ಸಂಪಾದಕೀಯ

ಕಣ್ಣು ನೀಡುತ್ತಿರುವ ಶನ್ನೋರಾಣಿ

Published On :

ಅಪಘಾತದಲ್ಲಿಯೋ ಅಥವಾ ದುರಂತದಲ್ಲಿಯೋ ಅಥವಾ ಪಟಾಕಿ ಹೊಡೆಯುವಾಗ ಅಥವಾ ಖಾಯಿಲೆಯಿಂದ ಒಂದು ಕಣ್ಣು ಕಳೆದುಕೊಂಡು, ಒಕ್ಕಣ್ಣರಾಗಿ, ಗೇಲಿಗೊಳಗಾಗುವವರನ್ನು ನಾವು ನೋಡಿದ್ದೇವೆ. ಅಂತಹವರು ಎಲ್ಲರಂತೆ ಇರುವಹಾಗೆ ಮಾಡುವ ಒಂದು ಸಂಸ್ಥೆ ಅಲಿಗಢ್‌ನಲ್ಲಿದೆ. ಅದೇ ಶನ್ನೋರಾಣಿ ಕೃತಕ ಕಣ್ಣು ಕೇಂದ್ರ. ಅದು ಸುಮಾರು ಐವತ್ತು ವರ್ಷಗಳಿಂದ ಕೃತಕ ಕಣ್ಣುಗಳನ್ನು ತಯಾರಿಸಿ ಅದನ್ನು ಇಂಥವರಿಗೆ ಅಳವಡಿಸುತ್ತಿದೆ. ಕೇವಲ ಹಣಗಳಿಕೆಗಾಗಿಯಲ್ಲದೆ, ಸಮಾಜಸೇವೆಗಾಗಿ ಕೆಲಸ ಮಾಡುತ್ತಿರುವುದು ಅದರ ಘನತೆಯನ್ನು ಹೆಚ್ಚಿಸಿದೆ. ಇಂತಹ ಒಂದು ಅಪೂರ್ವ ಸಂಸ್ಥೆಯ ಸ್ಥಾಪಕಿ ಶನ್ನೋರಾಣಿ. ಈಕೆ ಆಗ್ರಾ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 1962ರಲ್ಲಿ ಇಂಗ್ಲೆಂಡಿಗೆ ಹೋದರು. ಅಲ್ಲಿ ಥಿಯೋಡೋರ್ ಇಲಾಮ್ನಿನ್ ಸಂಸ್ಥೆಯಲ್ಲಿ ಸಾಂಪ್ರದಾಯಿಕವಾಗಿ ಕೃತಕ ಕಣ್ಣುತಯಾರಿಕಾ ಕಲೆಯನ್ನು ಕಲಿತರು. ಲಂಡನ್ನಿನ ಪ್ರಖ್ಯಾತ ಕೃತಕ ಕಣ್ಣು ತಜ್ಞ ಲೇಸರ್ ಅವರ ಬಳಿ ಕೆಲಕಾಲ ಸೇವೆ ಸಲ್ಲಿಸಿ ಅನುಭವ ಪಡೆದರು. ನಂತರ ಅಮೆರಿಕದ ಪ್ರಖ್ಯಾತ ಕೃತಕ ಕಣ್ಣು ತಯಾರಿಕಾ ಘಟಕಗಳಿಗೆ ಭೇಟಿನೀಡಿ ಪರಿಣತಿ ಪಡೆದರು. ನಂತರ ಭಾರತಕ್ಕೆ ವಾಪಸಾದ ಶನ್ನೋರಾಣಿ ಅಲಿಗಢದಲ್ಲೊಂದು ಕ್ಲಿನಿಕ್ ಸ್ಥಾಪಿಸಿ ಲಕ್ಷಾಂತರ ಮಂದಿಗೆ ಕೃತಕ ಕಣ್ಣುಗಳನ್ನು ಅಳವಡಿಸಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯಿಂದ ವ್ಯಕ್ತಿಗೆ ಕಣ್ಣಿನ ಕನೀನಿಕೆಯ ಬಣ್ಣ ವ್ಯತ್ಯಾಸವಿರುವುದರಿಂದ ಅದಕ್ಕೆ ಸರಿಹೊಂದುವ ಅಕ್ರಿಲಿಕ್ ಬಣ್ಣವನ್ನು ಬಳಸಿ ಕೃತಕ ಕಣ್ಣನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ ನಯವಾದ ಪ್ಲಾಸ್ಟಿಕ್ ಬಳಸಲಾಗುತ್ತದೆ. ಇವೆಲ್ಲಾ ತುಂಬಾ ಮುತುವರ್ಜಿಯಿಂದ ಮಾಡಬೇಕಾಗುತ್ತದೆ. ಕೃತಕ ಕಣ್ಣುಗುಡ್ಡೆಯನ್ನು ಸಹಜ ಕಣ್ಣಿನಂತೆ ಹೊರಳಿಸಬಹುದು. ನೋಡಿದವರು ಇದು ಕೃತಕ ಕಣ್ಣು ಎಂದು ಗುರುತಿಸುವ ಸಾಧ್ಯತೆ ತುಂಬ ಕಡಿಮೆ. ದೇಶ ವಿದೇಶಗಳಿಂದ ಜನ ಇಲ್ಲಿಗೆ ಬರುತ್ತಿದ್ದಾರೆ. ಸಿನಿಮಾದವರಂತೂ ವಿವಿಧ ಬಗೆಯ ಕಣ್ಣು ತಯಾರಿಸಿಕೊಡಲು ಇವರಿಗೆ ದುಂಬಾಲು ಬೀಳುತ್ತಾರೆ. ಕೃತಕ ಕಣ್ಣುಗಳನ್ನು ಅಳವಡಿಸಿಕೊಂಡವರು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸಹ ಇಲ್ಲಿ ಹೇಳಿಕೊಡಲಾಗುತ್ತದೆ. ಆಗಾಗ್ಗೆ ಹೋಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಅಷ್ಟೆ.  ಇಂತಹ ಕಣ್ಣಿನ ಆಯುಷ್ಯ ಇಪ್ಪತ್ತು ವರ್ಷಗಳು. ನಂತರ ಮತ್ತೆ ಇನ್ನೊಂದು ಕೃತಕ ಕಣ್ಣನ್ನು ಅಳವಡಿಸಿಕೊಂಡರಾಯ್ತು. ಕೃತಕ ಕಣ್ಣನ್ನು ಕೈಗೆಟಕುವ ಬೆಲೆಯಲ್ಲಿಯೇ ಅಳವಡಿಸಲಾಗುವುದರಿಂದ ಬಡವರಿಗೂ ಇದು ಹೊರೆಯಾಗದು. ಇವರ ಪತಿ ಡಾ.ದೇವೇಂದ್ರಕುಮಾರ್‌ಸಹ ಈ ಸಂಸ್ಥೆಯ ಸೇವೆಗೆ ಕೈಜೋಡಿಸಿದ್ದಾರೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.