ವೀರಣ್ಣನವರ ಉದಾರತೆ
ಗುಬ್ಬಿ ವೀರಣ್ಣನವರು ನಮ್ಮ ನಾಡಿನ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಅದ್ಭುತ ಕಲಾವಿದ. ತಮ್ಮ ಆರನೇ ವಯಸ್ಸಿಗೇ ಚಂದಣ್ಣನವರ "ಶ್ರೀ ಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ"ಗೆ ಸೇರಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅಕಸ್ಮಾತ್ತಾಗಿ ಸದಾರಮೆ ನಾಟಕದ ಕಳ್ಳನ ಪಾತ್ರಧಾರಿ ಖಾಯಿಲೆ ಬಿದ್ದುದರಿಂದ ಆ ಪಾತ್ರವನ್ನು ಒಮ್ಮೆ ವೀರಣ್ಣನವರು ನಿರ್ವಹಿಸಿದರು. ಅದೆಷ್ಟು ಪ್ರಸಿದ್ಧವಾಯಿತೆಂದರೆ ಜನ ಅವರ ನಟನಾ ಸಾಮರ್ಥ್ಯಕ್ಕೆ ಮಾರುಹೋದರು.
ಅದು ಅವರ ಮುಂದಿನ ನಾಟಕ ಜೀವನದ ದಿಕ್ಸೂಚಿಯಾಯಿತು. ಅವರ ಸದಾರಮೆ, ದಶಾವತಾರ ತುಂಬಾ ಹೆಸರು ಮತ್ತು ಹಣ ಗಳಿಸಲು ನೆರವಾದವು. ನೂರಾರು ಕನ್ನಡ ಕಲಾವಿದರಿಗೆ ಆಶ್ರಯವಿತ್ತು ಸಲಹಿದರು. ಚಲನಚಿತ್ರ ರಂಗಕ್ಕೂ ಕೈಹಾಕಿ ಯಶಸ್ವಿಯಾದರು. ಬಡವರ ಕಾಮಧೇನುವಾಗಿ ಸಹಾಯ ಯಾಚಿಸಿ ಬಂದವರಿಗೆ ಯಥಾಶಕ್ತಿ ಸಹಾಯಮಾಡಿ ನೆರವಾದರು. ಇಂತಹ ಅದ್ಭುತ ನಟ "ಜೀವನ ನಾಟಕ" ಎಂಬ ನಾಟಕಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ ಬೆಂಗಳೂರಿಗೆ ಬಾಲಗಂಧರ್ವರ ಕಂಪನಿ ಸಹ ಬಂದಿತ್ತು. ವೀರಣ್ಣನವರ ಶಿವಾನಂದ ನಾಟಕಶಾಲೆಯಲ್ಲಿ ಆ ಕಂಪನಿ ತನ್ನ ನಾಟಕಗಳನ್ನು ಆಡಲು ಪ್ರಾರಂಭಿಸಿತು.
ಆದರೆ ಅವರ ದುರಾದೃಷ್ಟ. ಪ್ರೇಕ್ಷಕರ ಕೊರತೆಯಿಂದ ಸಾಕಷ್ಟು ಕಲೆಕ್ಷನ್ ಇಲ್ಲದೆ ಸಂಕಷ್ಟಕ್ಕೆ ಗುರಿಯಾದರು. ಅಲ್ಲದೆ ನಾಟಕಶಾಲೆಯ ಬಾಡಿಗೆ ನೀಡಲಾಗದೆ, ಅದು ಒಂದೆಡೆ ಕೆಲವು ಸಾವಿರದವರೆಗೆ ಏರಿತ್ತು. ಕೊನೆಗೆ ಬೆಂಗಳೂರು ಬಿಡಲು ನಿರ್ಧರಿಸಿದರು. ಆದರೆ ಬಾಕಿ ಬಾಡಿಗೆ ನೀಡುವ ತನಕ ನಾಟಕದ ಸೀನರಿಗಳು ಮತ್ತಿತರ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲವೆಂದು ನಾಟಕಶಾಲೆಯ ವ್ಯವಸ್ಥಾಪಕರು ಖಡಾಖಂಡಿತವಾಗಿ ತಿಳಿಸಿದರು. ಬಾಲಗಂಧರ್ವರ ನಾಟಕ ಕಂಪನಿಯ ಹೀನಾಯ ಸ್ಥಿತಿ, ಕಂಪನಿಯನ್ನು ಬೇರೆಡೆಗೆ ಕೊಂಡೊಯ್ಯುವ ಅನಿವಾರ್ಯ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಬಾಲಗಂಧರ್ವರಿಗೆ ಏನು ಮಾಡಲೂ ತೋಚಲಿಲ್ಲ. ಕೊನೆಗೆ ಬಾಲಗಂಧರ್ವರು ಗುಬ್ಬಿ ವೀರಣ್ಣನವರನ್ನು ಭೇಟಿಯಾಗಲು ನಿರ್ಧರಿಸಿದರು.
ವೀರಣ್ಣನವರು ತಮ್ಮ ಕಚೇರಿಯಲ್ಲಿದ್ದ ಸಂದರ್ಭ ನೋಡಿಕೊಂಡು ಹೋದಾಗ ವೀರಣ್ಣನವರು ಅವರನ್ನು ಆದರದಿಂದ ಬರಮಾಡಿಕೊಂಡರು. ಬಾಲಗಂಧರ್ವರ ಕರುಣ ಕಥೆಯನ್ನು ಕೇಳಿ ಮರುಗಿದರು. ಬಾಲಗಂಧರ್ವರು ತಮ್ಮ ನಾಟಕದ ವಸ್ತುಗಳನ್ನು ಕೊಡಿಸಿಕೊಟ್ಟರೆ ಮುಂದಿನ ಕ್ಯಾಂಪ್ನಲ್ಲಿ ನಾಟಕಮಾಡಿ ಸಾಲ ತೀರಿಸುವುದಾಗಿ ವಾಗ್ದಾನ ಮಾಡಿದರು. ಅದನ್ನು ಕೇಳಿದ ವೀರಣ್ಣನವರ ಕಣ್ಣುಗಳು ತೇವಗೊಂಡವು. ಗಂಧರ್ವರ ಕೈಹಿಡಿದು, ತಾವೇನೂ ಕೊಡಬೇಡಿ. ನಿಮ್ಮ ವಸ್ತುಗಳನ್ನು ಧಾರಾಳವಾಗಿ ತೆಗೆದುಕೊಂಡು ಹೋಗಿ. ನಾಟಕ ಕಲೆಗೆ ನೀವು ಮಾಡಿರುವ ಸೇವೆಗೆ ಇಷ್ಟಾದರೂ ಗೌರವ ತೋರಿಸಬೇಡವೆ ಎಂದು ಸೌಜನ್ಯಪೂರ್ವಕವಾಗಿ ಮಾತನಾಡಿ ಬೀಳ್ಕೊಟ್ಟರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

