ಸಂಪಾದಕೀಯ

ಭವ್ಯವಾದ ಕೋಣೆಗಳು ನನ್ನ ಆಳುಗಳಿಗೆ

Published On :

ಹರ್ಬರ್ಟ್ ಜಾರ್ಜ್ ವೆಲ್ಸ್ ಇಂಗ್ಲೆಂಡಿನ ಪ್ರಸಿದ್ಧ ಸಾಹಿತಿ. ಆತ ಪಾಶ್ಚಾತ್ಯ ಸಾಹಿತ್ಯ ಲೋಕದಲ್ಲಿ ಹೆಚ್.ಜಿ.ವೆಲ್ಸ್ ಎಂದೇ ಪ್ರಸಿದ್ಧ. ದಿ ಟೈಂ ಮಷೀನ್, ಇನ್ವಿಸಿಬಲ್ ಮ್ಯಾನ್, ವಾರ್ ಆಫ್ ವರ್ಡ್ಸ್. ದಿ ಔಟ್ ಲೈನ್ ಆಫ್ ಹಿಸ್ಟರಿ ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಅವನ ತಂದೆತಾಯಿ ತುಂಬಾ ಬಡತನದಿಂದ ಬಂದವರು. ತಂದೆ ತಾಯಿಯರು ಮಗನ ಶ್ರೇಯಸ್ಸಿಗಾಗಿ ತುಂಬಾ ಶ್ರಮಿಸಿದರು. ಅವನ ತಂದೆ ಕ್ರಿಕೆಟ್ ಆಟಗಾರನಾಗಿದ್ದು ಒಂದು ಸಣ್ಣ ಅಂಗಡಿಯ ಮಾಲೀಕನಾಗಿದ್ದ. ತಾಯಿಯಾದರೋ ಒಬ್ಬ ಶ್ರೀಮಂತನ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದಳು. ವಿಜ್ಞಾನ ಪದವೀಧರನಾದ ವೆಲ್ಸ್ ಕೆಲಕಾಲ ಶಿಕ್ಷಕನಾಗಿಯೂ ಸೇವೆ ಸಲ್ಲಿಸಿದ್ದ.
ಆದರೆ ಆತ ಪ್ರಸಿದ್ಧಿ ಪಡೆದದ್ದು ಒಬ್ಬ ಕಥೆಗಾರನಾಗಿ ಮತ್ತು ಕಾದಂಬರಿಕಾರನಾಗಿ. ಚಿಕ್ಕಂದಿನಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದರೂ, ಸಾಹಿತ್ಯ ಲೋಕದಲ್ಲಿ ಅಪಾರ ಹೆಸರು ಮಾಡಿದ್ದೇ ಅಲ್ಲದೆ ಅದರಿಂದ ಸಾಕಷ್ಟು ಹಣ ಸಂಪಾದಿಸಿದ. ಲಂಡನ್ನಿನಲ್ಲಿ ಒಂದು ಭವ್ಯವಾದ ಕಟ್ಟಡವನ್ನೂ ಹೊಂದಿದ್ದ. ರವೀಂದ್ರನಾಥ ಟ್ಯಾಗೂರ್ ಅವರ ಬಗ್ಗೆ ಗೌರವವನ್ನು ಇರಿಸಿಕೊಂಡಿದ್ದ ಅವನು 1930ರಲ್ಲಿ ಜಿನೀವಾದಲ್ಲಿ ಅವರನ್ನು ಭೇಟಿಯಾಗಿ ಸಾಹಿತ್ಯದ ಬಗ್ಗೆ ಚರ್ಚಿಸಿದ್ದ. ಒಮ್ಮೆ ಅಪರೂಪಕ್ಕೆ ಬಂದ ಗೆಳೆಯನಿಗೆ ತನ್ನ ಮನೆಯನ್ನು ತೋರಿಸುತ್ತಿದ್ದ. ಮೂರನೇ ಅಂತಸ್ತಿನಲ್ಲಿದ್ದ ತನ್ನ ಖಾಸಗಿ ಕೋಣೆಗೆ ಕರೆದೊಯ್ದು ತೋರಿಸಿದ. ಅದು ತುಂಬಾ ಸರಳವಾಗಿತ್ತು. ಅತಿ ಕನಿಷ್ಠ ಪೀಠೋಪಕರಣಗಳು ಮತ್ತಿತರ ಕನಿಷ್ಠ ಸೌಲಭ್ಯ ಹೊಂದಿದ್ದ ಒಂದು ಸಣ್ಣ ಕೋಣೆಯಾಗಿತ್ತು.
ಕೆಳಗಿನ ಅಂತಸ್ತಿನಲ್ಲಿದ್ದ ಕೆಲವು ಕೋಣೆಗಳು ಭವ್ಯವಾಗಿದ್ದು ಎಲ್ಲ ಅನುಕೂಲತೆಗಳಿಂದಲೂ ಕೂಡಿದ್ದವು. ಅಚ್ಚರಿಯೆಂದರೆ ಅಲ್ಲಿ ಅಂತಹ ವೈಭವೋಪೇತ ಕೋಣೆಗಳಲ್ಲಿ ಅವನ ಆಳುಗಳು ಮತ್ತು ಅಡಿಗೆಯವರು ವಾಸಿಸುತ್ತಿದ್ದರು. ಅದನ್ನು ನೋಡಿ ವೆಲ್ಸ್‌ನ ಗೆಳೆಯನಿಗೆ ಅಚ್ಚರಿಯೋ ಅಚ್ಚರಿ.
ತಾನು ಅತ್ಯಂತ ಸರಳ ಕೊಠಡಿಯಲ್ಲಿದ್ದು ಅವನ ಕೆಲಸಗಾರರು ಭವ್ಯವಾದ ಕೊಠಡಿಗಳಲ್ಲಿ ವಾಸಮಾಡುತ್ತಿರುವುದನ್ನು ನೋಡಿ ಕೇಳಿದ, ಕೆಳಗಿನ ಅಂತಸ್ತಿನಲ್ಲಿರುವ ಭವ್ಯವಾದ ಕೋಣೆಗಳನ್ನು ಆಳುಕಾಳುಗಳಿಗೆ ಬಿಟ್ಟುಕೊಟ್ಟು, ನೀವು ಮಾತ್ರ ಸರಳವಾದ ಕೊಠಡಿಯಲ್ಲಿ ಅದೂ ಮೇಲಂತಸ್ತಿನಲ್ಲಿ ಮಲಗುವುದರ ಉದ್ದೇಶವೇನು ಎಂದು ಕೇಳಿದ. "ಅದರಲ್ಲಿ ವಿಶೇಷವೇನೂ ಇಲ್ಲ. ನನ್ನ ತಾಯಿ ಒಂದು ಕಾಲದಲ್ಲಿ ಬೇರೊಬ್ಬರ ಮನೆಯಲ್ಲಿ ಆಳಾಗಿ ದುಡಿದು ನನ್ನನ್ನು ಸಾಕಿದ್ದಾಳೆ. ಅವಳಿಗೆ ಗೌರವ ಸಲ್ಲಿಸಲು ನಾನು ಹೀಗೆ ಮಾಡುತ್ತಿದ್ದೇನೆ" ಎಂದ! 


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.