಕಾಚಾರ ಮಾಡಲು ತೊಡಗಿದರು. ಆಗ ಕಾರಭಾರಿಯವರು ತಾವೇನೋ ಬೇರೆ ಕೆಲಸದಲ್ಲಿ ನಿರತರಾಗಿದ್ದೀರಿ. ಮೊದಲು ತಮ್ಮ ಕೆಲಸ ಮುಗಿಸಿ ನಂತರ ಆ ಕೆಲಸವನ್ನು ಮುಂದುವರೆಸಬಹುದಲ್ಲಾ ಎಂದು ಅಸಹನೆಯಿಂದ ಕೇಳಿದರು. ಅದಕ್ಕೆ ಜಹಗೀರದಾರರು ತಾನು ಅವರ ಕೆಲಸವನ್ನೇ ಮಾಡುತ್ತಿರುವುದಾಗಿಯೂ, ತಾವೇನಾದರೂ ಆ ವಿದ್ಯಾರ್ಥಿಯನ್ನು ಪಾಸುಮಾಡಿದರೆ ಕೆಲಸ ಕಳೆದುಕೊಳ್ಳುವ ಸಂಭವವಿರುವುದರಿಂದ ಮುಂದಿನ ತಮ್ಮ ಸೇವಾವಧಿಯಲ್ಲಿ ಕಳೆದುಕೊಳ್ಳುವ ಮೊತ್ತವೆಷ್ಟು ಎಂಬುದನ್ನು ಲೆಕ್ಕಾಚಾರ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಅಷ್ಟು ಹಣವನ್ನು ಕೊಟ್ಟರೆ ಮಾತ್ರ ತಾನು ಕಾರಭಾರಿಯವರು ಹೇಳಿದ ಕೆಲಸ ಮಾಡಬಹುದು ಎಂದಾಗ ಆ ಕಾರಭಾರಿ ಮರುಮಾತನಾಡದೆ ಜಹಗೀರದಾರರನ್ನು ದುರುಗುಟ್ಟಿ ನೋಡುತ್ತಾ ಅಲ್ಲಿಂದ ಹೊರಟುಹೋದ. ಹೀಗೆ ಅವರು ನಿಷ್ಟುರವಾದಿಯೂ, ನ್ಯಾಯಪಕ್ಷಪಾತಿಯೂ ಆಗಿದ್ದರು. ಸಮಾಜದಲ್ಲಿನ ಕೆಡುಕುಗಳು ಮತ್ತು ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಅವರು ನಾಟಕಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

